Karnataka Cricket : ಕೋಚ್‌ಗಳನ್ನು ಬದಲಿಸಲಿದ್ದರೆ ಕರ್ನಾಟಕ ರಣಜಿ ತಂಡಕ್ಕೆ ಉಳಿಗಾಲವಿಲ್ಲ !

ಬೆಂಗಳೂರು: ಕೆಲವೇ ವರ್ಷಗಳ ಹಿಂದೆ ದೇಶೀಯ ಕ್ರಿಕೆಟ್’ನ ದೈತ್ಯ ತಂಡವಾಗಿದ್ದ ಕರ್ನಾಟಕ (Karnataka Ranji Team) ಈಗ ಹಲ್ಲು ಕಿತ್ತ ಹಾವು. ರಣಜಿ ಟ್ರೋಫಿ ಟೂರ್ನಿಗಳಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದ ರಾಜ್ಯ ತಂಡ, ಮತ್ತೆ ರಣಜಿ ಟ್ರೋಫಿ ಗೆಲ್ಲದೆ 7 ವರ್ಷಗಳೇ ಕಳೆದು ಹೋಗಿವೆ. ದೇಶದ ಬೇರೆ ಯಾವ ತಂಡಗಳಲ್ಲೂ ಇಲ್ಲದ ಘಟಾನುಘಟಿ ಆಟಗಾರರು, ಮ್ಯಾಚ್ ವಿನ್ನರ್’ಗಳಿದ್ದರೂ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲದಿರಲು ಕಾರಣವೇನು ? ಈ ಪ್ರಶ್ನೆಗೆ ಸಿಗುತ್ತಿರುವ ಉತ್ತರ ಟೀಮ್ ಮ್ಯಾನೇಜ್ಮೆಂಟ್”ನ ಮಿಸ್ ಮ್ಯಾನೇಜ್ಮೆಂಟ್. ಉತ್ತಮ ಆಟಗಾರರಿದ್ದರೂ ಸೂಕ್ತ ಸಮಯದಲ್ಲಿ ಸಮರ್ಥರನ್ನು ಕಣಕ್ಕಿಳಿಸದೆ ಇರುವುದೇ ಕರ್ನಾಟಕ ತಂಡದ (Karnataka Cricket) ವೈಫಲ್ಯಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಗಾದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ? ಈ ಪ್ರಶ್ನೆಗೆ ರಾಜ್ಯ ಕ್ರಿಕೆಟ್ ವಲಯದಿಂದ ಕೇಳಿ ಬರುತ್ತಿರುವ ಉತ್ತರ ಒಂದೇ. ಕೋಚ್”ಗಳ ಬದಲಾವಣೆ. ಹೌದು, ಕರ್ನಾಟಕ ತಂಡದ ಇತ್ತೀಚಿನ ವೈಫಲ್ಯಕ್ಕೆ ಹಿರಿಯ ಆಟಗಾರರ ಬೇಜವಾಬ್ದಾರಿ ಆಟ ಎಷ್ಟು ಕಾರಣವೋ, ಕೋಚ್’ಗಳಾದ ಯರೇ ಗೌಡ ಮತ್ತು ಎಸ್.ಅರವಿಂದ್ ಅವರೂ ಅಷ್ಟೇ ಕಾರಣ.

ಯರೇ ಗೌಡ (Yare Goud) ಮತ್ತು ಎಸ್.ಅರವಿಂದ್ (S. Arvind) ಆಟಗಾರರಾಗಿ ಕರ್ನಾಟಕ ಪರ ಮಿಂಚಿದವರು. ಆದರೆ ಕೋಚ್”ಗಳಾಗಿ ತಂಡದಿಂದ ರಣಜಿ ಟ್ರೋಫಿ ಗೆಲ್ಲುವಂತಹ ಪ್ರದರ್ಶನ ಹೊರ ತೆಗೆಯುವಲ್ಲಿ ಇಬ್ಬರೂ ವಿಫಲರಾಗಿದ್ದಾರೆ. 2018ರಲ್ಲಿ ಯರೇಗೌಡ ಮತ್ತು ಎಸ್.ಅರವಿಂದ್ ಕರ್ನಾಟಕ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೋಚ್’ಗಳಾಗಿ ನೇಮಕಗೊಂಡಿದ್ದರು. ಇವರ ಅವಧಿಯಲ್ಲಿ ಕರ್ನಾಟಕ ತಂಡ ಎರಡು ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಮತ್ತು ಒಮ್ಮೆ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ ನಿಜ. ಆದ್ರೆ ದೇಶೀಯ ಪ್ರತಿಷ್ಠಿತ ಟೂರ್ನಿಯಾಗಿರುವ ರಣಜಿ ಟ್ರೋಫಿ ಗೆದ್ದಿಲ್ಲ.

ಯರೇಗೌಡ-ಎಸ್.ಅರವಿಂದ್ ಕೋಚಿಂಗ್ ಸಾಧನೆ
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ
2018-19: ಚಾಂಪಿಯನ್ಸ್
2019-20: ಚಾಂಪಿಯನ್ಸ್

ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ
2019-20: ಚಾಂಪಿಯನ್ಸ್

ಹಾಗಾದರೆ ಯರೇ ಗೌಡ ಮತ್ತು ಎಸ್.ಅರವಿಂದ್ ಅವಧಿಯಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಕಾರಣಗಳೇನು? ಹಲವಾರು ಕಾರಣಗಳಿವೆ.

