Kohli Raghu : ಕೊಹ್ಲಿ ಶತಕದ ಹಿಂದೆ ಕನ್ನಡಿಗನ ಶಕ್ತಿ, ಯಶಸ್ಸಿನ ಹಿಂದಿನ ಶಕ್ತಿಯನ್ನು ಪರಿಚಯಿಸಿದ ಕಿಂಗ್ ಕೊಹ್ಲಿ

ಬೆಂಗಳೂರು : ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 74ನೇ ಶತಕ ಬಾರಿಸಿ ಅಬ್ಬರಿಸಿರುವ ಟೀಮ್ ಇಂಡಿಯಾ ರನ್ ಮಷಿನ್ (Virat Kohli – Raghavindraa DVGI) ವಿರಾಟ್ ಕೊಹ್ಲಿ (Virat Kohli) ಅವರ ಯಶಸ್ಸಿನ ಹಿಂದಿನ ಶಕ್ತಿ ಕನ್ನಡಿಗ ರಾಘವೇಂದ್ರ ಡ್ವಿಗಿ (Raghavindraa DVGI). ಉತ್ತರ ಕನ್ನಡದ ಕುಮಟಾದವರಾದ ರಾಘವೇಂದ್ರ (Kohli Raghu) ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್. 11 ವರ್ಷಗಳಿಂದ ಟೀಮ್ ಇಂಡಿಯಾ ಜೊತೆಗಿರುವ ರಾಘವೇಂದ್ರ ಗಂಟೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ನೆಟ್ಸ್’ನಲ್ಲಿ ಭಾರತ ತಂಡದ ಆಟಗಾರರ ಅಭ್ಯಾಸಕ್ಕೆ ನೆರವಾಗುತ್ತಿದ್ದಾರೆ.

ತಮ್ಮ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ಏನು ಎಂಬುದನ್ನು ವಿರಾಟ್ ಕೊಹ್ಲಿ ಸಾಕಷ್ಟು ಬಾರಿ ಅಂತರಾಷ್ಟ್ರೀಯ ಪ್ರೆಸ್ ಕಾನ್ಫರೆನ್ಸ್’ಗಳಲ್ಲೇ ಹೇಳಿದ್ದಾರೆ. ಇದೀಗ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸಿಡಿಲಬ್ಬಲದ 166 ರನ್ ಸಿಡಿಸಿ ಭಾರತವನ್ನು ಗೆಲ್ಲಿಸಿದ ನಂತರ ಮತ್ತೆ ರಾಘವೇಂದ್ರ ಮತ್ತು ಮತ್ತಿಬ್ಬರು ಟೀಮ್ ಇಂಡಿಯಾದ ಮತ್ತಿಬ್ಬರು ಥ್ರೋಡೌನ್ ಸ್ಪೆಷಲಿಸ್ಟ್’ಗಳನ್ನು ಬಿಸಿಸಿಐ.ಟಿವಿ ಕ್ಯಾಮರಾ ಮುಂದೆ ತಂದಿರುವ ವಿರಾಟ್ ಕೊಹ್ಲಿ, ತೆರೆಯ ಹಿಂದಿನ ಹೀರೊಗಳ ಬಗ್ಗೆ ಮಾತನಾಡಿದ್ದಾರೆ.

