IND V/S AUS T-20 : ಟೀಂ ಇಂಡಿಯಾ ಪವರ್ ಶೋ..ಟಿ-20 ಸರಣಿ ಗೆಲುವು

ಹೈದರಾಬಾದ್ :IND V/S AUS T-20 ನಿರ್ಣಾಯಕ ಪಂದ್ಯಂದಲ್ಲಿ ಪವರ್ ಫುಲ್ ಆಟದಮೂಲಕ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯನ್ನ ಟೀಂ ಇಂಡಿಯಾ ಗೆದ್ದು ಬೀಗಿದೆ. ಹೈದ್ರಾಬಾದ್ ನಲ್ಲಿ ನಡೆದ 3ನೇ ಮತ್ತು ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕಿಂಗ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ಭಾರತ 6 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸರಣಿಯನ್ನು 2-1 ಅಂತರದಲ್ಲಿ ಕೈ ವಶ ಮಾಡಿಕೊಂಡಿತು.

ಆಸ್ಟ್ರೇಲಿಯಾ ನೀಡಿದ 186 ರನ್​ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ಕೆಎಲ್​ ರಾಹುಲ್​ ಮತ್ತು ನಾಯಕ ರೋಹಿತ್​ ಶರ್ಮಾರನ್ನು ಬೇಗನೆ ಕಳೆದುಕೊಂಡಿತು. ಬಳಿಕ ಒಂದಾದ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್​ ಅದ್ಭುತ್ ಆಟದಮೂಲಕ ಮುತ್ತಿನ ನಗರಿಯಲ್ಲಿ ಸರಣಿ ಗೆಲುವಿಗೆ ಮುತ್ತಿಕ್ಕಿದ್ರು.

ಸೂರ್ಯ-ವಿರಾಟ್ ಸಿಡಿಲಬ್ಬರದ ಬ್ಯಾಟಿಂಗ್ : ಆಸ್ಟ್ರೇಲಿಯಾ ಬೌಲರ್​ಗಳ ಬೆವರಿಳಿಸಿದ ಇಬ್ಬರು ಆಟಗಾರರು 103 ರನ್​ಗಳ ಜೊತೆಯಾಟವಾಡಿದರು. ಕಳೆದೆರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ವಿರಾಟ್​ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್​ ಬೀಸಿ 33 ನೇ ಅರ್ಧಶತಕ ಸಿಡಿಸಿದರು. 4 ಸಿಕ್ಸರ್​, 3 ಬೌಂಡರಿ ಸಮೇತ ಕೊಹ್ಲಿ 63 ರನ್​ ಗಳಿಸಿದರು. ಭರ್ಜರಿ ಫಾರ್ಮ್​ನಲ್ಲಿರುವ ಸೂರ್ಯಕುಮಾರ್​ ಯಾದವ್​ ಆಸ್ಟ್ರೇಲಿಯಾ ಬೌಲರ್​ಗಳ ಬೆಂಡೆತ್ತಿದರು. 5 ಬೌಂಡರಿ, 5 ಸಿಕ್ಸರ್​ ಸಮೇತ 69 ರನ್​ ಗಳಿಸಿದರು. ಸೂರ್ಯಕುಮಾರ್​ ಔಟಾದ ಬಳಿಕ ಕೊನೆಯಲ್ಲಿ ಸಿಡಿದ ಹಾರ್ದಿಕ್​ ಪಾಂಡ್ಯಾ 25 ರನ್​ ಗಳಿಸಿ ತಂಡವನ್ನು ಗೆಲ್ಲಿಸಿದರು. ಆಸೀಸ್​ ವಿರುದ್ಧದ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು 2-1 ರಲ್ಲಿ ಜಯಿಸಿದರೆ, ನಾಯಕ ರೋಹಿತ್​ ಶರ್ಮಾ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿದರು. ನಾಯಕನಾಗಿ ರೋಹಿತ್​ ಶಮಾ 33 ಗೆಲುವು ಸಾಧಿಸಿದರೆ, ವಿರಾಟ್​ ಕೊಹ್ಲಿ 32 ಪಂದ್ಯಗಳಲ್ಲಿ ಗೆದ್ದಿದ್ದರು. ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ದೋನಿ 42 ಪಂದ್ಯಗಳಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದ್ದಾರೆ. ಆಸೀಸ್​ ಪರವಾಗಿ ಡೇನಿಯಲ್​ ಸ್ಯಾಮ್ಸ್​ 2, ಜೋಶ್​ ಹೇಜಲ್​ವುಡ್​, ಪ್ಯಾಟ್​ ಕಮಿನ್ಸ್​ ತಲಾ 1 ವಿಕೆಟ್​ ಪಡೆದರು.

ಸವಾಲಿನ ಮೊತ್ತ ಕೊಟ್ಟ ಆಸಿಸ್ : ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸೀಸ್​ ಪಡೆ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 186 ರನ್​ಗಳ ಸವಾಲಿನ ಮೊತ್ತ ಗಳಿಸಿತ್ತು. ಅಬ್ಬರದ ಬ್ಯಾಟಿಂಗ್ ಮಾಡಿದ ಆಲ್​ರೌಂಡರ್​ ಕ್ಯಾಮರೂನ್​ ಗ್ರೀನ್​​ 21 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ ಸಮೇತ 52 ರನ್​ ಗಳಿಸಿದರು. ನಾಯಕ ಆ್ಯರೋನ್​ ಫಿಂಚ್​, ಸ್ಟೀವ್​ ಸ್ಮಿತ್​, ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತೊಮ್ಮೆ ವೈಫಲ್ಯ ಕಂಡು ಎರಡಂಕಿ ಮೊತ್ತ ಕೂಡ ದಾಟಲಿಲ್ಲ.

