India women beat Australia : ಆಸೀಸ್ ವನಿತೆಯರ ಗರ್ವಭಂಗ.. 45 ಸಾವಿರ ಪ್ರೇಕ್ಷಕರ ಮುಂದೆ ಟೀಮ್ ಇಂಡಿಯಾಗೆ ಸೂಪರ್ ಜಯ

ಮುಂಬೈ: India women beat Australia : ಭಾರತದ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅದು ಐತಿಹಾಸಿಕ ಮತ್ತು ಸ್ಮರಣೀಯ ಪಂದ್ಯ. 45 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವನಿತೆಯರ ಗರ್ವಭಂಗ ಮಾಡಿದ ಟೀಮ್ ಇಂಡಿಯಾ, 2ನೇ ಟಿ20 ಪಂದ್ಯದಲ್ಲಿ ಸೂಪರ್ ಓವರ್’ನಲ್ಲಿ ಸೂಪರ್ ಗೆಲುವು ದಾಖಲಿಸಿದೆ. ಮುಂಬೈನ ಡಿ.ವೈ ಪಾಟೀಲ್ ಮೈದಾನದಲ್ಲಿ ಸೂಪರ್ ಸಂಡೇ ನಡೆದ 5 ಪಂದ್ಯಗಳ ಟಿ20 ಸರಣಿಯ (India Women Vs Australia Women t20 series) 2ನೇ ಪಂದ್ಯ ಹಲವು ರೋಚಕತೆಗಳಿಗೆ ಸಾಕ್ಷಿಯಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ವನಿತೆಯರು ನಿಗದಿತ 20 ಓವರ್’ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ನಾಯಕಿ ಅಲೀಸಾ ಹೀಲಿ 25 ರನ್, ಬೆಥ್ ಮೂನಿ 54 ಎಸೆತಗಳಲ್ಲಿ ಅಜೇಯ 82 ರನ್ ಮತ್ತು ತಹಿಲಾ ಮೆಗ್ರಾತ್ 51 ಎಸೆತಗಳಲ್ಲಿ ಅಜೇಯ 70 ರನ್ ಸಿಡಿಸಿ ಆಸೀಸ್’ನ ಬೃಹತ್ ಮೊತ್ತಕ್ಕೆ ಕಾರಣರಾದರು.

ನಂತರ ಕಠಿಣ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ ಸ್ಮೃತಿ ಮಂಧನ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿ ಪಂದ್ಯವನ್ನು ಟೈ ಮಾಡಿಕೊಂಡಿತು. ಅಬ್ಬರದ ಆಟವಾಡಿದ ಮಂಧನ 49 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 79 ರನ್ ಗಳಿಸಿದ್ರೆ, ಕೊನೇ ಕ್ಷಣದಲ್ಲಿ ಅಬ್ಬರಿಸಿದ ವಿಕೆಟ್ ಕೀಪರ್ ರಿಚಾ ಘೋಷ್ ಕೇವಲ 13 ಎಸೆತಗಳಲ್ಲಿ 3 ಸಿಡಿಲ ಸಿಕ್ಸರ್’ಗಳ ನೆರವಿನಿಂದ ಅಜೇಯ 26 ರನ್ ಸಿಡಿಸಿದರು. ಕೊನೇ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್’ಗಳು ಬೇಕಿದ್ದಾಗ ಬೌಂಡರಿ ಬಾರಿಸಿದ ದೇವಿಕಾ ವೈದ್ಯ ಪಂದ್ಯವನ್ನು ಟೈಗೊಳಿಸಿದರು.

ನಂತರ ಸೂಪರ್ ಓವರ್’ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 6 ಎಸೆತಗಳಲ್ಲಿ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿತು. ಮೊದಲ ಎಸೆತದಲ್ಲೇ ರಿಚಾ ಘೋಷ್ ಸಿಕ್ಸರ್ ಬಾರಿಸಿದರೆ, ಕೊನೆಯ 3 ಎಸೆತಗಳನ್ನೆದುರಿಸಿದ ಸ್ಮೃತಿ ಮಂಧನ ಒಂದು ಬೌಂಡರಿ, ಒಂದು ಸಿಕ್ಸರ್ ಸಹಿತ ಕೇವಲ 3 ಎಸೆತಗಳಲ್ಲಿ 13 ರನ್ ಸಿಡಿಸಿದರು.

ಬಳಿಕ 6 ಎಸೆತಗಳಲ್ಲಿ 21 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 6 ಎಸೆತಗಳಲ್ಲಿ 16 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಈ ವರ್ಷ ಸತತ 16 ಟಿ20 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಆಸೀಸ್ ವನಿತೆಯರ ನಾಗಾಲೋಟಕ್ಕೆ ಬ್ರೇಕ್ ಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ಸರಣಿಯ 3ನೇ ಟಿ20 ಪಂದ್ಯ ಬುಧವಾರ ಬ್ರಬೌರ್ನ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : KL Rahul to lead Team India: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಔಟ್; ಟೀಂ ಇಂಡಿಯಾಗೆ ಕೆ.ಎಲ್. ರಾಹುಲ್ ನಾಯಕ

ಇದನ್ನೂ ಓದಿ : IPL 2023 mini auction : ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ, ಆದ್ರೂ ಐಪಿಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾಗ್ತಾರೆ ಈ ಆಟಗಾರರು

India women beat australia in Super over Ind w vs Aus W series 1-1

Comments are closed.