‘’ಇದು ರಘು, ದಯಾ ಮತ್ತು ನುವಾನ್. ರಘು ಬಗ್ಗೆ ನಾನು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ. ಇವರೇ ನಮ್ಮ ಯಶಸ್ಸಿನ ಹಿಂದಿನ ನಿಜವಾದ ಶಕ್ತಿಗಳು. ಇವರು ನೆಟ್ಸ್’ನಲ್ಲಿ ಪ್ರತೀ ದಿನ 145 kmph, 150 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ನಮಗೆ ಸವಾಲೊಡ್ಡುತ್ತಾರೆ. ಇವರ ಕಾರಣದಿಂದ ಪ್ರಾಕ್ಟೀಸ್ ಸೆಷನ್ ಅತ್ಯಂತ ತೀವ್ರತೆಯಿಂದ ಕೂಡಿರುತ್ತದೆ. ನಮ್ಮನ್ನು ಪಂದ್ಯಕ್ಕೆ ಸಿದ್ಧಗೊಳಿಸುತ್ತಾರೆ. ನನ್ನ ಯಶಸ್ಸಿನಲ್ಲಿ ಇವರು ದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಹೀಗಾಗಿ ಜನರಿಗೆ ಇವರ ಮುಖಗಳ ಪರಿಚಯವಿರಬೇಕು. ಥ್ಯಾಂಕ್ಯೂ so much guys’’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಯಾರು ಈ ರಾಘವೇಂದ್ರ?
ಜೀವನದಲ್ಲಿ ನೀವು ನಿಮ್ಮ ಕೆಲಸದ ಬಗ್ಗೆ ಶ್ರದ್ಧೆಯನ್ನು ತೋರಿಸಿದರೆ, ಅದು ನಿಮಗೆ ಸರಿಯಾದ ದಿಕ್ಕನ್ನೇ ತೋರಿಸುತ್ತದೆ. ನಿಮಗೆ ಜೀವನದಲ್ಲಿ ಸ್ಫೂರ್ತಿ ಬೇಕಾದರೆ, 37 ವರ್ಷದ ರಾಘವೇಂದ್ರ ಡ್ವಿಗಿ (Raghavendra DVIG) ಅವರ ಜೀವನಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆ.ಯ ಕುಮಟಾ ತಾಲ್ಲೂಕಿನ ವಿವೇಕ್ ನಗರದ ಈ ಯುವಕ ತನ್ನ ಗುರಿ ಸಾಧಿಸುವವರೆಗೆ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದ್ಧಾರೆ. ತಿನ್ನಲು ಅನ್ನವಿಲ್ಲದೆ ಖಾಲಿ ಹೊಟ್ಟೆಯಲ್ಲಿ ದಿನಗಳನ್ನು ಕಳೆದಿದ್ದಾರೆ, ಸ್ಮಶಾನದಲ್ಲಿ ಮಲಗಿದ್ದಾರೆ. ಕುಮಟಾದಿಂದ ಮುಂಬಯಿ-ಕಾರವಾರ-ಹುಬ್ಬಳ್ಳಿ-ಬೆಂಗಳೂರು. ಬೆಂಗಳೂರಿನಿಂದ ಟೀಮ್ ಇಂಡಿಯಾಗೆ ರಘು ತಲುಪಿದ್ದೇ ಒಂದು ರೋಚಕ ಕಥೆ.

ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಹೇಳುವ ಪ್ರಕಾರ ರಾಘವೇಂದ್ರ ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞ. ರಘು ಇಲ್ಲದೆ ಭಾರತ ತಂಡವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಪ್ರತಿಯೊಬ್ಬರೂ ರಘು ಅವರ ಬಗ್ಗೆ ತುಂಬು ಹೃದಯದಿಂದ ಮಾತನಾಡುತ್ತಾರೆ, ಹೆಮ್ಮೆ ಪಡುತ್ತಾರೆ. ಅವರು ‘ಮೆನ್ ಇನ್ ಬ್ಲೂ’ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯನಷ್ಟೇ ಅಲ್ಲ, ಭಾರತ ತಂಡದ ಅವಿಭಾಜ್ಯ ಅಂಗವೂ ಹೌದು. ಇದು ದಿನ ಬೆಳಗಾಗುವಷ್ಟರಲ್ಲಿ ಸಿಕ್ಕ ಯಶಸ್ಸಲ್ಲ, ಇದಕ್ಕಾಗಿ ರಘು ಬರೀ ಬೆವರನ್ನಲ್ಲ, ರಕ್ತವನ್ನೇ ಬಸಿದಿದ್ದಾರೆ, ಹಸಿದ ಹೊಟ್ಟೆಯಲ್ಲಿ ದಿನಗಟ್ಟಲೆ ಮಲಗಿದ್ದಾರೆ, ಜೀವನವೇ ಸಾಕು ಎನ್ನುವಂತಹ ಕಷ್ಟಗಳನ್ನು ಎದುರಿಸಿದ್ದಾರೆ.

