ಆಸೀಸ್ ವಿರುದ್ಧದ ಟಿ20 ಸರಣಿ: ಭಾರತ ತಂಡಕ್ಕೆ ಸಿಕ್ಕ ಹೊಸ ಬೌಲರ್; ಹೆಸರು ಕೇಳಿದ್ರೆ ಗಾಬರಿಯಾಗ್ತೀರಿ

ಮೊಹಾಲಿ: (New Bowler Virat Kohli) ಏಷ್ಯಾ ಕಪ್ ಟೂರ್ನಿಯ ವೈಫಲ್ಯದ ನಂತರ ಭಾರತ ತಂಡದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ (India Vs Australia T20 Series). ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಂಗಳವಾರ (ಸೆಪ್ಟೆಂಬರ್ 20) ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ (Punjab Cricket Association – PCA)ಮೈದಾನದಲ್ಲಿ ನಡೆಯಲಿದೆ.
ಸರಣಿಯ ಆರಂಭಿಕ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಕಳೆದೆರಡು ದಿನಗಳಿಂದ ಪಿಸಿಎ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿವೆ. ಈ ಅಭ್ಯಾಸದ ವೇಳೆ ಭಾರತ ತಂಡಕ್ಕೊಬ್ಬ ಹೊಸ ಬೌಲರ್ ಸಿಕ್ಕಿದ್ದಾನೆ. ಆತ ನೆಟ್ಸ್’ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದಾನೆ. ಆ ಹೊಸ ಬೌಲರ್ ಬೇರಾರೂ ಇಲ್ಲ, ಟೀಮ್ ಇಂಡಿಯಾದ ರನ್ ಮಷಿನ್, ಆಧುನಿಕ ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಪೂರ್ವಭಾವಿಯಾಗಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಸೋಮವಾರ ಪಿಸಿಎ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿತು. ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ ಆಸೀಸ್ ವಿರುದ್ಧದ ಸರಣಿಗೆ ಸಜ್ಜಾಗಿದ್ದು, ಭರ್ಜರಿ ಪ್ರಾಕ್ಟೀಸ್ ನಡೆಸಿದರು. ನೆಟ್ಸ್’ನಲ್ಲಿ ಕೊಹ್ಲಿ ಬಾರಿಸಿದ ಒಂದೊಂದು ಹೊಡೆತಗಳು ಅಲ್ಲಿದ್ದವರನ್ನು ದಂಗಾಗಿಸಿಬಿಟ್ಟವು.

ಅಚ್ಚರಿಯ ಸಂಗತಿ ಏನಂದ್ರೆ ಬ್ಯಾಟಿಂಗ್ ಅಭ್ಯಾಸ ಮುಗಿಸಿದ ವಿರಾಟ್ ಕೊಹ್ಲಿ ಕೆಲ ಹೊತ್ತು ಬೌಲಿಂಗ್ ಅಭ್ಯಾಸವನ್ನೂ ನಡೆಸಿದರು. ಮಧ್ಯಮ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದರು. ರಿಷಭ್ ಪಂತ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ, ಚೆಂಡು ಕೈಗೆತ್ತಿಕೊಂಡ ವಿರಾಟ್ ಕೆಲ ಎಸೆತಗಳನ್ನು ಎಸೆದರು.

ವೃತ್ತಿಜೀವನದಲ್ಲಿ 104 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಇದುವರೆಗೆ ನಾಲ್ಕು ವಿಕೆಟ್’ಗಳನ್ನೂ ಪಡೆದಿದ್ದಾರೆ. 13 ಪಂದ್ಯಗಳಲ್ಲಿ ಒಟ್ಟು 25 ಓವರ್ ಬೌಲಿಂಗ್ ಮಾಡಿರುವ ಕೊಹ್ಲಿ, 204 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. 13 ರನ್ನಿಗೆ 1 ವಿಕೆಟ್ ಪಡೆದಿರುವುದು ಟಿ20ಯಲ್ಲಿ ವಿರಾಟ್ ಕೊಹ್ಲಿಯವರ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. ಇಂಗ್ಲೆಂಡ್’ನ ಕೆವಿನ್ ಪೀಟರ್ಸನ್ (2011), ಸಮಿತ್ ಪಟೇಲ್ (2011), ಪಾಕಿಸ್ತಾನದ ಮೊಹಮ್ಮದ್ ಹಫೀಝ್ (2012) ಹಾಗೂ ವೆಸ್ಟ್ ಇಂಡೀಸ್’ನ ಜಾನ್ಸನ್ ಚಾರ್ಲ್ಸ್ (2016) ವಿಕೆಟ್’ಗಳನ್ನು ಕೊಹ್ಲಿ ಪಡೆದಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲೂ ಕೊಹ್ಲಿ ನಾಲ್ಕು ವಿಕೆಟ್ ಕಬಳಿಸಿದ್ದಾರೆ.

ಟಿ20 ಕ್ರಿಕೆಟ್’ನಲ್ಲಿ ಭಾರತ ಸದ್ಯ ಐವರು ಸ್ಪೆಷಲಿಸ್ಟ್ ಬೌಲರ್’ಗಳು ಹಾಗೂ ಒಬ್ಬ ಆಲ್ರೌಂಡರ್ ಕಾಂಬಿನೇಷನ್’ನೊಂದಿಗೆ ಆಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಹಲ್ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಷರ್ ಪಟೇಲ್ ಬದಲು ಆರ್.ಅಶ್ವಿನ್ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಆಲ್ರೌಂಡರ್ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. ಅಗತ್ಯ ಬಿದ್ದರೆ ವಿರಾಟ್ ಕೊಹ್ಲಿ ಕೂಡ ಒಂದೆರಡು ಓವರ್ ಬೌಲಿಂಗ್ ಮಾಡಬಹುದು. ಏಷ್ಯಾ ಕಪ್ ಟೂರ್ನಿಯ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ, ಒಂದು ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ನೀಡಿದ್ದರು.

ಇದನ್ನೂ ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್

ಇದನ್ನೂ ಓದಿ : Dhoni and Yuvraj Singh: ಮತ್ತೆ ಒಂದಾದ ಭಲೇ ಜೋಡಿ.. ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಧೋನಿ-ಯುವಿ

India vs Australia 1st T20I Indian Cricket Team Get New Bowler Virat Kohli

Comments are closed.