Cheteshwar Pujara Scores : 75 ಎಸೆತಗಳಲ್ಲಿ ಶತಕ; 8 ಪಂದ್ಯಗಳಲ್ಲಿ 600+ ರನ್; ಏಕದಿನ ಕ್ರಿಕೆಟ್‌ಗೆ ನಾಲಾಯಕ್ ಅಂದವವರಿಗೆ ಖಡಕ್ ಉತ್ತರ

ಲಂಡನ್: (Cheteshwar Pujara Scores) ಟೆಸ್ಟ್ ಸ್ಪೆಷಲಿಸ್ಟ್ ಖ್ಯಾತಿಯ ಚೇತಶ್ವರ್ ಪೂಜಾರ ಏಕದಿನ ಕ್ರಿಕೆಟ್ ಆಡಲು ಲಾಯಕ್ಕಿಲ್ಲ ಎಂಬ ಟೀಕೆ ಎದುರಿಸಿದವರು. ಭಾರತ ಟೆಸ್ಟ್ ತಂಡದ ಆಧಾರಸ್ಥಂಭವಾಗಿರುವ ಪೂಜಾರಗೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್’ನಲ್ಲಿ ಆಡುವ ಅವಕಾಶ ಸಿಕ್ಕಿದ್ದು ಕೇವಲ 5 ಪಂದ್ಯಗಳಲ್ಲಿ ಮಾತ್ರ. ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಬ್ರಾಂಡ್ ಆಗಿರುವ ಪೂಜಾರ ತಮ್ಮನ್ನು ಏಕದಿನ ಕ್ರಿಕೆಟ್’ಗೆ ನಾಲಾಯಕ್ ಅಂತ ಕರೆದವರಿಗೆ ರಾಯಲ್ ಲಂಡನ್ ಕಪ್ ಏಕದಿನ (Royal London One Day Cup) ಟೂರ್ನಿಯಲ್ಲಿ ಮೂರನೇ ಶತಕ ಬಾರಿಸುವ ಮೂಲಕ ಬ್ಯಾಟ್’ನಿಂದ ಉತ್ತರ ಕೊಟ್ಟಿದ್ದಾರೆ.

ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ಸಸ್ಸೆಕ್ಸ್ ತಂಡದ ನಾಯಕತ್ವ ವಹಿಸಿರುವ ಪೂಜಾರ, ಮಿಡ್ಲ್’ಸೆಕ್ಸ್ ತಂಡದ ವಿರುದ್ಧ ಕೇವಲ 75 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಶತಕದ ಇನ್ನಿಂಗ್ಸ್’ನಲ್ಲಿ ಒಟ್ಟು 90 ಎಸೆತಗಳನ್ನು ಎದುರಿಸಿದ ಚೇತೇಶ್ವರ್ ಪೂಜಾರ 20 ಬೌಂಡರಿ ಹಾಗೂ ಎರಡು ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ 132 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಪೂಜಾರ ಶತಕದ ಅಬ್ಬರದಿಂದ ಸಸ್ಸೆಕ್ಸ್ ತಂಡ 50 ಓವರ್’ಗಳಲ್ಲಿ 400 ರನ್ ಕಲೆ ಹಾಕಿ 157 ರನ್’ಗಳಿಂದ ಪಂದ್ಯ ಗೆದ್ದುಕೊಂಡಿದೆ.

ರಾಯಲ್ ಲಂಡನ್ ಕಪ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಪೂಜಾರ ಟೂರ್ನಿಯಲ್ಲಿ 3ನೇ ಬಾರಿ ಶತಕ ಬಾರಿಸಿದ್ದಾರೆ. ಮಿಡ್ಲ್’ಸೆಕ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪೂಜಾರ ಸರ್ರೆ ವಿರುದ್ಧ ಕೇವಲ 131 ಎಸೆತಗಳಲ್ಲಿ 174 ರನ್ ಸಿಡಿಸಿದ್ದರು. ಅದಕ್ಕೂ ಮೊದಲು ವಾರ್ವಿಕ್’ಶೈರ್ ವಿರುದ್ಧದ ಪಂದ್ಯದಲ್ಲಿ 79 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಿಂದ ಪೂಜಾರ 3 ಶತಕಗಳು ಹಾಗೂ 2 ಅರ್ಧಶತಕಗಳ ಸಹಿತ 116.28ರ ಸ್ಟ್ರೈಕ್’ರೇಟ್’ನಲ್ಲಿ 614 ರನ್ ಕಲೆ ಹಾಕಿದ್ದಾರೆ.

