Yuvraj Singh – Shubman Gill : ದ್ವಿಶತಕ ವೀರ ಶುಭಮನ್ ಗಿಲ್‌ಗೆ ಯುವರಾಜನೇ ದ್ರೋಣಾಚಾರ್ಯ

ಬೆಂಗಳೂರು: ಪಂಜಾಬ್ ಕಾ ಪುತ್ತರ್ ಶುಭಮನ್ ಗಿಲ್ (Shubhman Gill) ಈಗ ಕ್ರಿಕೆಟ್ ಜಗತ್ತಿನ ಹಾಟ್ ಸನ್ಸೇಶನ್. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿರುವ ಶುಭಮನ್ ಗಿಲ್ ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆ, ಭವಿಷ್ಯದ ಸೂಪರ್ ಸ್ಟಾರ್.ಅಂದ ಹಾಗೆ ಶುಭಮನ್ ಗಿಲ್ ಅವರ ಪಾಲಿಗೆ ಕ್ರಿಕೆಟ್ ಗುರು ಯಾರು ಗೊತ್ತಾ? ಭಾರತದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh). ಪಂಜಾಬ್’ನ ಗಿಲ್ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvraj Singh – Shubman Gill) ಅವರ ಗರಡಿಯಲ್ಲಿ ಬೆಳೆದ ಹುಡುಗ.

ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಶತಕ ಬಾರಿಸುತ್ತಿದ್ದಂತೆ ಯುವರಾಜ್ ಸಿಂಗ್ ಮಾಡಿರುವ ಟ್ವೀಟ್ ಈ ಕಥೆ ಹೇಳುತ್ತಿದೆ. “ಏಕದಿನ ಪಂದ್ಯದಲ್ಲಿ 200 ರನ್..! ಅದೂ ಸಣ್ಣ ವಯಸ್ಸಿನಲ್ಲಿ..! ನಿಜಕ್ಕೂ ಅದ್ಭುತ, ನಂಬಲಸಾಧ್ಯ. ನನ್ನ ಪಾಲಿಗೆ ಮತ್ತು ಶುಭಮನ್ ತಂದೆಯ ಪಾಲಿಗೆ ಹೆಮ್ಮೆಯ ದಿನ. ಅಭಿನಂದನೆಗಳು ಶುಭಮನ್ ಗಿಲ್. ಇಡೀ ದೇಶ ನಿನ್ನ ಬಗ್ಗೆ ಹೆಮ್ಮೆ ಪಡುತ್ತಿದೆ” ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್’ನ ಆಟಗಾರ ಶುಭಮನ್ ಗಿಲ್ (Yuvraj Singh – Shubman Gill) ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 149 ಎಸೆತಗಳನ್ನೆದುರಿಸಿ 19 ಬೌಂಡರಿ ಹಾಗೂ 9 ಸಿಕ್ಸರ್’ಗಳ ಸಹಿತ 208 ರನ್ ಗಳಿಸಿದ್ದರು. ಕೊನೆಯ 3 ಓವರ್’ಗಳಲ್ಲಿ ತಾವು ಎದುರಿಸಿದ 11 ಎಸೆತಗಳಲ್ಲಿ ಗಿಲ್ ಆರು ಸಿಕ್ಸರ್’ಗಳನ್ನು ಬಾರಿಸಿದ್ದು ವಿಶೇಷ. 47ನೇ ಓವರ್ ಅಂತ್ಯಕ್ಕೆ 137 ಎಸೆತಗಳಲ್ಲಿ 169 ರನ್ ಗಳಿಸಿದ್ದ ಗಿಲ್, ಮುಂದಿನ 11 ಎಸೆತಗಳಲ್ಲಿ 39 ರನ್ ಸಿಡಿಸಿ ದ್ವಿಶಥಕ ಪೂರ್ತಿಗೊಳಿಸಿದ್ದರು.

ಅಷ್ಟೇ ಅಲ್ಲ, ದ್ವಿಶತಕದ ಇನ್ನಿಂಗ್ಸ್ ವೇಳೆ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ ಅತ್ಯಂತ ವೇಗವಾಗಿ ಸಾವಿರ ರನ್ ಕಲೆ ಹಾಕಿದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಈ ಹಿಂದೆ ಈ ದಾಖಲೆ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾದ ಎಡಗೈ ಓಪನರ್ ಶಿಖರ್ ಧವನ್ ಅವರ ಹೆಸರಲ್ಲಿತ್ತು. ಗಿಲ್ 19 ಇನ್ನಿಂಗ್ಸ್’ಗಳಲ್ಲಿ ಸಾವಿರ ರನ್ ಕಲೆ ಹಾಕಿದರೆ, ವಿರಾಟ್ ಮತ್ತು ಧವನ್ 24 ಇನ್ನಿಂಗ್ಸ್’ಗಳಲ್ಲಿ ಸಾವಿರ ಏಕದಿನ ರನ್’ಗಳ ಗಡಿ ಮುಟ್ಟಿದ್ದರು.

23 ವರ್ಷದ ಶುಭಮನ್ ಗಿಲ್ 2018ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದು ಭಾರತ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು. ಆ ವಿಶ್ವಕಪ್ ಟೂರ್ನಿಗೂ ಮುನ್ನ ಶುಭಮನ್ ಗಿಲ್ ಒಂದು ತಿಂಗಳ ಕಾಲ ಯುವರಾಜ್ ಸಿಂಗ್ ಅವರ ಗರಡಿಯಲ್ಲಿ ಅಭ್ಯಾಸ ನಡೆಸಿದ್ದರು. ಅಷ್ಟೇ ಅಲ್ಲ, 2022ರ ಐಪಿಎಲ್ ಟೂರ್ನಿಗೂ ಮುನ್ನ ಶುಭಮನ್ ಗಿಲ್’ಗೆ ಯುವರಾಜ್ ಸಿಂಗ್ ಮಾರ್ಗದರ್ಶನ ನೀಡಿದ್ದರು.

ಇದನ್ನೂ ಓದಿ : Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ ಸಿಡಿಸಿದ ಪಂಜಾಬ್ ಕಾ ಪುತ್ತರ್

ಯುವರಾಜ್ ಸಿಂಗ್ ಭಾರತದ ಸರ್ವಶ್ರೇಷ್ಠ ವಿಶ್ವಕಪ್ ಹೀರೋ. 2000ನೇ ಇಸವಿಯಲ್ಲಿ ಅಂಡರ್-19 ವಿಶ್ವಕಪ್ ಗೆದ್ದಾಗ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದ ಯುವಿ, 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಸರಣಿಶ್ರೇಷ್ಠರಾಗಿದ್ದ ಯುವರಾಜ್ ಸಿಂಗ್, ಭಾರತಕ್ಕೆ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ದರು.ವಿಶ್ವಕಪ್ ಹೀರೋ ಯುವರಾಜನ ಗರಡಿಯಲ್ಲಿ ಪಳಗಿರುವ ಶುಭಮನ್ ಗಿಲ್ ಭಾರತ ಪರ ಅಬ್ಬರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್’ನ ಭವಿಷ್ಯದ ತಾರೆ ನಾನೇ ಎಂಬುದನ್ನು ನಿರೂಪಿಸುತ್ತಿದ್ದಾರೆ.

Yuvaraja is Dronacharya for double century hero Shubman Gill

Comments are closed.