Narayan Jagadeesan: ಏಕದಿನ ಕ್ರಿಕೆಟ್‌ನಲ್ಲಿ 277 ರನ್ ಚಚ್ಚಿ ವಿಶ್ವದಾಖಲೆ ಬರೆದ ತಮಿಳುನಾಡಿನ ಜಗದೀಶನ್

ಬೆಂಗಳೂರು: ತಮಿಳುನಾಡು ತಂಡದ ಆರಂಭಿಕ ಬ್ಯಾಟ್ಸ್’ಮನ್ ಎನ್.ಜಗದೀಶನ್ (Narayan Jagadeesan ) ಲಿಸ್ಟ್ ’ಎ ’ ಕ್ರಿಕೆಟ್’ನಲ್ಲಿ (50 ಓವರ್’ಗಳ ಪಂದ್ಯ/ಏಕದಿನ ಕ್ರಿಕೆಟ್) 277 ರನ್ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಜಗದೀಶನ್, ಕೇವಲ 141 ಎಸೆತಗಳಲ್ಲಿ 25 ಬೌಂಡರಿ ಹಾಗೂ 15 ಸಿಕ್ಸರ್’ಗಳ ನೆರವಿನಿಂದ 277 ರನ್ ಸಿಡಿಸಿ ಅಬ್ಬರಿಸಿದರು. ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಜಗದೀಶನ್ ಈ ಇನ್ನಿಂಗ್ಸ್ ಆಡಿದರು.

ಇದು ಲಿಸ್ಟ್ ’ಎ’ ಕ್ರಿಕೆಟ್ ಇತಿಹಾಸದಲ್ಲೇ ಆಟಗಾರನೊಬ್ಬ ಒಂದೇ ಇನ್ನಿಂಗ್ಸ್’ನಲ್ಲಿ ಗಳಿಸಿದ ಅತ್ಯಧಿಕ ರನ್. ಈ ಮೂಲಕ ಜಗದೀಶನ್ ಶ್ರೀಲಂಕಾದ ಮಹಿಳಾ ಬ್ಯಾಟರ್ ಶ್ರೀಪಲ್ಲಿ ವೀರಕ್ಕೋಡಿ ಅವರ ವಿಶ್ವದಾಖಲೆಯನ್ನು ಪುಡಿಗಟ್ಟಿದರು. ಶ್ರೀಪಲ್ಲಿ ವೀರಕ್ಕೋಡಿ 2007ರಲ್ಲಿ ಅಜೇಯ 271 ರನ್ ಸಿಡಿಸಿದ್ದರು. ಪುರುಷರ ವಿಭಾಗದಲ್ಲಿ ಈ ವಿಶ್ವದಾಖಲೆ ಇದುವರೆಗೆ ಇಂಗ್ಲೆಂಡ್’ನ ಅಲಿಸ್ಟರ್ ಬ್ರೌನ್ ಹೆಸರಲ್ಲಿತ್ತು. ಬ್ರೌನ್ 2002ರಲ್ಲಿ ನಡೆದ ಕೌಂಟಿ ಪಂದ್ಯದಲ್ಲಿ ಗ್ಲಾಮರ್ಗನ್ ವಿರುದ್ಧ 268 ರನ್ ಗಳಿಸಿದ್ದರು. ಆ ವಿಶ್ವದಾಖಲೆಯನ್ನು ಜಗದೀಶನ್ ಪುಡಿಗಟ್ಟಿದ್ದಾರೆ.

ಜಗದೀಶನ್ ಅವರ ದ್ವಿಶತಕದ ಬಲದಿಂದ ತಮಿಳುನಾಡು ತಂಡ ನಿಗದಿತ 50 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 506 ರನ್ ಕಲೆ ಹಾಕಿತು. ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ ಇದೂ ಕೂಡ ವಿಶ್ವದಾಖಲೆ. ಕಳೆದ ವರ್ಷ ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿದ್ದು ಇದುವರೆಗಿನ ವಿಶ್ವದಾಖಲೆಯಾಗಿತ್ತು. ಆ ವಿಶ್ವದಾಖಲೆಯನ್ನು ಮುರಿದಿರುವ ತಮಿಳುನಾಡು ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ 500 ರನ್ ಕಲೆ ಹಾಕಿದ ಜಗತ್ತಿನ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು.

