Road Safety World Series 2022: ಸಚಿನ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಇಂಡಿಯಾ ಲೆಜೆಂಡ್ಸ್

ರಾಯ್ಪುರ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಲೆಜೆಂಡ್ಸ್ (India Legends champions) ತಂಡ, ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ (Road Safety World Series 2022) ಟೂರ್ನಿಯಲ್ಲಿ ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

ಛತ್ತೀಸ್’ಗಢದ ರಾಯ್ಪುರದಲ್ಲಿರುವ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಶ್ರೀಲಂಕಾ ಲೆಜೆಂಡ್ಸ್ (Sri Lanka Legends) ತಂಡವನ್ನು 33 ರನ್’ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು. ಕಳೆದ ಬಾರಿಯ ಫೈನಲ್’ನಲ್ಲೂ ಶ್ರೀಲಂಕಾ ತಂಡವನ್ನು ಸೋಲಿಸಿದ್ದ ಇಂಡಿಯಾ ಲೆಜೆಂಡ್ಸ್ ಪ್ರಶಸ್ತಿ ಗೆದ್ದಿತ್ತು.

ಮೊದಲು ಬ್ಯಾಟ್ ಮಾಡಿದ ಇಂಡಿಯಾ ಲೆಜೆಂಡ್ಸ್ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಮೆಗಾ ಫೈನಲ್ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದ್ರೂ, ಮತ್ತೊಬ್ಬ ಓಪನರ್ ನಮನ್ ಓಜಾ ಸಿಡಿಲಬ್ಬರದ ಶತಕ ಬಾರಿಸಿದರು. 71 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್’ಗಳ ನೆರವಿನಿಂದ ಅಜೇಯ 108 ರನ್ ಸಿಡಿಸಿದ ಓಜಾ ಇಂಡಿಯಾ ಲೆಜೆಂಡ್ಸ್’ನ ಬೃಹತ್ ಮೊತ್ತಕ್ಕೆ ಕಾರಣರಾದರು. 4ನೇ ಕ್ರಮಾಂಕದಲ್ಲಿ ಆಡಿದ ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ ಕುಮಾರ್ 21 ಎಸೆತಗಳಲ್ಲಿ 36 ರನ್ ಸಿಡಿಸಿದರು.

ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ಲೆಜೆಂಡ್ಸ್, ಇಶಾನ್ ಜಯರತ್ನೆ ಅವರ ಸ್ಫೋಟಕ ಅರ್ಧಶತಕದ ಹೊರತಾಗಿಯೂ 162 ರನ್ನಿಗೆ ಆಲೌಟಾಯಿತು. ದಿಗ್ಗಜ ಆರಂಭಿಕ ಬ್ಯಾಟ್ಸ್’ಮನ್ ಸನತ್ ಜಯಸೂರ್ಯ ಅವರನ್ನು ವಿನಯ್ ಕುಮಾರ್ ಕೇವಲ 5 ರನ್ನಿಗೆ ಕ್ಲೀನ್ ಬೌಲ್ಡ್ ಮಾಡಿದ್ರು. ಫೈನಲ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡದ ಪ್ಲೇಯಿಂಗ್ XI ನಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದದ್ದು ವಿಶೇಷ. ಈ ಪೈಕಿ ವಿನಯ್ ಕುಮಾರ್ ಬ್ಯಾಟಿಂಗ್ (36 ರನ್) ಮತ್ತು ಬೌಲಿಂಗ್’ನಲ್ಲಿ (3/38) ಮಿಂಚಿ ಆಲ್ರೌಂಡ್ ಆಟವಾಡಿದ್ರೆ, ವೇಗಿ ಅಭಿಮನ್ಯು ಮಿಥುನ್ 27 ರನ್ನಿಗೆ 2 ವಿಕೆಟ್ ಪಡೆದರು. ಮತ್ತೊಬ್ಬ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ 21 ರನ್ನಿಗೆ 1 ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್
ಇಂಡಿಯಾ ಲೆಜೆಂಡ್ಸ್: 20 ಓವರ್’ಗಳಲ್ಲಿ 195/6
(ನಮನ್ ಓಜಾ ಅಜೇಯ 108, ಆರ್.ವಿನಯ್ ಕುಮಾರ್ 36; ನುವಾನ್ ಕುಲಸೇಕರ 3/29, ಇಸುರು ಉದಾನ 2/34)

ಶ್ರೀಲಂಕಾ ಲೆಜೆಂಡ್ಸ್: 18.5 ಓವರ್’ಗಳಲ್ಲಿ 162/10
(ಇಶಾನ್ ಜಯರತ್ನೆ 51, ಮಹೇಲ ಉದವತ್ತೆ 26; ಆರ್.ವಿನಯ್ ಕುಮಾರ್ 3/38, ಅಭಿಮನ್ಯು ಮಿಥುನ್ 2/27, ಸ್ಟುವರ್ಟ್ ಬಿನ್ನಿ 1/21)
ಫಲಿತಾಂಶ: ಇಂಡಿಯಾ ಲೆಜೆಂಡ್ಸ್ ತಂಡಕ್ಕೆ 33 ರನ್ ಗೆಲುವು

ಇದನ್ನೂ ಓದಿ : Mayank Agarwal : ಡಿಯರ್ ಮಯಾಂಕ್ ; “ಹೀಗೇ ಆಡಿದ್ರೆ ಟೀಮ್ ಇಂಡಿಯಾ ಕಂಬ್ಯಾಕ್ ಕನಸು ಮರೆತು ಬಿಡಿ”

ಇದನ್ನೂ ಓದಿ : India vs South Africa T20 Series : ವಿಶ್ವಕಪ್‌ಗೂ ಮುನ್ನ ಕೊನೇ ಎರಡು ಪಂದ್ಯ; ಇನ್ನೂ ಸೆಟ್ಲ್ ಆಗಿಲ್ಲ ಟೀಮ್ ಇಂಡಿಯಾ ಪ್ಲೇಯಿಂಗ್ XI

Road Safety World Series 2022 India Legends became champions under Sachin Tendulkar

Comments are closed.