ಟೆನ್ನಿಸ್ ಬಾಲ್ ಕ್ರಿಕೆಟ್ ಲೋಕದ ದಂತಕತೆ ‘ಕೋಟ ಶಿವನಾರಾಯಣ ಐತಾಳ್ ’

0

ಟೆನ್ನಿಸ್ ಬಾಲ್ ಕ್ರಿಕೆಟ್ ಲೋಕದಲ್ಲಿ ಆಟಗಾರನಾಗಿ, ಸಂಘಟಕನಾಗಿ, ವೀಕ್ಷಕ ವಿವರಣೆಗಾರನಾಗಿ, ನಿರ್ಣಾಯಕನಾಗಿ, ತರಬೇತುದಾರನಾಗಿ… ಹೀಗೆ ಕ್ರಿಕೆಟ್ ನ ಎಲ್ಲಾ ಮಜಲುಗಳಲ್ಲಿಯೂ ಕಾರ್ಯನಿರ್ವಹಿಸೋ ತಾಕತ್ತು ಇರೋದು ಕೋಟದ ಶಿವನಾರಾಣ ಐತಾಳ್ ಅವರಿಗೆ ಮಾತ್ರ. ಕಳೆದ ಮೂರು ದಶಕಗಳಿಂದಲೂ ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ತನ್ನನ್ನು ತೊಡಿಸಿಕೊಂಡಿರೋ ಶಿವನಾರಾಯಣ್ ಐತಾಳ್ ರಾಜ್ಯದ ಕಂಡ ಶ್ರೇಷ್ಟ ಕ್ರಿಕೆಟ್ ಸಂಘಟಕ.

90ರ ದಶಕದಲ್ಲಿ ರಾಜ್ಯದ ಶ್ರೇಷ್ಟ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡವಾಗಿರೋ ಇಲೆವೆನ್ ಅಪ್ ಕೋಟ ತಂಡದಲ್ಲಿ ಆಫ್ ಸ್ಪಿನ್ ಎಸೆತನಾಗಿ, ಮಧ್ಯಮ ಕ್ರಮಾಂಕದ ದಾಂಡಿಗನಾಗಿ, ಶ್ರೇಷ್ಟ ಫೀಲ್ಡರ್ ಆಗಿ ಗುರುತಿಸಿಕೊಂಡವರು, ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ದಿಲ್ಶನ್ ಅವರ ದಿಲ್ಸ್ಕೂಪ್ ಹೊಡೆತಗಳನ್ನು ಟೆನ್ನಿಸ್ ಬಾಲ್ ಕ್ರಿಕೆಟ್ ಗೆ ಪರಿಚಯಿಸಿದವರು ಕೂಡ ಶಿವನಾರಾಯಣ ಐತಾಳ್. ಕೇವಲ ಆಟಗಾರನಾಗಿ ಅಷ್ಟೇ ಅಲ್ಲಾ, ಅಂದಿನ ಕಾಲದಲ್ಲೇ ಕೋಟದಲ್ಲಿ ಶಿವ ಸ್ಪೋರ್ಟ್ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿಕೊಂಡವರು.

90ರ ದಶಕದಿಂದಲೂ ಇಂದಿನವರೆಗೂ ಎಲ್ಲಿಯೇ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆದ್ರೂ ಕೂಡ ಅಲ್ಲಿ ಶಿವನಾರಾಯಣ್ ಅವರ ಕಾಮೆಂಟ್ರಿ ಇರಲೇ ಬೇಕು. ಕೋಟ ಶಿವನಾರಾಯಣ್ ಅವರ ಕಾಮೆಂಟ್ರಿ ಕೇಳದೆ ಇದ್ರೆ ಪಂದ್ಯಾವಳಿಯೇ ಸಪ್ಪೆ ಅನಿಸುತ್ತೆ, ಏನ್ನನೋ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅನ್ನೋ ಬಾವ ಪ್ರೇಕ್ಷಕರಿಗೆ ವ್ಯಕ್ತವಾಗುವುದರಲ್ಲಿ ಅನುಮಾನವೇ ಇಲ್ಲ.

