ಆ ರಾತ್ರಿ ಕಿಟಾರನೆ ಚೀರಿದ್ಲು ಚೆಂದದ ಹೆಣ್ಣು ಮಗಳು..! ಒಮ್ಮೆ ನಗ್ತಾಳೆ..ಮತ್ತೊಮ್ಮೆ ಅಳ್ತಾಳೆ…! ನಿಜಕ್ಕೂ ಇದು ಭಾನಾಮತಿನಾ..? ಕಾಡುತ್ತಿತ್ತು ಪ್ರಶ್ನೆ..!! ಭಾಗ -16

0

ನೋಡಪ್ಪಾ.… ಇಲ್ಲಿ ಭಾನಾಮತಿ ಅಂದ್ರೆ ಪವರ್ ಫುಲ್… ಅದನ್ನು ತಾತ್ಸಾರ ಮಾಡುವಂತಿಲ್ಲ… ನಾನು ಕೂಡ ನಂಬಲ್ಲ…ಆದ್ರೂ ಕೆಲ ಪ್ರಸಂಗಗಳು ನಂಬಿಕೆ ಹುಟ್ಟಿಸ್ತವೆ..ಮಾತು ಮುಂದುವರಿಸಿದ್ರು ಸೀನಿಯರ್ ಸಿಟಿಜನ್ ಕುಲಕರ್ಣಿ ಅಜ್ಜ… ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ ಭಾನಾಮತಿ ಅಂದ್ರೆ ಬೆದರುತ್ತಾರೆ ಎನ್ನುತ್ತಿರುವಾಗಲೇ ನಾನು ಅಡ್ಡ ಬಾಯಿ ಹಾಕಿದ್ದೇ. ಕೊಳ್ಳೇಗಾಲದ ಮಾಂತ್ರಿಕರಂತೆ ಇಲ್ಲೂ ಕೂಡ ಭಾನಮತಿ ಮಾಡುವ ಮಾಂತ್ರಿಕರಿದ್ದಾರಾ..ತಾತಾ..? ಅಂತ ನಾನು ಪ್ರಶ್ನೆ ಕೇಳಿದ್ದೆ. ಕುಲಕರ್ಣಿ ತಾತ ಭಾನಾಮತಿಯ ಬಗ್ಗೆ ಎಳೆಎಳೆಯನ್ನು ಬಿಚ್ಚಿಡೋಕೆ ಮಟ್ಟಸವಾಗಿ ಕುಳಿತುಬಿಟ್ಟಿದ್ದರು..

ಅಂದಹಾಗೆ ಇಲ್ಲೊಂದು ಇಂಟರೆಸ್ಟಿಂಗ್ ಸಂಗತಿ ಏನಪ್ಪಾ ಅಂದ್ರೆ ಕುಲಕರ್ಣಿ ತಾತ ನಮಗೆ ಭಾನಾಮತಿಯ ಇನ್ನೂರು ವರ್ಷಗಳ ಇತಿಹಾಸವನ್ನು ಹೇಳೋಕೆ ಶುರು ಮಾಡಿದ್ರು… ಆದ್ರೆ ನೂರಕ್ಕೆ ನೂರು ಪರ್ಸೆಂಟ್ ಅವರಿಗೆ ಭಾನಾಮತಿಯ ಮೇಲೆ ನಂಬಿಕೆ ಇರಲಿಲ್ಲ. ಹೀಗಾಗಿಯೇ ನಾನು ಭಾನಾಮತಿಯ ಲೇಖನ ಬರೀಬೇಕು ಅಂದೊಡನೆ ಅವರ ಬಾಯಿಯಿಂದ ಹೊರಟ ಮೊದಲ ಶಬ್ದ… ಅದೆಲ್ಲಾ ಸುಳ್ಳು… ಅಂತ. ಆದ್ರೂ ಈ ಭಾಗದಲ್ಲಿ ಭಾನಾಮತಿ ಸುಳ್ಳು ಅಂದ್ರೆ ನಂಬೋಕೆ ಯಾರೊಬ್ಬರೂ ತಯಾರಿಲ್ಲ… ಅಷ್ಟರ ಮಟ್ಟಿಗೆ ಇಲ್ಲಿ ಮೂಢ ನಂಬಿಕೆ ಗಾಢವಾಗಿ ಬೇರು ಬಿಟ್ಟಿದೆ..

