India Vs New Zealand T20 : ಮೂರನೇ ಟಿ20 ಪಂದ್ಯ ರೋಚಕ ಟೈ, ಭಾರತಕ್ಕೆ 1-0 ಸರಣಿ ಜಯ

ನೇಪಿಯರ್ : ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ 3ನೇ ಟಿ20 ಪಂದ್ಯ ರೋಚಕ ಟೈನಲ್ಲಿ (India Vs New Zealand T20) ಅಂತ್ಯಗೊಂಡಿದೆ. ಇದರೊಂದಿಗೆ 3 ಪಂದ್ಯಗಳ ಟಿ20 ಸರಣಿಯನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಮ್ ಇಂಡಿಯಾ 1-0 ಅಂತರದಲ್ಲಿ ಗೆದ್ದುಕೊಂಡಿದೆ.

ನೇಪಿಯರ್’ನ ಮೆಕ್’ಲೀನ್ ಪಾರ್ಕ್ ಮೈದಾನದಲ್ಲಿ ನಡೆದ ಸರಣಿಯ 3ನೇ ಹಾಗೂ ಅಂತಿಮ ಟಿ20 ಪಂದ್ಯ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಿವೀಸ್ ನಿಗದಿತ 19.4 ಓವರ್’ಗಳಲ್ಲಿ 160 ರನ್’ಗಳಿಗೆ ಆಲೌಟಾಯಿತು.ಒಂದು ಹಂತದಲ್ಲಿ 130 ರನ್’ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ನ್ಯೂಜಿಲೆಂಡ್, ಕೊನೆಯ ನಾಲ್ಕು ಓವರ್’ಗಳಲ್ಲಿ ಕೇವಲ 30 ರನ್’ಗಳಿಗೆ 8 ವಿಕೆಟ್ ಕಳೆದುಕೊಂಡಿತು. 44 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಓಪನರ್ ಡೆವೋನ್ ಕಾನ್ವೇ ಮತ್ತು 4ನೇ ಕ್ರಮಾಂಕದ ಆಟಗಾರ ಗ್ಲೆನ್ ಫಿಲಿಪ್ಸ್ 3ನೇ ವಿಕೆಟ್’ಗೆ 63 ಎಸೆತಗಳಲ್ಲಿ 86 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.

ಆದರೆ ಫಿಲಿಪ್ಸ್ ಔಟಾಗುತ್ತಿದ್ದಂತೆ ಕಿವೀಸ್ ಪತನ ಶುರುವಾಯ್ತು. 15.4 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದ್ದ ನ್ಯೂಜಿಲೆಂಡ್ ಮುಂದಿನ 24 ಎಸೆತಗಳಲ್ಲಿ 8 ವಿಕೆಟ್’ಗಳನ್ನು ಕಳೆದುಕೊಂಡಿತು. ಕನಿಷ್ಠ 180ರ ಮೊತ್ತದತ್ತ ಮುನ್ನುಗ್ಗುತ್ತಿದ್ದ ಕಿವೀಸ್ ಪಡೆ, 160 ರನ್’ಗಳಿಗೆ ಕುಸಿಯಿತು. ಭಾರತ ಪರ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ 37 ರನ್ನಿಗೆ 4 ವಿಕೆಟ್ ಪಡೆದ್ರೆ, ಭರ್ಜರಿ ಬೌಲಿಂಗ್ ನಡೆಸಿದ ಮತ್ತೊಬ್ಬ ಯುವ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 4 ಓವರ್’ಗಳಲ್ಲಿ ಕೇವಲ 17 ರನ್ನಿತ್ತು 4 ವಿಕೆಟ್ ಕಬಳಿಸಿದರು.

160 ರನ್’ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ 3 ವಿಕೆಟ್’ಗಳನ್ನು ಕಳೆದುಕೊಂಡಿತು. ಇಶಾನ್ ಕಿಶನ್ 10 ರನ್ ಗಳಿಸಿ ಔಟಾದ್ರೆ, ವಿಕೆಟ್ ಕೀಪರ್ ರಿಷಭ್ ಪಂತ್ 11 ರನ್ ಗಳಿಸಿ ಬೇಜವಾಬ್ದಾರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ರು. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಶ್ರೇಯಸ್ ಅಯ್ಯರ್ ಎದುರಿಸಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದ್ರು. ಮತ್ತೆ ಅಬ್ಬರಿಸುವ ಸೂಚನೆ ನೀಡಿದ ಸೂರ್ಯಕುಮಾರ್ ಆಟ 13 ರನ್ನಿಗೆ ಸೀಮಿತವಾಯ್ತು. ಆಗ ನಾಯಕ ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾಗಿ 18 ಎಸೆತಗಳಲ್ಲಿ 30 ರನ್ ಬಾರಿಸಿ ತಂಡವನ್ನು ಆಧರಿಸಿದರು.

ಭಾರತ 9 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಂಡಿತು. ನಂತರ ಪಂದ್ಯ ಮುಂದುವರಿಯಲು ಮಳೆರಾಯ ಅವಕಾಶ ನೀಡದ ಕಾರಣ ಫಲಿತಾಂಶಕ್ಕಾಗಿ DLS ನಿಯಮದ ಮೊರೆ ಹೋಗಲಾಯ್ತು. DLS ನಿಯಮದ ಪ್ರಕಾರ ಭಾರತ ಗೆಲ್ಲಲು 76 ರನ್ ಗಳಿಸಬೇಕಿತ್ತು. ಆದರೆ 75 ರನ್ ಗಳಿಸಿದ್ದ ಕಾರಣ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.

1-0 ಅಂತರದಿಂದ ಭಾರತ ಸರಣಿ ಗೆದ್ದರೆ, 2ನೇ ಪಂದ್ಯದಲ್ಲಿ ಶತಕದೊಂದಿಗೆ ಅಬ್ಬರಿಸಿದ್ದ ಸೂರ್ಯಕುಮಾರ್ ಯಾದವ್ ಸರಣಿಶ್ರೇಷ್ಠರಾಗಿ ಮೂಡಿ ಬಂದರು. 3ನೇ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ : Sanju Samson missed opportunity: ಸಂಜು ಸ್ಯಾಮ್ಸನ್‌ಗೆ ಮತ್ತೆ ಕೈ ತಪ್ಪಿದ ಅವಕಾಶ; ಬಿಸಿಸಿಐ ವಿರುದ್ಧ ಫ್ಯಾನ್ಸ್ ಗರಂ

ಇದನ್ನೂ ಓದಿ : England Cricket Team : ಪಾಕಿಸ್ತಾನಕ್ಕೆ ಅಡುಗೆ ಭಟ್ಟನನ್ನು ಕರೆದೊಯ್ಯಲಿದೆ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ಟೆಸ್ಟ್ ತಂಡ

ಇದನ್ನೂ ಓದಿ : Vijay Hazare Trophy : ಕೌಶಿಕ್ ಭರ್ಜರಿ ಬೌಲಿಂಗ್, ಕರ್ನಾಟಕಕ್ಕೆ 5ನೇ ಜಯ; ನಾಕೌಟ್ ಹಂತದಲ್ಲಿ ಸ್ಥಾನ ಫಿಕ್ಸ್

ಟಿ20 ಸರಣಿ ಗೆದ್ದಿರುವ ಟೀಮ್ ಇಂಡಿಯಾ ಶುಕ್ರವಾರ (ನವೆಂಬರ್ 25) ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯರನ್ನು ಎದುರಿಸಲಿದೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

India Vs New Zealand T20 : Third T20 match exciting tie, 1-0 series win for India

Comments are closed.