ಕಾಮೆಂಟ್ರಿ ಬಾಕ್ಸ್ ನಲ್ಲಿ ಕುಳಿತು ಶಿವ ಕಾಮೆಂಟ್ರಿ ಹೇಳೋದಕ್ಕೆ ಶುರು ಮಾಡಿದ್ರು ಅಂದ್ರೆ ಸಾಕು ಪ್ರೇಕ್ಷಕರ ಕಿವಿನಿಮಿರುತ್ತೆ, ಪಂದ್ಯವನ್ನು ತುದಿಗಾಲಿನಲ್ಲಿ ನಿಲ್ಲಿಸೋ ತಾಕತ್ತು ಹೊಂದಿದ್ದಾರೆ. ತನ್ನ ವಿಭಿನ್ನ ಕಾಮೆಂಟರಿ ಮೂಲಕ ಕರ್ನಾಟಕದ ಹರ್ಷ ಬೋಗ್ಲೆ ಅಂತಾನೇ ಪ್ರಖ್ಯಾತಿಯನ್ನು ಪಡೆದಿರೋ ಶಿವನಾರಾಯಣ ಐತಾಳರು ಪಂದ್ಯಾವಳಿ ಯುದ್ದಕ್ಕೂ ಪಕ್ಕಾ ವಿಶ್ಲೇಷಣೆ ಮಾಡುತ್ತಾ, ಆಟಗಾರರನ್ನು ಎಚ್ಚರಿಸೋ ಕಲೆ ನಿಜಕ್ಕೂ ಅದ್ಬುತ.

ರಾಜ್ಯ, ರಾಷ್ಟ್ರ ಅಷ್ಟೇ ಅಲ್ಲಾ, ಅಂತರಾಷ್ಟ್ರೀಯ ಮಟ್ಟಕ್ಕೂ ಟೆನ್ನಿಸ್ ಬಾಲ್ ಕ್ರಿಕೆಟ್ ನ್ನು ಕೊಂದೊಯ್ಡಿದ್ದಾರೆ. ದೂರದ ದುಬೈ, ಅಬುದಾಬಿ ಸೇರಿದಂತೆ ಹಲವು ದೇಶಗಳಲ್ಲಿ ಕನ್ನಡ ಕಾಮೆಂಟ್ರಿ ಮೂಲಕ ವಿದೇಶದಲ್ಲಿ ನೆಲೆಸಿರೋ ಕನ್ನಡಗರ ಮನಗೆದ್ದಿದ್ದಾರೆ. ಮಂಗಳೂರು ಪ್ರಿಮಿಯರ್ ಲೀಗ್ (M.P.L), ಕೋಸ್ಟಲ್ ವುಡ್ ಪ್ರಿಮಿಯರ್ ಲೀಗ್ (C.P.L) ನ ವೀಕ್ಷಕ ವಿವರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಮಾತ್ರವಲ್ಲ ಐಪಿಎಲ್ ಮಾದರಿಯ ಪಂದ್ಯಗಳಲ್ಲಿ ಆಟಗಾರರ ಬಿಡ್ಡಿಂಗ್ ನಡೆಸುವುದರಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ವಿಶ್ವದಾದ್ಯಂತ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆದ್ರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಹೆಚ್ಚು ಪ್ರಖ್ಯಾತಿ. ಕುಂದಾಪುರ, ಪಡುಬಿದ್ರಿ, ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ನಡೆದ ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಸಂಘಟಿಸುವುದರ ಜೊತೆಗೆ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ತಾನಷ್ಟೇ ಅಲ್ಲಾ, ಕರಾವಳಿ ಭಾಗದಲ್ಲಿ ಹಲವು ಯುವ ವೀಕ್ಷಕ ವಿವರಣೆಗಾರನ್ನು ತರಬೇತುಗೊಳಿಸಿದ್ದಾರೆ. ಕನ್ನಡದ ಜನಶ್ರೀ, ಉದಯ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಪ್ರಸಾರವಾಗುವ ಕ್ರೀಡಾ ಕಾರ್ಯಕ್ರಮಗಳ ವಿಶ್ಲೇಷಕರಾಗಿ ಸುಮಾರು 200ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ ಖ್ಯಾತಿಯೂ ಇದೆ.

ಟೆನ್ನಿಸ್ ಬಾಲ್ ಕ್ರಿಕೆಟ್ ಲೋಕದಲ್ಲಿ ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುತ್ತಾ ಬಂದಿರೋ ಶಿವನಾರಾಯಣ ಐತಾಳ್, ಕರಾವಳಿ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿರುವ 30 ಗಜಗಳ ಕ್ರಿಕೆಟ್ ಪಂದ್ಯಾವಳಿಯನ್ನು ರಾಜ್ಯಕ್ಕೆ ಪರಿಚಯಿಸಿದ್ದು ಶಿವನಾರಾಯಣ ಐತಾಳ್ ಅವರು ಪ್ರತಿನಿಧಿಸುತ್ತಿದ್ದ ಇಲೆವೆನ್ ಅಪ್ ಕೋಟ ತಂಡ.