ಅದೇನು ಕಾಕತಾಳೀಯವೋ ಏನೋ ಆ ದಿನ ನಾವು ಸೂರ್ಯಕಾಂತ ಶಿರೂರ ಮನೆಯಲ್ಲಿ ಉಳಿದುಕೊಂಡಿದ್ದಾಗಲೇ ಒಂದು ಘ‍ಟನೆ ಜರುಗಿತ್ತು… ರಾತ್ರಿ ಹತ್ತನ್ನೊಂದು ಗಂಟೆ ಸಮಯವಿರಬೇಕು…. ಇದ್ದಕ್ಕಿದ್ದಂತೆ ಕೇಳಿಸಿತ್ತು ಕಿಟಾರನೆ ಚೀರುವ ಶಬ್ದ… ಅದು ಹೆಣ್ಣು ಮಗಳೊಬ್ಬಳ ಧ್ವನಿ… ಪಕ್ಕದಲ್ಲೇ ಮಲಗಿದ್ದ ಸೂರ್ಯಕಾಂತನನ್ನ ತಿವಿದು ಏನದು ಅಂದೆ… ಮಲಗಿ ಸಾರ್… ಏನ್ ತೊಂದ್ರೆ ಇಲ್ಲ ಅಂತ ಹೇಳಿದ್ದ… ಯಾರೋ ಹೆಣ್ಣುಮಗಳು ಕಿರುಚಿದಂತೆ ಆಯಿತಲ್ಲ… ಏನದು ಅಂತ ಮತ್ತೆ ಕೇಳಿದ್ದೆ … ಆ ಹುಡುಗ ಒಳಗೊಳಗೆ ಬೈದುಕೊಂಡು ನಗುತ್ತಲೇ ಏನು ಅದೃಷ್ಟ ಸಾರ್ ನಿಮ್ದು ಅಂದಿದ್ದ….

ಯಾಕಪ್ಪಾ ಅಂತ ವ್ಯಂಗ್ಯವಾಗಿ ಕೇಳಿದ್ದೆ… ಆಗಲೇ ಅವನು ಹೇಳಿದ ಕಥೆ ಕೇಳಿ ಬೆಚ್ಚಿ ಬಿದ್ದಿದ್ದು ನಾನು ಕುತೂಹಲ ತಡೆಯಲಾಗಲಿಲ್ಲ. ಎದ್ದು ನಿಂತವನೇ ಸೂರ್ಯಕಾಂತ ಶಿರೂರನನ್ನ ಕರೆದುಕೊಂಡು ಶಬ್ದ ಬಂದ ಮನೆಯ ಕಡೆಗೆ ಹೊರಟೆ…ಅಲ್ಲಿ ಕಿರುಚಿಕೊಂಡ ಹುಡುಗಿಯ ಹೆಸರು ಸುಮಿತ್ರಾ ಬಾಯಿ… ಚೆಂದದ ಹೆಣ್ಣು ಮಗಳು…ಪಿಯುಸಿ ಪರೀಕ್ಷೆಯನ್ನು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದ್ಲು… ಪ್ರಥಮ ಬಿಎಸ್ಸಿಗೆ ಸೇರಿಕೊಂಡಿದ್ಲು….ಆಕೆಯ ಮನೆಯ ಬಾಗಿಲಿಗೆ ನಾವು ಹೋಗಿ ನಿಲ್ಲುವಷ್ಟರಲ್ಲಿ ಆಕೆಯ ಸಣ್ಣ ಬಯೋಡೇಟಾ ಹೇಳಿದ್ದ ಸೂರ್ಯಕಾಂತ ಶಿರೂರ. ಇಂತಹ ಹುಡುಗಿ ನಡುರಾತ್ರಿಯಲ್ಲಿ ಯಾಕೆ ಕಿರುಚಿಕೊಂಡಳು..? ಗೋಡೆಗೆ ಗೋಡೆಯನ್ನು ಆನಿಸಿಕೊಂಡಿರುವ ಮನೆಗಳಿಗೆಲ್ಲ ಇವಳ ಕಿರುಚಾಟ ಕೇಳಿಸಿತ್ತು… ಜೋರಾಗಿ ಕಿರುಚಿಕೊಂಡು ಅಳೋದು… ಒಮ್ಮೊಮ್ಮೆ ಮಾತ್ರ ನಗೋದು ಮಾಡ್ತಿದ್ಲು… ಅವಳ ಆ ಧ್ವನಿ ಇಡೀ ಊರನ್ನೆ ಅಲ್ಲಿ ಸೇರುವಂತೆ ಮಾಡಿತ್ತು…

