India Vs Bangladesh ODI series: ರೋಹಿತ್ ನಾಯಕತ್ವದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಸೋಲಿನ ಅವಮಾನ

ಮೀರ್’ಪುರ: India Vs Bangladesh ODI series : ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಸೋಲಿನ ಅವಮಾನಕ್ಕೀಡಾಗಿದೆ. ಮೀರ್’ಪುರದಲ್ಲಿರುವ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 5 ರನ್’ಗಳ ಸೋಲು ಅನುಭವಿಸಿತು. ಮೊದಲ ಪಂದ್ಯವನ್ನು ಬಾಂಗ್ಲಾ ಗೆದ್ದಿದ್ದ ಕಾರಣ ಈ ಪಂದ್ಯ ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯವಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಸರಣಿ ಸೋಲಿನ ಅವಮಾನಕ್ಕೊಳಗಾಯಿತು.

ಗೆಲ್ಲಲು ಬಾಂಗ್ಲಾ ಒಡ್ಡಿದ 272 ರನ್’ಗಳ ಗುರಿ ಬೆನ್ನಟ್ಟಿದ ಭಾರತ ಪರ ಶಿಖರ್ ಧವನ್ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರು. ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ಎಡಗೈ ಹೆಬ್ಬೆರಳ ಗಾಯಕ್ಕೊಳಗಾದ ಕಾರಣ ಇನ್ನಿಂಗ್ಸ್ ಆರಂಭಿಸಲಿಲ್ಲ. ರೋಹಿತ್ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಕೇವಲ 5 ರನ್ ಗಳಿಸಿ ಔಟಾದ್ರೆ, ಮತ್ತೊಬ್ಬ ಓಪನರ್ ಶಿಖರ್ ಧವನ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಶ್ರೇಯಸ್ ಅಯ್ಯರ್ 82 ರನ್ ಗಳಿಸಿ ಭಾರತಕ್ಕೆ ಚೇತರಿಕೆ ನೀಡಿದರು. ಕೆ.ಎಲ್ ರಾಹುಲ್ ಔಟಾದ ನಂತರ ಅಯ್ಯರ್ ಜೊತೆಗೂಡಿದ ಅಕ್ಷರ್ ಪಟೇಲ್ 56 ಎಸೆತಗಳಲ್ಲಿ 56 ರನ್ ಗಳಿಸಿದ್ದಷ್ಟೇ ಅಲ್ಲದೆ, 5ನೇ ವಿಕೆಟ್’ಗೆ 107 ರನ್’ಗಳ ಜೊತೆಯಾಟವಾಡಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಅಯ್ಯರ್ ಮತ್ತು ಅಕ್ಷರ್ 4 ಓವರ್’ಗಳ ಅಂತರದಲ್ಲಿ ಔಟಾಗುವುದರೊಂದಿಗೆ ಭಾರತದ ಗೆಲುವಿನ ಆಸೆ ಕಮರಿತು. ಗಾಯದ ಮಧ್ಯೆಯೂ 9ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ರೋಹಿತ್ 27 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್’ಗಳ ನೆರವಿನಿಂದ ಅಜೇಯ 51 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನ ಮಾಡಿದರಾದರೂ, ಕೊನೆಯಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಟೀಮ್ ಇಂಡಿಯಾ ವೇಗಿಗಳಾದ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರ ಮಾರಕ ದಾಳಿಗೆ ತತ್ತರಿಸಿ ಆರಂಭಿಕ ಆಘಾತ ಎದುರಿಸಿತು. ವೇಗಿ ಮೊಹಮ್ಮದ್ ಸಿರಾಜ್ (2/73) ಬಾಂಗ್ಲಾ ಆರಂಭಿಕರಿಬ್ಬರನ್ನೂ 39 ರನ್’ಗಳೊಳಗೆ ಪೆವಿಲಿಯನ್’ಗಟ್ಟಿದ್ರೆ, 3ನೇ ಕ್ರಮಾಂಕದ ಆಟಗಾರ ನಜ್ಮುಲ್ ಹೊಸೇನ್ ಶಾಂಥೊ, ಜಮ್ಮು ಎಕ್ಸ್’ಪ್ರೆಸ್ ಉಮ್ರಾನ್ ಮಲಿಕ್ (2/58) ಅವರ 151 ಕಿ.ಮೀ ವೇಗದ ರಾಕೆಟ್ ಎಸೆತಕ್ಕೆ ಕ್ಲೀನ್ ಬೌಲ್ಡಾದರು. ಮಧ್ಯಮ ಕ್ರಮಾಂಕದ ದಾಂಡಿಗರಾದ ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಂ ಮತ್ತು ಅಫೀಫ್ ಹೊಸೇನ್, ಆಫ್’ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (3/37) ದಾಳಿಗೆ ಬಲಿಯಾದರು. ಭಾರತದ ವೇಗ ಮತ್ತು ಸ್ಪಿನ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಕೇವಲ 69 ರನ್ನಿಗೆ 6 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು.

ಆದರೆ 7ನೇ ವಿಕೆಟ್’ಗೆ ಮೆಹದಿ ಹಸನ್ ಮಿರಾಜ್ ಮತ್ತು ಮೆಹ್ಮುದುಲ್ಲಾ 165 ಎಸೆತಗಳಲ್ಲಿ 148 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. 6ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮೆಹ್ಮುದುಲ್ಲಾ 77 ರನ್ ಗಳಿಸಿ ಔಟಾದ್ರೆ, 8ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮೆಹದಿ 83 ಎಸೆತಗಳಲ್ಲಿ ಏಕದಿನ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿದರು. ಅಂತಿಮವಾಗಿ ಬಾಂಗ್ಲಾದೇಶ 50 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು. ಸರಣಿಯ ಮೂರನೇ ಪಂದ್ಯ ಶನಿವಾರ ನಡೆಯಲಿದೆ.

ಇದನ್ನೂ ಓದಿ : Women Umpires in Ranji Trophy : ರಣಜಿ ಟ್ರೋಫಿಗೆ ಮಹಿಳಾ ಅಂಪೈರ್ಸ್, ಬಿಸಿಸಿಐ ಹೊಸ ಪ್ರಯೋಗ

ಇದನ್ನೂ ಓದಿ : Exclusive: Robin Uthappa CSK : ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕನ್ನಡಿಗ ರಾಬನ್ ಉತ್ತಪ್ಪಗೆ ಹೊಸ ಜವಾಬ್ದಾರಿ

India Vs Bangladesh ODI series india Lost Match Series Win By Bangladesh ind vs ban

Comments are closed.