Syed Mushtaq Ali T20 : ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು

ಕೋಲ್ಕತಾ: Karnataka vs Punjab: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲುವ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಸತತ 3ನೇ ವರ್ಷವೂ ನುಚ್ಚು ನೂರಾಗಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ, ಪಂಜಾಬ್ ವಿರುದ್ಧ9 ರನ್’ಗಳ ವೀರೋಚಿತ ಸೋಲು ಅನುಭವಿಸಿತು.

ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಾಯಕ ಮಯಾಂಕ್ ನಿರ್ಧಾರ ತಂಡಕ್ಕೆ ಮುಳುವಾಯಿತು. ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಇನ್ನಿಂಗ್ಸ್’ನ 2ನೇ ಓವರ್’ನಲ್ಲೇ ಅಭಿಷೇಕ್ ಶರ್ಮಾ (4) ವಿಕೆಟ್ ಕಳೆದುಕೊಂಡರೂ, ಮತ್ತೊಬ್ಬ ಓಪನರ್ ಶುಭಮನ್ ಗಿಲ್ ಕರ್ನಾಟಕದ ಬೌಲರ್’ಗಳನ್ನು ಬೆಂಡೆತ್ತಿದರು.

ಈಡನ್ ಗಾರ್ಡನ್ಸ್’ನಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಶುಭಮನ್ ಗಿಲ್ ತಮ್ಮ ಟಿ20 ವೃತ್ತಿಜೀವನದ ಚೊಚ್ಚಲ ಶತಕದೊಂದಿಗೆ ಅಬ್ಬರಿಸಿದರು. ಕೇವಲ 55 ಎಸೆತಗಳಲ್ಲಿ 11 ಬೌಂಡರಿ ಮತ್ತು 9 ಸಿಡಿಲ ಸಿಕ್ಸರ್’ಗಳೊಂದಿಗೆ ಆರ್ಭಟಿಸಿದ 23 ವರ್ಷದ ಗಿಲ್ ಭರ್ಜರಿ 126 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಅನ್ಮೋಲ್ ಪ್ರೀತ್ ಸಿಂಗ್ 43 ಎಸೆತಗಳಲ್ಲಿ 59 ರನ್ ಗಳಿಸಿದರು. ಪಂಜಾಬ್ 10 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಜೊತೆಯಾದ ಶುಭಮನ್ ಗಿಲ್ ಮತ್ತು ಅನ್ಮೋಲ್ ಪ್ರೀತ್ ಸಿಂಗ್ ಜೋಡಿ 3ನೇ ವಿಕೆಟ್’ಗೆ 151 ರನ್’ಗಳ ಜೊತೆಯವಾಟವಾಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಅಂತಿಮವಾಗಿ ಪಂಜಾಬ್ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಕಲೆ ಹಾಕಿತು.

ಬೆಟ್ಟದಂತಹ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ 3 ಓವರ್ ಮುಗಿಯುವಷ್ಟರಲ್ಲಿ ನಾಯಕ ಮಯಾಂಕ್ ಅಗರ್ವಾಲ್ (8), ಕರ್ನಾಟಕ ಪರ ಮೊದಲ ಟಿ20 ಪಂದ್ಯವಾಡಿದ ರೋಹನ್ ಪಾಟೀಲ್ (2) ಮತ್ತು ವಿಕೆಟ್ ಕೀಪರ್ ಲವನೀತ್ ಸಿಸೋಡಿಯಾ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಎಲ್.ಆರ್ ಚೇತನ್ 33 ರನ್ ಹಾಗೂ ಮಾಜಿ ನಾಯಕ ಮನೀಶ್ ಪಾಂಡೆ 29 ಎಸೆತಗಳಲ್ಲಿ 45 ರನ್ ಸಿಡಿಸಿ ಪ್ರತಿರೋಧ ಒಡ್ಡಿದರೂ, 100 ರನ್’ಗಳ ಒಳಗೆ ಇಬ್ಬರೂ ಔಟಾಗುತ್ತಿದ್ದಂತೆ ಕರ್ನಾಟಕ ತಂಡದ ಗೆಲುವಿನ ಕನಸು ಕಮರಿತು.

ಕೊನೆಯ ಏಳು ಓವರ್’ಗಳಲ್ಲಿ ಕರ್ನಾಟಕ ಗೆಲುವಿಗೆ 121 ರನ್’ಗಳ ಅವಶ್ಯಕತೆಯಿದ್ದಾಗ ಕೆಳ ಮಧ್ಯಮ ಕ್ರಮಾಂಕದ ಆಟಗಾರರು ಸಿಡಿದು ನಿಂತರು. ಅಭಿನವ್ ಮನೋಹರ್ 29 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್’ಗಳ ಸಹಿತ ಅಜೇಯ 62 ರನ್, ಮನೋಜ್ ಭಾಂಡಗೆ 9 ಎಸೆತಗಳಲ್ಲಿ 25 ರನ್ ಹಾಗೂ ಕೃಷ್ಣಪ್ಪ ಗೌತಮ್ 14 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಲಷ್ಟೇ ಶಕ್ತವಾದ ಕರ್ನಾಟಕ 9 ರನ್’ಗಳ ವೀರೋಚಿತ ಸೋಲು ಅನುಭವಿಸಿತು.

ಇದನ್ನೂ ಓದಿ : India Vs Bangladesh: ನಾಳೆ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ ನಿರ್ಣಾಯಕ ಪಂದ್ಯ, ಕೆ.ಎಲ್ ರಾಹುಲ್‌ಗೆ ಲಾಸ್ಟ್ ಚಾನ್ಸ್ ?

ಇದನ್ನೂ ಓದಿ : Sehwag criticized Dinesh Karthik: “ಇದೇನು ಬೆಂಗಳೂರು ಪಿಚ್ ಅಲ್ಲ”, ದಿನೇಶ್ ಕಾರ್ತಿಕ್ ವಿರುದ್ಧ ಸೆಹ್ವಾಗ್ ಈ ರೀತಿ ಗುಡುಗಿದ್ದೇಕೆ ?

Syed Mushtaq Ali T20 Historic defeat for Karnataka vs Punjab in the quarter finals

Comments are closed.