India Vs Australia 3rd test : ಸ್ಪಿನ್ ಕೋಟೆಯಲ್ಲಿ ಭಾರತಕ್ಕೆ ಶಾಕ್ ಕೊಟ್ಟ ಕಾಂಗರೂಗಳು, ಮೊದಲ ದಿನವೇ 14 ವಿಕೆಟ್ ಪತನ

ಇಂದೋರ್: India Vs Australia 3rd test : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ.ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಂಡ 3ನೇ ಟೆಸ್ಟ್ ಪಂದ್ಯದಲ್ಲಿ (India Vs Australia 3rd test) ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಕಾಂಗರೂಗಳ ಸ್ಪಿನ್ ಬಲೆಯಲ್ಲಿ ಬಿದ್ದ ಭಾರತ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 109 ರನ್’ಗಳಿಗೆ ಆಲೌಟಾಯಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ಮೊದಲ ದಿನದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿದ್ದು, 47 ರನ್’ಗಳ ಅಮೂಲ್ಯ ಮುನ್ನಡೆ ಸಾಧಿಸಿದೆ.

ಭಾರತ Vs ಆಸೀಸ್ ಟೆಸ್ಟ್ ಪಂದ್ಯದ ಮೊದಲ ದಿನ ಒಟ್ಟು 14 ವಿಕೆಟ್’ಗಳು ಪತನಗೊಂಡಿದ್ದು, ಎಲ್ಲಾ 14 ವಿಕೆಟ್’ಗಳೂ ಸ್ಪಿನ್ನರ್’ಗಳ ಪಾಲಾಗಿವೆ. ಕನ್ನಡಿಗ ಕೆ.ಎಲ್ ರಾಹುಲ್ ಬದಲು ನಾಯಕ ರೋಹಿತ್ ಶರ್ಮಾ ಜೊತೆ ಯುವ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರು. ಈ ಜೋಡಿ ಮೊದಲ ವಿಕೆಟ್’ಗೆ 27 ರನ್ ಸೇರಿಸಿ ಬೇರ್ಪಟ್ಟಿತು. ಕ್ಯಾಪ್ಟನ್ ರೋಹಿತ್ 12 ರನ್ ಗಳಿಸಿ ಔಟಾದರೆ, ಶುಭಮನ್ ಗಿಲ್ 21 ರನ್ ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಅನುಭವಿ ಚೇತೇಶ್ವರ್ ಪೂಜಾರ 1 ರನ್ನಿಗೆ ವಿಕೆಟ್ ಒಪ್ಪಿಸಿದ್ರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 22 ರನ್’ಗಳ ಕಾಣಿಕೆಯಿತ್ತರು.

5ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜ 4 ರನ್ ಗಳಿಸಿದ್ರೆ, ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೆಳ ಕ್ರಮಾಂಕಗಳಲ್ಲಿ ವಿಕೆಟ್ ಕೀಪರ್ ಕೆ.ಎಸ್ ಭರತ್ 17, ಅಕ್ಷರ್ ಪಟೇಲ್ 12 ಮತ್ತು ವೇಗಿ ಉಮೇಶ್ ಯಾದವ್ 17 ರನ್ ಗಳಿಸಿದ್ದರಿಂದ ಭಾರತದ ಮೊತ್ತ 100ರ ಗಡಿ ದಾಟುವಂತಾಯಿತು. ಭಾರತದ ಬ್ಯಾಟಿಂಗ್ ಲೈನಪ್’ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಗಳಿಸಿದ 22 ರನ್’ಗಳ ಟಾಪ್ ಸ್ಕೋರ್. ಆಸ್ಟ್ರೇಲಿಯಾ ಪರ ಮಾರಕ ದಾಳಿ ಸಂಘಟಿಸಿದ ಯುವ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ 9 ಓವರ್’ಗಳಲ್ಲಿ 16 ರನ್ನಿತ್ತು 5 ವಿಕೆಟ್ ಕಬಳಿಸಿದರು. ಅನುಭವಿ ಆಫ್’ಸ್ಪಿನ್ನರ್ ನೇಥನ್ ಲಯಾನ್ 35 ರನ್ನಿಗೆ 3 ವಿಕೆಟ್ ಪಡೆದ್ರೆ, ಟಾಡ್ ಮರ್ಫಿ 23 ರನ್ನಿಗೆ 1 ವಿಕೆಟ್ ಉರುಳಿಸಿದರು.

ನಂತರ ತನ್ನ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ ಟ್ರಾವಿಸ್ ಹೆಡ್ (9) ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್’ಗೆ ಉಸ್ಮಾನ್ ಖವಾಜ ಮತ್ತು ಮಾರ್ನಸ್ ಲಬುಶೇನ್ 96 ರನ್ ಸೇರಿಸಿ ಕಾಂಗರೂಗಳನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಸ್ಪಿನ್ನರ್’ಗಳ ಪಾಲಿನ ಸ್ವರ್ಗವಾಗಿದ್ದ ಪಿಚ್’ನಲ್ಲಿ ಮೈಚಳಿ ಬಿಟ್ಟು ಆಡಿದ ಖವಾಜ 60 ರನ್ ಗಳಿಸಿ ಔಟಾದ್ರೆ, ಲಬುಶೇನ್ 31 ರನ್ ಗಳಿಸಿದರು. ದಿನದಂತ್ಯಕ್ಕೆ ಆಸೀಸ್ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದು, ಪೀಟರ್ ಹ್ಯಾಂಡ್ಸ್’ಕಾಂಬ್ (ಅಜೇಯ 7) ಮತ್ತು ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (ಅಜೇಯ 6) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಆಲ್ರೌಂಡರ್ ರವೀಂದ್ರ ಜಡೇಜ (4/63) ಆಸೀಸ್’ನ ನಾಲ್ಕೂ ವಿಕೆಟ್’ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲರೆಡು ಟೆಸ್ಟ್ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಭಾರತ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ.

ಇದನ್ನೂ ಓದಿ : WPLಗೆ ಕೌಂಟ್ ಡೌನ್; ಇಲ್ಲಿದೆ RCB ಮಹಿಳಾ ತಂಡದ ಸಂಭಾವ್ಯ ಪ್ಲೇಯಿಂಗ್ XI, ವೇಳಾಪಟ್ಟಿ, ಕೀ ಪ್ಲೇಯರ್ಸ್ ಡೀಟೇಲ್ಸ್

ಇದನ್ನೂ ಓದಿ : Border-Gavaskar Trophy 3rd Test: ಕಾಂಗರೂಗಳ ಸ್ಪಿನ್ ಬಲೆಗೆ ಬಿದ್ದ ಟೀಮ್ ಇಂಡಿಯಾ 109ಕ್ಕೆ ಆಲೌಟ್

Comments are closed.