Virat Kohli retire : ಐಸಿಸಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ?

ಬೆಂಗಳೂರು: (Virat Kohli retire) ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ 71ನೇ ಅಂತಾರಾಷ್ಟ್ರೀಯ ಶತಕ ಬಾರಿಸಿ ಅಬ್ಬರಿಸಿದ್ದರು. ಏಷ್ಯಾ ಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ 34 ತಿಂಗಳುಗಳಿಂದ ಮರೀಚಿಕೆಯಾಗಿದ್ದ ಅಂತಾರಾಷ್ಟ್ರೀಯ ಶತಕವನ್ನು ತಮ್ಮದಾಗಿಸಿ ಕೊಂಡಿದ್ದರು. ಅಷ್ಟೇ ಅಲ್ಲ, ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ 5 ಪಂದ್ಯಗಳಿಂದ ಒಂದು ಶತಕ ಹಾಗೂ 2 ಅರ್ಧಶತಕಗಳ ಸಹಿತ 276 ರನ್ ಕಲೆ ಹಾಕಿದ್ದರು.

ಇದೀಗ 34 ವರ್ಷದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗಳನ್ನು ಎದುರು ನೋಡುತ್ತಿದ್ದಾರೆ. ನಂತರ ಆಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಹೊಂದಿದ್ದಾರೆ. ಆ ಮೂಲಕ 15 ವರ್ಷಗಳ ನಂತರ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದು ಕೊಡುವ ಉತ್ಸಾಹದಲ್ಲಿದ್ದಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆದ ನಂತರ ಮತ್ತೆ ಚುಟುಕು ವಿಶ್ವಕಪ್ ಗೆದ್ದಿಲ್ಲ.

ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಡುವ ಪಣ ತೊಟ್ಟಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದಲ್ಲಿ ಚುಟುಕು ವಿಶ್ವಕಪ್ ಟೂರ್ನಿಯ ನಂತರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ನಿವೃತ್ತಿ ಹೇಳಲಿದ್ದಾರೆ. ಹೀಗಂತ ಭವಿಷ್ಯ ನುಡಿದಿದ್ದಾರೆ ಪಾಕಿಸ್ತಾನದ ಮಾಜಿ ದಿಗ್ಗಜ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar).

“ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಹೇಳುವ ಸಾಧ್ಯತೆಗಳಿವೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್’ನತ್ತ ಹೆಚ್ಚು ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಟಿ20 ಕ್ರಿಕೆಟ್’ಗೆ ವಿರಾಟ್ ಕೊಹ್ಲಿ ವಿದಾಯ ಹೇಳುವ ಸಾಧ್ಯತೆಯಿದೆ. ನಾನು ಅವರ ಜಾಗದಲ್ಲಿರುತ್ತಿದ್ದರೆ ಅದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ” ಎಂದು ಪಾಕ್’ನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಡುವ ಮೂಲಕ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಚ್ರೀಯ ಕ್ರಿಕೆಟ್’ನಲ್ಲಿ 100 ಪಂದ್ಯಗಳನ್ನಾಡಿದ್ದರು. ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ತಲಾ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಜಗತ್ತಿನ 2ನೇ ಹಾಗೂ ಭಾರತದ ಮೊದಲ ಆಟಗಾರನೆಂಬ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದೆ. ವೃತ್ತಿಜೀವನದಲ್ಲಿ ಒಟ್ಟು 104 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 51.94ರ ಅತ್ಯಮೋಘ ಸರಾಸರಿಯಲ್ಲಿ 3,584 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ವಿಶ್ವದಾಖಲೆಯ 32 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ : Asad Rauf died : ಮಾಜಿ ಐಸಿಸಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

Virat Kohli retire from cricket after ICC T20 World Cup

Comments are closed.