Ravindra Jadeja CSK Captain : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರವೀಂದ್ರ ಜಡೇಜಾ ನಾಯಕ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಗಳು ಈಗಾಗಲೇ 15 ನೇ ಆವೃತ್ತಿಗಾಗಿ ಸಿದ್ದತೆ ನಡೆಸುತ್ತಿವೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಭಾರೀ ಬದಲಾವಣೆ ನಡೆಯಲಿದೆ. ಈಗಾಗಲೇ ತಂಡ ರಿಟೈನ್‌ ಆಟಗಾರರ ಪಟ್ಟಿಯನ್ನು ಘೋಷಣೆ ಮಾಡಿದೆ. ಧೋನಿ ಮುಂದಿನ ಐಪಿಎಲ್‌ನಲ್ಲಿ ಚೆನ್ನೈ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಆಲ್ ರೌಂಡರ್ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022ಕ್ಕೆ (Ravindra Jadeja CSK Captain) ನೂತನ ನಾಯಕನಾಗಲಿದ್ದಾರೆ.

ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ನಿಂದ ದೂರವಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಧೋನಿ ಚೆನ್ನೈ ಪರ ಆಡುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಐಪಿಎಲ್ 2022 ರಲ್ಲಿ ರವೀಂದ್ರ ಜಡೇಜಾ ಚೆನ್ನೈ ತಂಡದ ನಾಯಕನಾಗಲಿದ್ದಾರೆ ಅನ್ನೋ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದ್ರಲ್ಲೂ ಮಹೇಂದ್ರ ಸಿಂಗ್‌ ಧೋನಿ ಅವರೇ ಖುದ್ದು ನಾಯಕತ್ವವನ್ನು ಜಡೇಜಾಗೆ ಹಸ್ತಾಂತರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೊಸ ಒಪ್ಪಂದದ ಪ್ರಕಾರ ಧೋನಿ ಮೂರು ವರ್ಷಗಳ ಕಾಲ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಲಿದ್ದಾರೆ. ಆದರೆ 40 ವರ್ಷದ ಧೋನಿ ಹೊಸ ನಾಯಕನನ್ನು ಸಜ್ಜುಗೊಳಿಸಲು ಸಜ್ಜಾಗಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿಯೇ ಮಹೇಂದ್ರ ಸಿಂಗ್‌ ಧೋನಿ ಯಶಸ್ವಿ ನಾಯಕ ಅನಿಸಿಕೊಂಡಿದ್ದಾರೆ. 2010, 2011, 2018, 2021 ಸೇರಿದಂತೆ ಒಟ್ಟು ನಾಲ್ಕು ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಗೆಲುವು ಕಂಡಿದೆ. 2008, 20012, 2015, 2019 ಸೇರಿದಂತೆ ಒಟ್ಟು ನಾಲ್ಕು ಬಾರಿ ರನ್ನರ್ಸ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿದೆ. ೧೪ ಐಪಿಎಲ್‌ ಆವೃತ್ತಿಯ ಪೈಕಿ ಎಂಟು ಬಾರಿ ಫೈನಲ್‌ ಪ್ರವೇಶಿಸಿದ ತಂಡ ಅನ್ನೋ ಖ್ಯಾತಿ ಚೆನ್ನೈ ಸೂಪರ್ ಕಿಂಗ್ಸ್‌ ಪಡೆದುಕೊಂಡಿದೆ. ಈ ಸಾಧನೆಯ ಹಿಂದಿನ ಶಕ್ತಿಯೇ ನಾಯಕ ಮಹೇಂದ್ರ ಸಿಂಗ್‌ ಧೋನಿ.

ಭಾರತ ತಂಡ ನಾಯಕನಾಗಿ ಮಹೇಂದ್ರ ಸಿಂಗ್‌ ಧೋನಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಎರಡು ವಿಶ್ವಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತದ ಮುಡಿಗೇರಿಸಿದ್ದ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿದ್ದರು. ಆದ್ರೂ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿ ಮುಂದುವರಿದಿದ್ದಾರೆ. ಆದರೆ ಈ ಬಾರಿ ಧೋನಿ ನಾಯಕತ್ವದಿಂದ ಕೆಳಗಿಳಿಯಲಿದ್ದು, ತನ್ನ ಉತ್ತರಾಧಿಕಾರಿಯನ್ನು ಬೆಳೆಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೆಗಾ ಹರಾಜಿಗೂ ಮುನ್ನ ಎಂಎಸ್ ಧೋನಿ, ರವೀಂದ್ರ ಜಡೇಜಾ ಮತ್ತು ರಿತುರಾಜ್ ಗಾಯಕ್ವಾಡ್ ಹಾಗೂ ವಿದೇಶಿ ಆಟಗಾರ ಖೋಟಾದಲ್ಲಿ ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ರಾಜಸ್ಥಾನ ತಂಡದ ಪರ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ರವೀಂದ್ರ ಜಡೇಜಾ 2015 ರ ಋತುವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುತ್ತಿದ್ದಾರೆ.

ರವೀಂದ್ರ ಜಡೇಜಾ ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 200 ಪಂದ್ಯಗಳನ್ನು ಆಡಿದ್ದು 2386 ರನ್‌ ಬಾರಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸಿಡಿಸಿದ್ದು, ಅತ್ಯಧಿಕ 62 ಗಳಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿಯೂ ಜಡೇಜಾ ಮಿಂಚು ಹರಿಸಿದ್ದಾರೆ. ಆಡಿದ 200 ಪಂದ್ಯಗಳ ಪೈಕಿ 127 ವಿಕೆಟ್‌ ಪಡೆದುಕೊಂಡಿದ್ದಾರೆ. 16 ರನ್‌ ನೀಡಿ 5 ವಿಕೆಟ್‌ ಪಡೆಯುವ ಮೂಲಕ ವಿಶಿಷ್ಟ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೇ 3 ಬಾರಿ ನಾಲ್ಕು ವಿಕೆಟ್‌ ಹಾಗೂ 1 ಬಾರಿ ಐದು ವಿಕೆಟ್‌ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿಯೇ ಟಾಪ್‌ ಆಲ್‌ರೌಂಡರ್‌ ಪಟ್ಟಿಯಲ್ಲಿ ಜಡೇಜಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಪಾಂಡ್ಯ ಅಹಮದಾಬಾದ್, IPL 2022ಯಲ್ಲಿ ಈ ತಂಡವನ್ನು ಮುನ್ನಡೆಸುತ್ತಾರೆ ಶ್ರೇಯಸ್ ಅಯ್ಯರ್

ಇದನ್ನೂ ಓದಿ : ಭಾರತ ಟೆಸ್ಟ್‌ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕ

( Ravindra Jadeja CSK new captain for IPL 2022)

Comments are closed.