Shukla Vs Tiwary : ಬಂಗಾಳ ಕ್ರಿಕೆಟ್ ತಂಡಕ್ಕೆ ಮಾಜಿ ಕ್ರೀಡಾ ಸಚಿವ ಕೋಚ್, ಹಾಲಿ ಕ್ರೀಡಾ ಸಚಿವ ಆಟಗಾರ

ಕೋಲ್ಕತಾ: (Shukla Vs Tiwary) ಬಂಗಾಳ ಕ್ರಿಕೆಟ್ ತಂಡದಲ್ಲೊಂದು ಅಪರೂಪದ ಸಂಗಮ. ಬಂಗಾಳ ತಂಡಕ್ಕೆ ಮಾಜಿ ಕ್ರೀಡಾ ಸಚಿವ ಕೋಚ್. ಹಾಲಿ ಕ್ರೀಡಾ ಸಚಿವ ಆಟಗಾರ. ಪಶ್ಚಿಮ ಬಂಗಾಳದ ಸರ್ಕಾರದ ಮಾಜಿ ಕ್ರೀಡಾ ಸಚಿವ ಲಕ್ಷ್ಮೀರತನ್ ಶುಕ್ಲಾ (Laxmi Ratan Shukla) ಬಂಗಾಳ ಸೀನಿಯರ್ ಕ್ರಿಕೆಟ್ ತಂಡದ ಕೋಚ್ ಆದ್ರೆ, ಬಂಗಾಳ ಸರ್ಕಾರದ ಹಾಲಿ ಕ್ರೀಡಾ ಸಚಿವ ಮನೋಜ್ ತಿವಾರಿ (Manoj Tiwary) ಆಟಗಾರ. 41 ವರ್ಷದ ಮಾಜಿ ಆಲ್ರೌಂಡರ್ ಶುಕ್ಲಾ ಅವರನ್ನು ಇತ್ತೀಚೆಗೆ ಬಂಗಾಳ ಕ್ರಿಕೆಟ್ ತಂಡದ (Bengal Cricket Team) ಪ್ರಧಾನ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ಬಂಗಾಳ ಪರ ಆಡುತ್ತಿರುವ 36 ವರ್ಷದ ಮನೋಜ್ ತಿವಾರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಬಾ ಚುನಾವಣೆಯಲ್ಲಿ ಶಿಬ್’ಪುರ್ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿ (TMC) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನೋಜ್ ತಿವಾರಿ, ಭರ್ಜರಿ ಗೆಲುವು ದಾಖಲಿಸಿ ಟಿಎಂಸಿ 3.0 ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ನೇಮಕಗೊಂಡಿದ್ದರು.

ಮಮತಾ ಬ್ಯಾನರ್ಜಿಯವರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಲಕ್ಷ್ಮೀರತನ್ ಶುಕ್ಲಾ ಕಳೆದ ವರ್ಷ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2016ರ ಚುನಾವಣೆಯಲ್ಲಿ ಕೋಲ್ಕತಾದ ಹೌರಾ ವಿಧಾನಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದ ಶುಕ್ಲಾ, 2021ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಕ್ರಿಕೆಟ್’ನಿಂದ ನಿವೃತ್ತಿಯಾದ ನಂತರ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದ ಲಕ್ಷ್ಮೀರತನ್ ಶುಕ್ಲಾ, ಐದೇ ವರ್ಷಗಳಲ್ಲಿ ರಾಜಕೀಯಕ್ಕೆ ಗುಡ್ ಬೈ ಹೇಳಿ ಕೋಚಿಂಗ್ ಮೂಲಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿದ್ದಾರೆ.

ಬಂಗಾಳ ಕ್ರಿಕೆಟ್’ನ ಸ್ಟಾರ್ ಆಲ್ರೌಂಡರ್ ಆಗಿದ್ದ ಲಕ್ಷ್ಮೀರತನ್ ಶುಕ್ಲಾ ಬಂಗಾಳ ಪರ 141 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 6,219 ರನ್ ಮತ್ತು 172 ವಿಕೆಟ್’ಗಳನ್ನು ಪಡೆದಿದ್ದಾರೆ. ಬಂಗಾಳದ ಹುಲಿ ಸೌರವ್ ಗಂಗೂಲಿ ನಾಯಕರಾಗಿದ್ದಾಗ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಶುಕ್ಲಾ, 3 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

ಇದನ್ನೂ ಓದಿ : Ishan Kishan : ರಾಷ್ಟ್ರಗೀತೆ ಹಾಡುತ್ತಿದ್ದ ಇಶಾನ್ ಕಿಶನ್‌ಗೆ ನೊಣದ ಕಾಟ, “ಈಗ”ಕ್ಕೆ ಬೆಚ್ಚಿ ಬಿದ್ದ ವಿಕೆಟ್ ಕೀಪರ್

ಇದನ್ನೂ ಓದಿ : India Women Cricket Team: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ, ಹರ್ಮನ್ ಪ್ರೀತ್ ಕೌರ್ ಸಾರಥ್ಯ

Shukla Vs Tiwary Former sports minister Laxmi Ratan Shukla coach Current sports minister Manoj Tiwary player for Bengal cricket team

Comments are closed.