Sourav Ganguly: ಅವತ್ತು ದ್ರಾವಿಡ್, ಇವತ್ತು ಬಿನ್ನಿ.. ಸೌರವ್ ಗಂಗೂಲಿ ಪಟ್ಟಕ್ಕೆ ಲಗ್ಗೆ ಇಟ್ಟ ಕನ್ನಡಿಗರು

ಬೆಂಗಳೂರು: (Sourav Ganguly) ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಿಂದ ಹೊರ ಬಿದ್ದಿದ್ದಾರೆ. ಮತ್ತೊಂದು ಅವಧಿಗೆ ಬಿಸಿಸಿಐ (BCCI) ಅಧ್ಯಕ್ಷರಾಗಲು ಬಯಸಿದ್ದ ಗಂಗೂಲಿಯವರಿಗೆ (Sourav Ganguly) ಆ ಅವಕಾಶ ನೀಡದೆ ಗೇಟ್ ಪಾಸ್ ನೀಡಲಾಗಿದೆ. ಬಿಸಿಸಿಐನ ಹೊಸ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಾಲಿ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಕಾರ್ಯದರ್ಶಿ ಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ (Jay Shah) ಅವರೇ ಮುಂದುವರಿಯಲಿದ್ದಾರೆ.

ಬಿಸಿಸಿಐನಲ್ಲಿ ಸೌರವ್ ಗಂಗೂಲಿ ಸ್ಥಾನಕ್ಕೆ ಕರ್ನಾಟಕದ ರೋಜರ್ ಬಿನ್ನಿ ಬರುವುದು ಖಚಿತವಾಗುತ್ತಿದ್ದಂತೆ ಹಳೇ ಘಟನೆಯೊಂದು ನೆನಪಾಗುತ್ತಿದೆ. 2005ರಲ್ಲಿ ಸೌರವ್ ಗಂಗೂಲಿಯವರನ್ನು ಭಾರತ ಕ್ರಿಕೆಟ್ ತಂಡದ ನಾಯಕನ ಪಟ್ಟದಿಂದ ಕೆಳಗಿಳಿಸಲಾಗಿತ್ತು. ಆಗಿನ ಕೋಚ್ ಗ್ರೆಗ್ ಚಾಪೆಲ್ ಜೊತೆಗಿನ ಕಿತ್ತಾಟದ ಪರಿಣಾಮ ಗಂಗೂಲಿ ಟೀಮ್ ಇಂಡಿಯಾ ನಾಯಕತ್ವ ಕಳೆದುಕೊಂಡಿದ್ದರು. ಆಗ ಗಂಗೂಲಿ ಸ್ಥಾನದಲ್ಲಿ ಕರ್ನಾಟಕದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ (Rahul David) ಅವರನ್ನು ಭಾರತ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ನಂತರ ಕೆಲ ತಿಂಗಳುಗಳ ಕಾಲ ಭಾರತ ತಂಡದಿಂದ ಹೊರ ಬಿದ್ದಿದ್ದ ಗಂಗೂಲಿ ಬಳಿಕ ತಂಡಕ್ಕೆ ಮರಳಿ ದ್ರಾವಿಡ್ ನಾಯಕತ್ವದಲ್ಲಿ ಆಡಿದ್ದರು.

ಕಾಕತಾಳೀಯವೋ ಏನೋ ಗೊತ್ತಿಲ್ಲ. ಈಗ ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಕಳೆದುಕೊಳ್ಳುತ್ತಿರುವ ಸೌರವ್ ಗಂಗೂಲಿಯವರ ಜಾಗಕ್ಕೆ ಬರುತ್ತಿರುವುದು ಕರ್ನಾಟಕದ ಮತ್ತೊಬ್ಬ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ. ಬಿಸಿಸಿಐ ಅಧ್ಯಕ್ಷರಾಗಿ ಬಿನ್ನಿ ಪಟ್ಟಾಭಿಷೇಕ ಪಕ್ಕಾ ಆಗಿದೆ. ಅವತ್ತು ಗಂಗೂಲಿ ಟೀಮ್ ಇಂಡಿಯಾ ನಾಯಕತ್ವ ಕಳೆದುಕೊಂಡಾಗ ಕರ್ನಾಟಕದ ದ್ರಾವಿಡ್ ಕ್ಯಾಪ್ಟನ್ ಆಗಿ ಆಯ್ಕೆಯಾದ್ರೆ, ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ಆ ಸ್ಥಾನಕ್ಕೆ ಕರ್ನಾಟಕದ ರೋಜರ್ ಬಿನ್ನಿ ಬಂದು ಕೂತಿದ್ದಾರೆ.

2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೌರವ್ ಗಂಗೂಲಿ, ಮತ್ತೊಂದು ಅವಧಿಗೆ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಬಿಸಿಸಿಐ ಪದಾಧಿಕಾರಿಗಳಿಗೆ ಗಂಗೂಲಿ ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಇಷ್ಟವಿರಲಿಲ್ಲ. ಬಿಸಿಸಿಐ ಅಧ್ಯಕ್ಷ ಸ್ಥಾನದ ಬದಲಾಗಿ ಗಂಗೂಲಿಗೆ ಐಪಿಎಲ್ ಮುಖ್ಯಸ್ಥನ ಸ್ಥಾನವನ್ನು ನೀಡುವ ಆಫರ್ ನೀಡಲಾಗಿತ್ತು. ಆದರೆ ಇದನ್ನು ಗಂಗೂಲಿ ಒಪ್ಪಿಕೊಂಡಿಲ್ಲ. ಇದರೊಂದಿಗೆ ಗಂಗೂಲಿ ಬಿಸಿಸಿಐನಿಂದ ಸಂಪೂರ್ಣವಾಗಿ ಹೊರ ಬಿದ್ದಿದ್ದಾರೆ.

Rahul Dravid and Roger Binny two Kannadig’s who took Sourav Ganguly place

Comments are closed.