ಮಧ್ಯಮ ಕ್ರಮಾಂಕದಲ್ಲಿ ಜೋಶ್​ ಇಂಗ್ಲಿಸ್​ 24 ರನ್​ ಬಾರಿಸಿದರೆ, ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ್ದ ಮ್ಯಾಥ್ಯೂ ವೇಡ್​ 1 ರನ್​ಗೆ ಸುಸ್ತಾದರು. ಕೊನೆಯಲ್ಲಿ ಸಿಡಿದ ಟಿಮ್​ ಡೇವಿಡ್​ 54 ರನ್​ ಗಳಿಸಿದರು. 2 ಬೌಂಡರಿ, 4 ಸಿಕ್ಸರ್​ ಸಿಡಿಸಿದರು. ಆಲ್​ರೌಂಡರ್​ ಡೇನಿಯಲ್​ ಸ್ಯಾಮ್ಸ್​ 28 ರನ್​ ಬಾರಿಸಿ ತಂಡಕ್ಕೆ ನೆರವಾದರು.

ಇನ್ನು ಗಾಯಗೊಂಡು ಕಳೆದ ಪಂದ್ಯದಲ್ಲಿ ಮತ್ತೆ ಕಣಕ್ಕೆ ಇಳಿದಿರುವ ಯಾರ್ಕರ್​ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬೂಮ್ರಾ ಈ ಪಂದ್ಯದಲ್ಲಿ ದುಬಾರಿಯಾದರು. 4 ಓವರ್​ ಬೌಲ್​ ಮಾಡಿದ ಬೂಮ್ರಾ ಬರೋಬ್ಬರಿ 50 ರನ್​ ಬಿಟ್ಟುಕೊಟ್ಟರು. ಇನ್ನೊಬ್ಬ ಮಂಚೂಣಿ ವೇಗಿ ಭುವನೇಶ್ವರ್​ ಕುಮಾರ್​ 1 ವಿಕೆಟ್​ ಪಡೆದರೂ 39 ರನ್​ ಚಚ್ಚಿಸಿಕೊಂಡರು. ವೇಗಿಗಳು ಸತತ ವೈಫಲ್ಯ ಅನುಭವಿಸುತ್ತಿದ್ದರೂ ಒಂದೆಡೆ ಸ್ಪಿನ್ನರ್​ ಅಕ್ಸರ್​ ಪಟೇಲ್​ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. 33 ರನ್​ ನೀಡಿ 3 ವಿಕೆಟ್​ ಉರುಳಿಸಿ ಆಸೀಸ್​ ಪಡೆಯನ್ನು ಕಾಡಿದರು. ಕಳೆದ ಪಂದ್ಯದಲ್ಲೂ ಪಟೇಲ್​ 2 ವಿಕೆಟ್​ ಪಡೆದಿದ್ದರು. ಇದಲ್ಲದೇ, ಹರ್ಷಲ್​ ಪಟೇಲ್​, ಯಜುವೇಂದ್ರ ಚಹಲ್​ ತಲಾ ಒಂದು ವಿಕೆಟ್​ ಪಡೆದರು.

ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸೂರ್ಯ : ಸೂರ್ಯಕುಮಾರ್ ಯಾದವ್, 2022ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್, ಕೇವಲ 36 ಎಸೆತಗಳಲ್ಲಿ 69 ರನ್‌ ಸಿಡಿಸಿದರು. ಇದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.‌ ಮೂರನೇ ವಿಕೆಟ್‌ಗೆ ಕೊಹ್ಲಿ ಜತೆಗೂಡಿದ ಯಾದವ್‌, 104 ರನ್‌ಗಳ ಅತ್ಯಮೂಲ್ಯ ಜತೆಯಾಟ ನೀಡಿದರು. ಈ ವರ್ಷ ಸೂರ್ಯಕುಮಾರ್ ಯಾದವ್ 20 ಪಂದ್ಯಗಳಲ್ಲಿ 37.88 ಸರಾಸರಿಯಲ್ಲಿ 682 ರನ್ ಗಳಿಸಿದ್ದಾರೆ. ಈ ವರ್ಷದ ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 117. ಇಂಗ್ಲೆಂಡ್‌ ವಿರುದ್ಧ ಅವರು ಶತಕ ಸಿಡಿಸಿ ಮಿಂಚಿದ್ದರು. ಚೇಸಿಂಗ್‌ ವೇಳೆ ಶತಕ ಸಿಡಿಸಿದ್ದ ಸೂರ್ಯ ಗೆಲುವಿನ ಸನಿಹದಲ್ಲಿ ಔಟ್‌ ಆಗಿದ್ದರು. ಸ್ವಲ್ಪದರಲ್ಲೇ ಪಂದ್ಯವನ್ನು ಭಾರತ ಕೈಚೆಲ್ಲಿತ್ತು. ಅವರ ಬ್ಯಾಟ್‌ನಿಂದ ಈ ವರ್ಷ ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳು ಹೊರಬಂದಿವೆ. ಆಕರ್ಷಕ 182.84 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ನನ್ನು ಮೈದಾನದಿಂದ ಹೊರಗಟ್ಟಿದ ಅಜಿಂಕ್ಯ ರಹಾನೆ

IND V/S AUS T-20 Suryakumar Yadav and Virat Kohli power India to a six-wicket win in series decider

Comments are closed.