ಕ್ರಿಕೆಟ್ ಆಡ್ಬೇಕು ಅನ್ನೋ ಕನಸಿನೊಂದಿಗೆ ಜೇಬಿನಲ್ಲಿ 21 ರೂಪಾಯಿ ಇಟ್ಕೊಂಡು 22 ವರ್ಷಗಳ ಹಿಂದೆ ಮನೆ ಬಿಟ್ಟು ಹುಬ್ಬಳ್ಳಿಗೆ ಬಂದಾಗ ಮಲಗೋದಕ್ಕೆ ಸ್ಥಳ ಕೂಡ ಇರಲಿಲ್ಲ. ಒಂದು ವಾರ ರಘು ಹುಬ್ಬಳ್ಳಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಲಗ್ತಾರೆ. ಅಲ್ಲಿಂದ ಪೊಲೀಸರು ಓಡಿಸಿದಾಗ, ಮುಂದೆ ಎರಡು ವಾರಗಳ ಕಾಲ ಹನುಮಾನ್ ದೇವಸ್ಥಾನದಲ್ಲಿ ಮಲಗ್ತಾರೆ. ಅಲ್ಲಿಂದ್ಲೂ ಹೊರಹಾಕಿದಾಗ ಹುಬ್ಬಳ್ಳಿಯ ಈಗಿನ ರಾಜನಗರ ಕ್ರಿಕೆಟ್ ಮೈದಾನದ ಬಳಿಯಿರುವ ಸ್ಮಶಾನವೇ ರಾಘವೇಂದ್ರ ಅವರಿಗೆ ಮನೆಯಾಗಿ ಬಿಟ್ಟಿತ್ತು. ಒಂದಲ್ಲ, ಎರಡಲ್ಲ, ನಾಲ್ಕೂವರೆ ವರ್ಷಗಳ ಕಾಲ ಸ್ಮಶಾನದಲ್ಲೇ ಮಲಗಿದ್ರು ರಘು. ಸ್ಮಶಾನದಲ್ಲಿ ಕ್ರಿಕೆಟ್ ಮ್ಯಾಟೇ ಹಾಸಿಗೆ, ಅದೇ ಹೊದಿಕೆ.

ಧಾರವಾಡ ವಲಯ ತಂಡ ತಂಡದ ಪರ ಆಡುತ್ತಿದ್ದ ರಾಘವೇಂದ್ರ, ಕಟ್ಟಡವೊಂದರ ಮೆಟ್ಟಿಲ ಮೇಲಿಂದ ಬಿದ್ದು ಕೈಗೆ ಗಾಯ ಮಾಡಿಕೊಳ್ತಾರೆ. ಆಫ್ ಸ್ಪಿನ್ನರ್ ಆಗಿದ್ದ ರಘು ಅವರ ಬಲಗೈಗೆ ತುಂಬಾ ಪೆಟ್ಟಾಗಿ ಬಿಡತ್ತೆ. ಅಲ್ಲಿಗೆ ಕ್ರಿಕೆಟ್ ಆಡುವ ಕನಸು ಭಗ್ನ. ನಂತರ ರಘುವನ್ನು ಬದುಕು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರ್ಕೊಂಡ್ ಬರತ್ತೆ. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಸಂಸ್ಥೆಗೆ ಸೇರಿಕೊಳ್ತಾರೆ. ಕೆಐಒಸಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಹಾಯ ಮಾಡ್ತಾರೆ. ಅಲ್ಲಿಂದ ಜಾವಗಲ್ ಶ್ರೀನಾಥ್ ಕಣ್ಣಿಗೆ ಬಿದ್ದ ರಘು ಮುಂದೆ ಕರ್ನಾಟಕ ತಂಡದ ಸಹಾಯಕ ಸಿಬ್ಬಂದಿಗೆ ಸೇರಿಕೊಳ್ತಾರೆ. ನೆನಪಿರ್ಲಿ, ಅದು ಸಂಬಳವಿಲ್ಲದ ಕೆಲಸ. ಆ ದಿನಗಳಲ್ಲಿ ರಘು ಎಷ್ಟೋ ದಿನಗಳ ಕಾಲ ನೀರು ಕುಡಿದು ಮಲಗಿದ ದಿನಗಳೂ ಇವೆ. ಬಾಳೆಹಣ್ಣು ತಿಂದು ರಾತ್ರಿ ಕಳೆದದ್ದೂ ಇದೆ.

