T20 World Cup: ಶ್ರೀಲಂಕಾ ವಿರುದ್ಧ ಗೆದ್ದ ಇಂಗ್ಲೆಂಡ್ ಸೆಮೀಸ್‌ಗೆ, ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕಿಕೌಟ್

ಸಿಡ್ನಿ: (England beat Sri Lanka) ಗ್ರೂಪ್-1ರ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 4 ವಿಕೆಟ್’ಗಳ ಗೆಲುವು ಸಾಧಿಸಿದ ಇಂಗ್ಲೆಂಡ್, ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆಲುವುದರೊಂದಿಗೆ ಟಿ20 ವಿಶ್ವಕಪ್ ಟೂರ್ನಿಯಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹೊರ ಬಿದ್ದಿದೆ. ಶನಿವಾರ ನಡೆದ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್ ಆಡಿದ 5 ಪಂದ್ಯಗಳಿಂದ 7 ಅಂಕ ಕಲೆ ಹಾಕಿ ಗ್ರೂಪ್-1ರಿಂದ 2ನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಇದಕ್ಕೂ ಮೊದಲು 5 ಪಂದ್ಯಗಳಿಂದ 7 ಅಂಕ ಗಳಿಸಿದ್ದ ನ್ಯೂಜಿಲೆಂಡ್ ಅಗ್ರಸ್ಥಾನಿಯಾಗಿ ಸೆಮಿಫೈನಲ್’ಗೆ ಎಂಟ್ರಿ ಕೊಟ್ಟಿತ್ತು,

ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ಕೂಡ ಆಡಿದ 5 ಪಂದ್ಯಗಳಿಂದ 7 ಅಂಕ ಗಳಿಸಿದ್ರೂ, ರನ್’ರೇಟ್’ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್’ನಿಂದ ಹಿಂದೆ ಬಿದ್ದ ಕಾರಣ ಸೆಮಿಫೈನಲ್ ಕನಸು ನುಚ್ಚು ನೂರಾಯಿತು. ನ್ಯೂಜಿಲೆಂಡ್ 2.113ರ ರನ್’ರೇಟ್ ಹೊಂದಿದ್ರೆ, ಇಂಗ್ಲೆಂಡ್ 0.473 ರನ್’ರೇಟ್ ಹೊಂದಿತ್ತು. ಆತಿಥೇಯ ಆಸ್ಟ್ರೇಲಿಯಾ -0.173 ರನ್’ರೇಟ್ ಹೊಂದಿತ್ತು. ಒಂದು ವೇಳೆ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಸೋತಿದ್ದರೆ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸುತ್ತಿತ್ತು. ಆದರೆ ಇಂಗ್ಲೆಂಡ್ ಗೆಲುವಿನೊಂದಿಗೆ ಕಾಂಗರೂಗಳ ಸೆಮೀಸ್ ಕನಸು ನುಚ್ಚುನೂರಾಗಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.2 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಪ್ರಯಾಸದ ಗೆಲುವು ಸಾಧಿಸಿತು. ಇಂಗ್ಲೆಂಡ್ ಪರ ಓಪನರ್ ಅಲೆಕ್ಸ್ ಹೇಲ್ಸ್ 47 ರನ್ ಬಾರಿಸಿದ್ರೆ, ಮಧ್ಯಮ ಕ್ರಮಾಂಕದ ವೈಫಲ್ಯದ ಮಧ್ಯೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಆಲ್ರೌಂಡರ್ ಬೆನ್ ಸ್ಟೋಕ್ಸ್ 36 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್’ಗೆ ಮುನ್ನಡೆಸಿದರು.

ಇದರೊಂದಿಗೆ ಗ್ರೂಪ್-1ರಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪಿದ್ರೆ, ಗ್ರೂಪ್-2ರಿಂದ ಸೆಮೀಸ್’ನಲ್ಲಿ ಕಾಣಿಸಿಕೊಳ್ಳಲಿರುವ ತಂಡಗಳು ಯಾವುವು ಎಂಬುದು ಭಾನುವಾರ ನಿರ್ಧಾರವಾಗಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ (India vs Zimbabwe). ಈಗಾಗ್ಲೇ ಸೆಮಿಫೈನಲ್’ನಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿರುವ ಭಾರತ ತಂಡ, ಜಿಂಬಾಬ್ವೆ ವಿರುದ್ಧ ಗೆದ್ದು ಗ್ರೂಪ್-2ರಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ. ಮತ್ತೊಂದು ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಟಿ20 ವಿಶ್ವಕಪ್ 2022: ಭಾನುವಾರದ ಪಂದ್ಯಗಳು

  1. ದಕ್ಷಿಣ ಆಫ್ರಿಕಾ Vs ನೆದರ್ಲೆಂಡ್ಸ್ (ಬೆಳಗ್ಗೆ 5.30ಕ್ಕೆ)
  2. ಬಾಂಗ್ಲಾದೇಶ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ)
  3. ಭಾರತ Vs ಜಿಂಬಾಬ್ವೆ (ಮಧ್ಯಾಹ್ನ 1.30ಕ್ಕೆ)

ಇದನ್ನೂ ಓದಿ : T20 World Cup 2022: ನಾಳೆ ಭಾರತ Vs ಜಿಂಬಾಬ್ವೆ ಮ್ಯಾಚ್, ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಹಾಕಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Virat Kohli Birthday : ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್

T20 World Cup 2022 : England beat Sri Lanka to Reach semis Australia out

Comments are closed.