ಮೊದಲ ವಿಕೆಟ್’ಗೆ ಸಾಯಿ ಸುದರ್ಶನ್ ಜೊತೆ ಜಗದೀಶನ್ 416 ರನ್’ಗಳ ಜೊತೆಯಾಟವಾಡಿದರು. ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ ಇದೂ ಕೂಡ ವಿಶ್ವದಾಖಲೆ. ಈ ಹಿಂದಿನ ವಿಶ್ವದಾಖಲೆ ವೆಸ್ಟ್ ಇಂಡೀಸ್’ನ ಕ್ರಿಸ್ ಗೇಲ್ ಮತ್ತು ಮರ್ಲಾನ್ ಸಾಮ್ಯುಯೆಲ್ಸ್ ಹೆಸರಲ್ಲಿತ್ತು. ಗೇಲ್ ಸಾಮ್ಯುಯೆಲ್ಸ್ ಜೋಡಿ 2015ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ವಿಕೆಟ್’ಗೆ 372 ರನ್’ಗಳ ಜೊತೆಯಾಟವಾಡಿತ್ತು.

ದ್ವಿಶತಕ ವೀರ ಜಗದೀಶನ್ ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ ಸತತ ಐದು ಶತಕಗಳನ್ನು ಬಾರಿಸಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. ಲಿಸ್ಟ್ ’ಎ’ ಕ್ರಿಕೆಟ್’ನಲ್ಲಿ ಸತತ ಐದು ಶತಕಗಳನ್ನು ಬಾರಿಸಿದ ಜಗತ್ತಿನ ಮೊದಲ ಆಟಗಾರನೆಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಒಂದೇ ಪಂದ್ಯದಲ್ಲಿ ದಾಖಲಾದ ವಿಶ್ವದಾಖಲೆಗಳು :

277 ರನ್; ಎನ್.ಜಗದೀಶನ್
ಲಿಸ್ಟ್ ‘ಎ‘ ಕ್ರಿಕೆಟ್ ಪಂದ್ಯದ ಒಂದೇ ಇನ್ನಿಂಗ್ಸ್‘ನಲ್ಲಿ ಅತೀ ಹೆಚ್ಚು ರನ್.
(Hhighest individual score in men’s List A cricket)
506 ರನ್; ತಮಿಳುನಾಡು

ಲಿಸ್ಟ್ ‘ಎ‘ ಕ್ರಿಕೆಟ್ ಪಂದ್ಯದ ಒಂದೇ ಇನ್ನಿಂಗ್ಸ್‘ನಲ್ಲಿ ಅತೀ ಹೆಚ್ಚು ಮೊತ್ತ.
(First team to score 500-plus runs in men’s List A cricket)

416 ರನ್; ಜಗದೀಶನ್/ಸಾಯಿ ಸುದರ್ಶನ್
ಲಿಸ್ಟ್ ‘ಎ‘ ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ವಿಕೆಟ್’ಗೆ ಅತೀ ದೊಡ್ಡ ಜೊತೆಯಾಟ.
(First pair to share a 400-run stand for any wicket in men’s List A cricket)

5 ಶತಕ; ಎನ್.ಜಗದೀಶನ್
ಲಿಸ್ಟ್ ‘ಎ‘ ಕ್ರಿಕೆಟ್’ನಲ್ಲಿ ಸತತ ಐದು ಶತಕಗಳನ್ನು ಬಾರಿಸಿದ ಜಗತ್ತಿನ ಮೊದಲ ಆಟಗಾರ.
(First player to score hundreds in five consecutive innings in men’s List A cricket)

5 ಶತಕ; ಎನ್.ಜಗದೀಶನ್
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಐದು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ.
(Most consecutive hundreds in Vijay Hazare Trophy)

ಇದನ್ನೂ ಓದಿ : India vs New Zeeland T20: ನಾಳೆ 3ನೇ ಟಿ20 ಪಂದ್ಯ, ಭಾರತ ಗೆದ್ದರೆ ಕಿವೀಸ್ ನೆಲದಲ್ಲಿ ಸತತ 2ನೇ ಸರಣಿ ಗೆಲುವು

ಇದನ್ನೂ ಓದಿ : Shut up Virat Kohli : ಕಿಂಗ್ ಕೊಹ್ಲಿಗೆ ಶಟಪ್ ಎಂಬ ಅಭಿಮಾನಿ, ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ !

Narayan Jagadeesan World Record Most consecutive hundreds in a Single Season Vijay Hazare Trophy

Comments are closed.