ಕರ್ನಾಟಕ ತಂಡದಿಂದ national ಕ್ರಿಕೆಟ್ ಅಕಾಡೆಮಿ. ಅಲ್ಲಿಂದ 2011ರಲ್ಲಿ ಟೀಮ್ ಇಂಡಿಯಾ. ಕಳೆದ 10 ವರ್ಷಗಳಿಂದ ಟೀಮ್ ಇಂಡಿಯಾದ ಬೆನ್ನುಲುಬ ಈ ರಘು. ಆಟಗಾರರಿಗೆ ನೆಟ್ಸ್’ನಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಸೈಡ್ ಆರ್ಮ್ ಮೂಲಕ ಚೆಂಡೆಸೆಯುವ ರಘು, ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳಿಗೆ ಗುಣಮಟ್ಟದ ಅಭ್ಯಾಸವನ್ನು ಒದಗಿಸುತ್ತಾ ಬಂದಿದ್ದಾರೆ.ಮೂರು ಗಂಟೆಗಳ ತರಬೇತಿ ಅವಧಿಯಲ್ಲಿ ರಘು ಸುಮಾರು 1,000 ಎಸೆತಗಳನ್ನು ಎಸೆಯುತ್ತಾರೆ. ರಘು ಒದಗಿಸುವ ವಿಶ್ವಶ್ರೇಷ್ಠ ಗುಣಮಟ್ಟದ ಅಭ್ಯಾಸದ ಪರಿಣಾಮ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಜಗತ್ತಿನ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವಂತಾಗಿದೆ. ಇದನ್ನು ಕೊಹ್ಲಿ ಸಹಿತ ಟೀಂ ಇಂಡಿಯಾ ಆಟಗಾರರೇ ಸಾಕಷ್ಟು ಬಾರಿ ಹೇಳಿದ್ದಾರೆ.

ಇದನ್ನೂ ಓದಿ : ವಿರಾಟ್ ಕೊಹ್ಲಿ ಸಂಚುರಿ ದಾಖಲೆ : ಸಂತಸ ವ್ಯಕ್ತಪಡಿಸಿದ ಪತ್ನಿ ಅನುಷ್ಕಾ ಶರ್ಮಾ

ಇದನ್ನೂ ಓದಿ : KL Rahul flies to Mumbai : ಮದುವೆ ತಯಾರಿಗೆ ಕೇರಳದಿಂದ ಮುಂಬೈಗೆ ಹಾರಿದ ರಾಹುಲ್, ಮುಂದಿನ ಸೋಮವಾರ ಪೀ ಪೀ ಡುಂ ಡುಂ

ಇದನ್ನೂ ಓದಿ : Virat Kohli Century : 1021, 93, 31, 05 ವಿರಾಟ್ ಕೊಹ್ಲಿ ಮತ್ತು ನಾಲ್ಕು ಶತಕಗಳ ಹಿಂದೆ ನಂಬರ್ ಗೇಮ್

ಕ್ರಿಕೆಟಿಗರು, ತರಬೇತುದಾರರು ಅವರಿಗೆ ಹಣವನ್ನು ನೀಡುವ ಅವಕಾಶಗಳನ್ನು ಕೊಟ್ಟಾಗ, ರಘು ಒಂದೇ ಒಂದು ಪೈಸಾವನ್ನು ಸಹ ಸ್ವೀಕರಿಸದೆ ನಿರಾಕರಿಸಿರುವ ಹಲವಾರು ಉದಾಹರಣೆಗಳಿವೆ. ಅವರ ಜೇಬು ಖಾಲಿಯಾಗಿದ್ದರೂ, ಎಂದಿಗೂ ತಮ್ಮ ಪ್ರಾಮಾಣಿಕತೆಯಲ್ಲಿ ರಾಜಿ ಮಾಡಿಕೊಂಡವರಲ್ಲ. ಯಾರ ಮುಂದೆ ಕೈಯೊಡ್ಡಿದವರಲ್ಲ. ಎಲ್ಲೋ ಇದ್ದ ರಘು ಅವರನ್ನು ಮತ್ತೆಲ್ಲಿಗೋ ಮುಟ್ಟಿಸಿ, ಇಂದು ಜಗತ್ತಿನ ಶ್ರೇಷ್ಠ ಕ್ರಿಕೆಟಿಗರೇ ಮೆಚ್ಚುವಂತಾಗಿದ್ದಕ್ಕೆ ಕಾರಣ ಪರಿಶ್ರಮ ಮತ್ತು ಪ್ರಾಮಾಣಿಕತೆ.

Virat Kohli – Raghavindraa DVGI : King Kohli who introduced Kannadiga power behind Kohli’s century, the power behind success

Comments are closed.