ನಂತರದಲ್ಲಿ ಡಬ್ಬಲ್ ವಿಕೆಟ್ ಕ್ರಿಕೆಟ್ ಪಂದ್ಯಾಟ, ಟೆನ್ನಿಸ್ ಬಾಲ್ ನಲ್ಲಿ ಐಪಿಎಲ್, ಕೆಪಿಎಲ್ ಮಾದರಿಯ ಪಂದ್ಯಾವಳಿಗಳನ್ನು ಅತ್ಯುತ್ತಮವಾಗಿ ಪಂದ್ಯಾಕೂಟವನ್ನು ಆಯೋಜಿಸೋ ಸಂಘಟನಾ ಚತುರರೂ ಹೌದು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 2000ರಲ್ಲಿ ನಡೆಸಿದ್ದ ಅಂಪಾಯರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿರೋ ಕೋಟದ ಶಿವನಾರಾಯಣ್ ಐತಾಳರು, ಲೆದರ್ ಬಾಲ್ ಲೀಗ್ ಪಂದ್ಯಾವಳಿಗಳಲ್ಲಿ ಅಂಪಾಯರ್ ಆಗಿ ಕಾರ್ಯ ನಿರ್ವಹಿಸುತ್ತಾ ಇರೋ ಉಡುಪಿ ಜಿಲ್ಲೆಯ ಅತೀ ಕಿರಿಯ ಅಂಗೀಕೃತ ಅಂಪಾಯರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ದುಬೈನಲ್ಲಿ ನಡೆದ ಅರಬ್ ಪ್ರೀಮಿಯರ್ ಲೀಗ್ ನಲ್ಲಿಯೂ ಕಾರ್ಯನಿರ್ವಹಿಸಿದ ಖ್ಯಾತಿ ಇವರಿಗಿದೆ.

ಕೇವಲ ಕ್ರಿಕೆಟ್ ಅಷ್ಟೇ ಅಲ್ಲಾ ಸಾಮಾಜಿಕ ಸೇವೆಗೂ ತನ್ನನ್ನು ಮುಡಿಪಾಗಿಟ್ಟಿದ್ದಾರೆ. ಕೋಟ – ಸಾಲಿಗ್ರಾಮ ರೋಟರ್ಯಾಕ್ಟ್ ಕ್ಲಬ್ ನ ಸ್ಥಾಪಕ ಕಾರ್ಯದರ್ಶಿಯಾಗಿ ಸುಮಾರು 13 ವರ್ಷಗಳ ಕಾಲ ಕೋಟ-ಸಾಲಿಗ್ರಾಮ ರೋಟರ್ಯಾಕ್ಟ್ ಕ್ಲಬ್, ಸಾಲಿಗ್ರಾಮ ರೋಟರಿ, ಸಾಲಿಗ್ರಾಮ ಜೆಸಿಐ ಸೇರಿದಂತೆ ಹಲವು ಸಮಾಜಸೇವಾ ಸಂಘಟನೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ತನ್ನೂರಿನ ಮಕ್ಕಳನ್ನು ವಿಶ್ವಮಟ್ಟಕ್ಕೆ ಪರಿಚಯಿಸಬೇಕೆಂಬ ಕನಸು ಹೊತ್ತವರು ಶಿವನಾರಾಯಣ ಐತಾಳರು. ತನ್ನೂರಲ್ಲೊಂದು ಕ್ರಿಕೆಟ್ ಅಕಾಡೆಮಿ ಆರಂಭಿಸಿ ಮಕ್ಕಳಿಗೆ ಲೆದರ್ ಬಾಲ್ ಕ್ರಿಕೆಟ್ ತರಬೇತಿ ನೀಡೋ ಮಹದಾಸೆಯನ್ನು ಹೊಂದಿದ್ದಾರೆ. ತಾನಷ್ಟೇ ಅಲ್ಲ ತನ್ನ ಮಗನನ್ನೂ ಕೂಡ ತನ್ನ ಹಾದಿಯಲ್ಲಿಯೇ ಮುನ್ನಡೆಸುತ್ತಿದ್ದಾರೆ. ಆಂಗ್ಲ ಮಾಧ್ಯಮ ವೀಕ್ಷಕ ವಿವರಣೆಗಾರನಾಗಿ ಈಗಾಗಲೇ ಗುರುತಿಸಿಕೊಂಡಿದ್ದಾನೆ. ಕ್ರಿಕೆಟ್ ಲೋಕದಲ್ಲಿ ಸಾಧನೆಯ ಶಿಖರವೇರಿರೋ ಕೋಟದ ಶಿವನಾರಾಯಣ್ ಐತಾಳ್ ಅವರ ಕನಸು ಕೈಗೂಡಲಿ. ಟೆನ್ನಿಸ್ ಬಾಲ್ ಕ್ರಿಕೆಟ್ ನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತಾಗಲಿ ಅನ್ನೋದು ನ್ಯೂಸ್ ನೆಕ್ಸ್ಟ್ ಆಶಯ..

Leave A Reply

Your email address will not be published.