ಕೋಚ್”ಗಳಾಗಿ ಯರೇಗೌಡ-ಅರವಿಂದ್ ವೈಫಲ್ಯ

  • ರಣಜಿ ಟ್ರೋಫಿಯಲ್ಲಿ ಪಂದ್ಯ ಗೆಲ್ಲಿಸುವ ಆಟಗಾರರನ್ನು ಆಡಿಸಿಲ್ಲ.
  • ಫಾರ್ಮ್ ಕಳೆದುಕೊಂಡಿದ್ದ ಕೆಲ ಆಟಗಾರರನ್ನು ಪದೇ ಪದೇ ಆಡಿಸುತ್ತಾ ಬಂದಿದ್ದು,.
  • ಆಟಗಾರರ ಫಾರ್ಮ್ ನೋಡಿ ಪ್ಲೇಯಿಂಗ್ XI ಆಯ್ಕೆ ಮಾಡುವ ಬದಲು ಆಟಗಾರರ Reputation ಮೇಲೆ ಆಯ್ಕೆ ಮಾಡಿದ್ದು.
  • ರಾಜ್ಯ ರಣಜಿ ತಂಡದಲ್ಲಿ ಪ್ರತಿಭಾನ್ವಿತರ ಬದಲು ಕೆಲ “ಕೋಟಾ” ಆಟಗಾರರಿಗೆ ಪ್ಲೇಯಿಂಗ್ XIನಲ್ಲಿ ಪದೇ ಪದೇ ಅವಕಾಶ ನೀಡಿದ್ದು.
  • ಕೋಚ್”ಗಳಾಗಿ ತಂಡದ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಬದಲು KSCA ಆಡಳಿತ ಮಂಡಳಿಯ ಕೈಗೊಂಬೆಗಳಾಗಿ ವರ್ತಿಸಿದ್ದು.
  • ರಣಜಿ ಟ್ರೋಫಿ ಗೆಲ್ಲಲು ಪೂರಕವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು KSCA ಕಾರ್ಯದರ್ಶಿಯ ತಾಳಕ್ಕೆ ತಕ್ಕಂತೆ ಕುಣಿದದ್ದು.

ಯರೇ ಗೌಡ ಮತ್ತು ಎಸ್.ಅರವಿಂದ್ ಸಾಧಾರಣ ಆಟಗಾರರಲ್ಲ. ಯರೇ ಗೌಡ ರಾಜ್ಯ ರಣಜಿ ತಂಡದ ನಾಯಕರಾಗಿದ್ದವರು. ಇನ್ನು ಅರವಿಂದ್ ಕರ್ನಾಟಕ ತಂಡ 2013-14 ಮತ್ತು 2014-15ರಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಗೆಲ್ಲಲು ಕಾರಣರಾಗಿದ್ದವರು. ಆಟಗಾರರಾಗಿ ಅಮೋಘ ಸಾಧನೆ ಮಾಡಿರುವ ಇಬ್ಬರೂ, ಕೋಚ್”ಗಳಾಗಿ ಮಾತ್ರ ತಮ್ಮ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಲ್ಲ. ಅದರಲ್ಲೂ ತಂಡದ ಬೌಲಿಂಗ್ ಕೋಚ್ ಆಗಿರುವ ಎಸ್.ಅರವಿಂದ್ KSCA ಕಾರ್ಯದರ್ಶಿಯ “ಮುಖವಾಣಿ”ಯಾಗಿ ಕೆಲಸ ಮಾಡಿದ್ದು ಗೊತ್ತಿಲ್ಲದ ವಿಚಾರವೇನೂ ಅಲ್ಲ.

ಕರ್ನಾಟಕ ತಂಡ ಮತ್ತೆ ರಣಜಿ ಟ್ರೋಫಿ ಗೆಲ್ಲಬೇಕಾದರೆ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳನ್ನು ಕೋಚ್”ಗಳಾಗಿ ನೇಮಕ ಮಾಡಲೇಬೇಕು. ಅದು ಬಿಟ್ಟು ಮತ್ತೆ ಯರೇ ಗೌಡ, ಎಸ್.ಅರವಿಂದ್ ಅವರನ್ನೇ ಮುಂದುವರಿಸಿದ್ರೆ, ರಾಜ್ಯ ತಂಡ ರಣಜಿ ಟ್ರೋಫಿ ಗೆಲ್ಲುವುದು ದೂರದ ಮಾತು.

ಕಳೆದ 9 ರಣಜಿ ಟೂರ್ನಿಗಳಲ್ಲಿ ಕರ್ನಾಟಕ ತಂಡದ ಸಾಧನೆ
2012-13: ಕ್ವಾರ್ಟರ್ ಫೈನಲ್
2013-14: ಚಾಂಪಿಯನ್
2014-15: ಚಾಂಪಿಯನ್
2015-16: ಲೀಗ್ ಹಂತ
2016-17: ಕ್ವಾರ್ಟರ್ ಫೈನಲ್
2017-18: ಸೆಮಿಫೈನಲ್
2018-19: ಸೆಮಿಫೈನಲ್
2019-20: ಸೆಮಿಫೈನಲ್
2021-22: ಕ್ವಾರ್ಟರ್ ಫೈನಲ್

ಇದನ್ನೂ ಓದಿ : Reason behind India’s lost : ಎಡ್ಜ್‌ಬಾಸ್ಟನ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ ಈತನೇ ಕಾರಣ

ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೋಲಿನಲ್ಲಿ ಭಾರತಕ್ಕೆ ಮುಳುವಾಗಿದ್ದೇ ‘R’ ಫ್ಯಾಕ್ಟರ್ !

Karnataka Cricket : If the coaches are to be changed, there is no survival for the Karnataka Ranji team

Comments are closed.