ರಾಯಲ್ ಲಂಡನ್ ಕಪ್ ಟೂರ್ನಿಗೂ ಮುನ್ನ ನಡೆದ ಕೌಂಟಿ ಚಾಂಪಿಯನ್’ಷಿಪ್ ಡಿವಿಜನ್-2 ಟೂರ್ನಿಯಲ್ಲೂ (County Championship Division Two 2022) ಚೇತೇಶ್ವರ್ ಪೂಜಾರ ಅಮೋಘ ಪ್ರದರ್ಶನ ತೋರಿದ್ದರು. ಆಡಿದ 8 ಪಂದ್ಯಗಳಲ್ಲಿ 3 ದ್ವಿಶತಕಗಳ ಸಹಿತ 1094 ರನ್ ಕಲೆ ಹಾಕಿದ್ದರು. ಇದರೊಂದಿಗೆ ಪ್ರಸಕ್ತ ಕೌಂಟಿ ಋತುವಿನಲ್ಲಿ ಚೇತೇಶ್ವರ್ ಪೂಜಾರ ಸಸ್ಸೆಕ್ಸ್ ಪರ ಆಡಿದ 16 ಪಂದ್ಯಗಳಿಂದ (ಕೌಂಟಿ ಚಾಂಪಿಯನ್’ಷಿಪ್ ಡಿವಿಜನ್-2+ರಾಯಲ್ ಲಂಡನ್ ಕಪ್) 8 ಶತಕಗಳ ಸಹಿತ 1708 ರನ್ ಗಳಿಸಿದಂತಾಗಿದೆ.

ಇಂಗ್ಲೆಂಡ್ ಕೌಂಟಿ ಕ್ರಿಕೆಟ್-2022: ಚೇತೇಶ್ವರ್ ಪೂಜಾರ ಸಾಧನೆ
ಇನ್ನಿಂಗ್ಸ್: 21
ರನ್: 1708
ಶತಕ: 08 (3 ದ್ವಿಶತಕ)

ಕೌಂಟಿ ಕ್ರಿಕೆಟ್’ನ ಕಳೆದ 21 ಇನ್ನಿಂಗ್ಸ್’ಗಳಲ್ಲಿ (16 ಪಂದ್ಯಗಳು) ಪೂಜಾರ ಗಳಿಸಿರುವ ರನ್
132, 66, 49, 174, 107, 14, 63, 09, 49, 46, 231, 02, 46, 03, 16, 170, 203, 109, 12, 06, 201*

ಕೌಂಟಿ ಚಾಂಪಿಯನ್’ಷಿಪ್ ಡಿವಿಜನ್-2:
ಪಂದ್ಯ: 08, ರನ್: 1094, ಶತಕ: 05, ಸರಾಸರಿ: 109.40

ರಾಯಲ್ ಲಂಡನ್ ಕಪ್ ಏಕದಿನ ಟೂರ್ನಿ:
ಪಂದ್ಯ: 08, ರನ್: 614, ಶತಕ: 03, ಅರ್ಧಶತಕ: 02, ಸರಾಸರಿ: 102.33, ಸ್ಟ್ರೈಕ್’ರೇಟ್: 102.33

ಇದನ್ನೂ ಓದಿ : Asia Cup 2022: ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ದುಬೈಗೆ ಹಾರಿದ ರೋಹಿತ್ ಶರ್ಮಾ ಬಳಗ

ಇದನ್ನೂ ಓದಿ : Asia Cup 2022 Trophy : 6 ಟೀಮ್,1 ಡ್ರೀಮ್, ಏಷ್ಯಾ ಕಪ್ ಟ್ರೋಫಿ ಅನಾವರಣ; ಯಾರಾಗ್ತಾರೆ ಚಾಂಪಿಯನ್..?

Cheteshwar Pujara Scores 75-ball century 600 runs in 8 matches answer to those who do not like ODI cricket

Comments are closed.