Harmanpreet Kaur : 100 ಎಸೆತಗಳಲ್ಲಿ 100 ರನ್.. 111 ಎಸೆತಗಳಲ್ಲಿ 143 ರನ್.. ಕೌರ್ ರೌದ್ರಾವತಾರಕ್ಕೆ ಬೆಚ್ಚಿದ ಇಂಗ್ಲೆಂಡ್

ಕ್ಯಾಂಟರ್’ಬರಿ: ಮಹಿಳಾ ಕ್ರಿಕೆಟ್’ನ ಬಿಗ್ ಹಿಟ್ಟರ್ ಖ್ಯಾತಿಯ ಹರ್ಮನ್’ಪ್ರೀತ್ ಕೌರ್ (Harmanpreet Kaur New Record ) ಕ್ರಿಕೆಟ್ ಜನಕರ ನಾಡಿನಲ್ಲಿ ಅಕ್ಷರಶಃ ಧೂಳೆಬ್ಬಿಸಿದ್ದಾರೆ. ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ (ENGvIND) ರೌದ್ರಾವತಾರ ತಾಳಿದ್ದ ಹರ್ಮೀನ್’ಪ್ರೀತ್, ಸಿಡಿಲಬ್ಬದ ಶತಕ ಬಾರಿಸಿ ಭಾರತಕ್ಕೆ ಪಂದ್ಯ ಹಾಗೂ ಸರಣಿ ಎರಡನ್ನೂ ಗೆದ್ದುಕೊಟ್ಟಿದ್ದಾರೆ.

ಸೇಂಟ್ ಲಾರೆನ್ಸ್ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ ಇಂಗ್ಲೆಂಡ್ ವಿರುದ್ಧ 88 ರನ್’ಗಳ ಅಮೋಘ ಗೆಲುವು ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ವೃತ್ತಿಜೀವನದ 5ನೇ ಏಕದಿನ ಶತಕ ಬಾರಿಸಿದ ಹರ್ಮನ್’ಪ್ರೀತ್ ಕೌರ್ 111 ಎಸೆತಗಳಲ್ಲಿ 18 ಬೌಂಡರಿ ಹಾಗೂ 4 ಬೌಂಡರಿಗಳ ನೆರವಿನಿಂದ ಅಜೇಯ 143 ರನ್ ಸಿಡಿಸಿದರು.

ಹರ್ಮನ್’ಪ್ರೀತ್ ಕೌರ್ ಅವರ ವೀರಾವೇಶದ ಇನ್ನಿಂಗ್ಸ್’ನ ವಿಶೇಷತೆ ಏನೆಂದರೆ ಶತಕ ಪೂರ್ತಿಗೊಳಿಸಿದ್ದು ಭರ್ತಿ 100 ಎಸೆತಗಳಲ್ಲಿ. ಮುಂದಿನ 43 ರನ್ ಬಾರಿಸಲು ತೆಗೆದುಕೊಂಡದ್ದು ಕೇವಲ 11 ಎಸೆತಗಳನ್ನು. ಈ 11 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿ ಅಬ್ಬರಿಸಿದ ಹರ್ಮನ್’ಪ್ರೀತ್ ಕೌರ್ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ನಂತರ ಬೆಟ್ಟದಂತಹ ಸವಾಲನ್ನು ಬೆನ್ನಟ್ಟಿದ ಇಂಗ್ಲೆಂಡ್ 44.2 ಓವರ್’ಗಳಲ್ಲಿ 245 ರನ್ನಿಗೆ ಆಲೌಟಾಯಿತು. ಭಾರತ ಪರ ಬಲಗೈ ಮಧ್ಯಮ ವೇಗದ ಬೌಲರ್ ರೇಣುಕಾ ಸಿಂಗ್ 57 ರನ್ನಿತ್ತು 4 ವಿಕೆಟ್ ಉರುಳಿಸಿದರು.

ಸೆಪ್ಟೆಂಬರ್ 18ರಂದು ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಭಾರತ 7 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲೂ ಮಿಂಚಿದ್ದ ಹರ್ಮನ್’ಪ್ರೀತ್ 94 ಎಸೆತಗಳಲ್ಲಿ ಅಜೇಯ 74 ರನ್ ಬಾರಿಸಿದ್ದರು. 2ನೇ ಪಂದ್ಯವನ್ನೂ ಗೆಲ್ಲುವುದರೊಂದಿಗೆ ಭಾರತ ಮಹಿಳಾ ತಂಡ ಇಂಗ್ಲೆಂಡ್ ನೆಲದಲ್ಲಿ 23 ವರ್ಷಗಳ ನಂತರ ಏಕದಿನ ಸರಣಿ ಗೆದ್ದಿದೆ. ಭಾರತದ ವನಿತೆಯರು 1999ರಲ್ಲಿ ಕೊನೆಯ ಬಾರಿ ಕ್ರಿಕೆಟ್ ಜನಕರ ನಾಡಿನಲ್ಲಿ ಏಕದಿನ ಸರಣಿ ಗೆದ್ದಿದ್ದರು.

ಸರಣಿಯ 3ನೇ ಪಂದ್ಯ ಸೆಪ್ಟೆಂಬರ್ 24 ರಂದು (ಶನಿವಾರ) ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ. ಇದು ಭಾರತದ ದಿಗ್ಗಜ ವೇಗದ ಬೌಲರ್ ಜೂಲನ್ ಗೋಸ್ವಾಮಿಯವರ ವಿದಾಯದ ಪಂದ್ಯವಾಗಿದ್ದು, 40 ವರ್ಷದ ಜೂಲನ್ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಕಟ್ಟ ಕಡೆಯ ಪಂದ್ಯವಾಡಲಿದ್ದಾರೆ.

ಇದನ್ನೂ ಓದಿ : Womens Asia Cup 2022 : ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ… ತಂಡದಲ್ಲಿ ಓರ್ವ ಕನ್ನಡತಿ

ಇದನ್ನೂ ಒದಿ : Smriti Mandhana Record : ಸ್ಮೃತಿ ಮಂಧಾನ@3000: ಮಿಥಾಲಿ ರಾಜ್ ದಾಖಲೆ ಪುಡಿಗಟ್ಟಿದ ಕ್ರಿಕೆಟ್ ಮೈದಾನದ ಮೋಹಕ ತಾರೆ

ENGvIND Harmanpreet Kaur New Record 100 runs 100 ball 143 runs in 111 balls

Comments are closed.