Pro Kabaddi League: ಬೆಂಗಳೂರು ಬುಲ್ಸ್‌ಗೆ ನಿರಾಸೆ, ಗೆದ್ದು ಬೀಗಿದ ಯುಪಿ ಯೋಧಾ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ 44ನೇ ಪಂದ್ಯದಲ್ಲಿ ಶ್ರೀಕಾಂತ್‌ ಜಾಧವ್ ಪ್ರದರ್ಶಿಸಿದ ಅದ್ಭುತ ಆಟದ ನೆರವಿನಿಂದ ಬೆಂಗಳೂರು ಬುಲ್ಸ್‌ ವಿರುದ್ಧ ಯುಪಿ ಯೋಧಾ ಭರ್ಜರಿ ಗೆಲುವು ಸಾಧಿಸಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಭರವಸೆ ಮೂಡಿಸಿದ್ದ ಬೆಂಗಳೂರು ಬುಲ್ಸ್‌, ಪಂದ್ಯದ ಮಧ್ಯಭಾಗದಿಂದಲೇ ಹಿಡಿತ ಕಳೆದುಕೊಂಡಿತು. 10 ಪಾಯಿಂಟ್‌ಗಳ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಲಾರಂಭಿಸಿದ ಯುಪಿ ಯೋಧಾ ಕೊನೆಯಲ್ಲಿ 42–27ರಿಂದ ಗೆಲುವಿನ ನಗೆ ಬೀರಿತು.

ಯೋಧಾ ತಂಡದ ರೇಡರ್ ಶ್ರೀಕಾಂತ್ 15 ಪಾಯಿಂಟ್‌ಗಳನ್ನು ಗಳಿಸಿ ಬೆಂಗಳೂರು ಬುಲ್ಸ್‌ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಬುಲ್ಸ್ ಪರ ಭರವಸೆಯ ಆಟಗಾರ ಪವನ್‌ ಕುಮಾರ್ ಶೆರಾವತ್ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬರಲಿಲ್ಲ. ಇದು ಬುಲ್ಸ್‌ಗೆ ದೊಡ್ಡ ಹಿನ್ನಡೆಯಾಯಿತು. 17 ಬಾರಿ ರೇಡ್ ಮಾಡಿದ ಶೆರಾವತ್‌ಗೆ ಕೇವಲ 5 ಪಾಯಿಂಟ್ ಮಾತ್ರ ಗಳಿಸಿಕೊಡಲು ಸಾಧ್ಯವಾಯಿತು. ಇನ್ನೊಬ್ಬ ಪ್ರಮುಖ ಆಟಗಾರ ಭರತ್ 11 ಪಾಯಿಂಟ್‌ಗಳನ್ನು ಗಳಿಸಿದರು.

ಇದನ್ನೂ ಓದಿ: Anushka Sharma : ಪತಿ ಜೊತೆ ಪತ್ನಿಯೂ ಕ್ರಿಕೆಟ್ ಪ್ಲೇಯರ್ : ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅನುಷ್ಕಾ ಶರ್ಮಾ ಹೊಸ ಸಾಹಸ

ಪಂದ್ಯದ ಮೊದಲಾರ್ಧದಲ್ಲಿ ಯುಪಿ ಯೋಧಾ 19 ಪಾಯಿಂಟ್ ಗಳಿಸಿದ್ದರೆ, ಬುಲ್ಸ್ 14 ಅಂಕ ಗಳಿಸಿತ್ತು. ದ್ವಿತೀಯಾರ್ಧದಲ್ಲೂ ಹಿಡಿತ ಬಿಟ್ಟುಕೊಡದ ಯುಪಿ ಯೋಧಾ, ಕೊನೆಯಲ್ಲಿ 15 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಗೆಲುವು ದಾಖಲಿಸಿತು.
.
ಯುಪಿ ಯೋಧಾ ಪರ ನಾಯಕ ನಿತೀಶ್ ಕುಮಾರ್ 3 ಪಾಯಿಂಟ್ಸ್‌ ಗಳಿಸಿದರು.

ಬುಲ್ಸ್ ಈವರೆಗೆ 8 ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಟೈ ಆಗಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಜಯ ಗಳಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಸದ್ಯ ದಬಾಂಗ್ ಡೆಲ್ಲಿ ಮೊದಲ ಸ್ಥಾನದಲ್ಲಿ ಇದೆ. 2ನೇ ಸ್ಥಾನದಲ್ಲಿ ಪಟ್ನಾ ಪೈರೇಟ್ಸ್ ಇದ್ದರೆ, ಯುಪಿ ಯೋಧಾ 6ನೇ ಸ್ಥಾನಕ್ಕೇರಿದೆ.

Comments are closed.