ಈ ರೀತಿ ಮೂರ್ನಾಲ್ಕು ತಿಂಗಳಿಂದೀಚೆಗೆ ಆಡೋಕೆ ಶುರು ಮಾಡಿದ್ದಳಂತೆ… ನಮ್ಮ ಹಿಂದೆಯೇ ಹೆಜ್ಜೆ ಹಾಕಿಕೊಂಡು ಬಂದಿದ್ದರು ಕುಲಕರ್ಣಿ ಅಜ್ಜ… ಏನಿದು..? ಯಾಕಿಂಗೆ..? ಎಂದು ಪ್ರಶ್ನಿಸಿದರೆ ಅಲ್ಲಿ ಉತ್ತರಿಸುವವರು ಯಾರು ಇಲ್ಲ…. ಖಂಡಿತಾ…ಕುಲಕರ್ಣಿ ಅಜ್ಜನ ಹೊರತಾಗಿ ಯಾರಿಂದಲೂ ಉತ್ತರ ಸಿಗಲ್ಲ ಅನ್ನೋದು ಕನ್ಫರ್ಮ್ ಆಗಿತ್ತು… ಎಲ್ಲಿ ಬಾಯಿ ಬಿಟ್ಟರೆ ಬಾಯಿ ಸೇದಿ ಹೋಗುತ್ತದೋ ಅನ್ನೋ ಭಯ… ಕುಲಕರ್ಣಿ ಅಜ್ಜ ಮಾತ್ರ  ಧೈರ್ಯ ಮಾಡಿ ಸ್ವಾಮ್ಯಾರ… ಇದು ಭಾನಾಮತಿ ಐತ್ರಿ….ಯಾರೋ ಈಕೆಗೆ ಭಾನಾಮತಿ ಮಾಡ್ಯಾರ್ರೀ ಎಂದು  ಉಸುರಿದ್ರು….
ನಿಜಕ್ಕೂ ಅದು ಭಾನಾಮತಿಯ..? ಯಾರೋ ಮಾಟ ಮಾಡಿಸಿದ್ದಕ್ಕೆ ಈ ಹುಡುಗಿ ಈ ರೀತಿ ನಡು ರಾತ್ರಿ ಕಿರುಚಿಕೊಳ್ಳುತ್ತಿದ್ದಾಳಾ…? ಅಥವಾ ಅದು ಮನೋ ವಿಕಲತೆಯ..? ಉತ್ತರಕ್ಕಾಗಿ ನೀವು ಮುಂದಿನ ಸಂಚಿಕೆಯನ್ನ ಕಾಯಲೇಬೇಕು…

ಮುಂದುವರಿಯುತ್ತದೆ...

  • ಕೆ.ಆರ್.ಬಾಬು 

Leave A Reply

Your email address will not be published.