FIFA World Cup Final : ಸ್ಪೆಷಲ್ ಸ್ಕ್ರೀನ್‌ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರು


ಢಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರು ಫಿಫಾ ವಿಶ್ವಕಪ್ ಫೈನಲ್ (FIFA World Cup Final – 2022) ಪಂದ್ಯವನ್ನು ವಿಶೇಷ ಸ್ಕ್ರೀನ್’ನಲ್ಲಿ ವೀಕ್ಷಿಸಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿರುವ ಫೋಟೋಗಳನ್ನು ಬಿಸಿಸಿಐ ತನ್ನ
ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಟೀಮ್ ಇಂಡಿಯಾ ಆಟಗಾರರ ಪೈಕಿ ಮಾಜಿ ನಾಯಕ ವಿರಾಟ್ ಕೊಹ್ಲಿ ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೊ ಅವರ ದೊಡ್ಡ ಅಭಿಮಾನಿ. ಪೋರ್ಚುಗಲ್ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕ್ಕೋ ವಿರುದ್ಧ ಸೋತು ಹೊರ ಬಿದ್ದಾಗ ಕ್ರಿಸ್ಚಿಯಾನೊ ರೊನಾಲ್ಡೊ ಪರ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದರು.

ಇನ್ನು ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ನಾಯಕ ಕೆ.ಎಲ್ ರಾಹುಲ್ ಅವರಿಗೆ ಸುದ್ದಿಗೋಷ್ಠಿಯಲ್ಲಿ ಫಿಫಾ ವಿಶ್ವಕಪ್ ಫೈನಲ್ ಕುರಿತ ಪ್ರಶ್ನೆ ಎದುರಾಗಿತ್ತು. ಅರ್ಜೆಂಟೀನಾ ಮತ್ತು ಫ್ರಾನ್ಸ್ ತಂಡಗಳ ಮಧ್ಯೆ ಟೀಮ್ ಇಂಡಿಯಾ ಆಟಗಾರರ ಬೆಂಬಲ ಯಾರಿಗೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ “ನಮ್ಮ ತಂಡದ ಬಹುತೇಕ ಆಟಗಾರರು ಬ್ರೆಜಿಲ್ ಮತ್ತು ಇಂಗ್ಲೆಂಡ್ ತಂಡಗಳ ಅಭಿಮಾನಿಗಳು. ಆ ಎರಡೂ ತಂಡಗಳು ಈಗಾಗ್ಲೇ ಹೊರ ಬಿದ್ದಿವೆ. ಹೀಗಾಗಿ ಫೈನಲ್’ನಲ್ಲಿ ಎರಡೂ ತಂಡಗಳಿಗೆ ನಮ್ಮ ಬೆಂಬಲ” ಎಂದಿದ್ದರು.

ಕತಾರ್’ನ ಲುಸೈಲ್ ಫುಟ್ಬಾಲ್ ಸ್ಟೇಡಿಯಂನಲ್ಲಿ ಸೂಪರ್ ಸಂಡೇ ನಡೆದ ಫಿಫಾ ವಿಶ್ವಕಪ್ ಟೂರ್ನಿಯ (Fifa world cup 2022) ರೋಚಕ ಫೈನಲ್ ಹಣಾಹಣಿಯಲ್ಲಿ ಲಿಯೋನಲ್ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ (Argentina) ಹಾಲಿ ಚಾಂಪಿಯನ್ ಫ್ರಾನ್ಸ್ (France) ತಂಡವನ್ನು ಪೆನಾಲ್ಟಿ ಶೂಟೌಟ್’ನಲ್ಲಿ 4-2 ಅಂತರದಲ್ಲಿ ಸೋಲಿಸಿ 36 ವರ್ಷಗಳ ನಂತರ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿತು. 1986ರಲ್ಲಿ ಡಿಯಾಗೊ ಮರಡೋನಾ ನಾಯಕತ್ವದಲ್ಲಿ ಫಿಫಾ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾ ಮತ್ತೊಂದು ವಿಶ್ವಕಪ್’ಗಾಗಿ 36 ವರ್ಷಗಳ ಕಾಲ ಕಾಯಬೇಕಾಯಿತು. ಈ ಕಾಯುವಿಕೆಗೆ ಲಿಯೋನಲ್ ಮೆಸ್ಸಿ ಅಂತ್ಯ ಹಾಡಿದ್ದಾರೆ. ಮೂರೂವರೆ ದಶಕಗಳ ನಂತರ ಅರ್ಜೆಂಟೀನಾಗೆ ವಿಶ್ವಕಪ್ ಗೆದ್ದುಕೊಟ್ಟಿರುವ ಮೆಸ್ಸಿ, ತನ್ನ ಜೀವನದ ದೊಡ್ಡ ಕನಸನ್ನೂ ನನಸಾಗಿಸಿಕೊಂಡಿದ್ದಾರೆ.

ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಪೂರ್ಣಾವಧಿಯಲ್ಲಿ 3-3ರ ಅಂತರದಲ್ಲಿ ಸಮಬಲಗೊಂಡಿತ್ತು. ಅರ್ಜೆಂಟೀನಾ ಪರ ನಾಯಕ ಲಿಯೋನಲ್ ಮೆಸ್ಸಿ 23ನೇ ನಿಮಿಷ (ಪೆನಾಲ್ಟಿ) ಮತ್ತು 108ನೇ ನಿಮಿಷದಲ್ಲಿ ಡಬಲ್ ಗೋಲು ದಾಖಲಿಸಿದ್ರೆ, ಏಂಜಲ್ ಡಿ ಮಾರಿಯಾ 36ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಮತ್ತೊಂದು ಗೋಲು ಗಳಿಸಿದರು.79ನೇ ನಿಮಿಷದವರೆಗೆ ಗೋಲು ಗಳಿಸಲು ವಿಫಲವಾದ ಫ್ರಾನ್ಸ್, 80ನೇ ನಿಮಿಷದಲ್ಲಿ ಗೋಲುಗಳ ಸುರಿಮಳೆಗೈಯಿತು. ತಂಡದ ಸ್ಟಾರ್ ಸ್ಟ್ರೈಕರ್ ಕೈಲಿಯನ್ ಎಂಬಾಪೆ ಅರ್ಜೆಂಟೀನಾ ಕೋಟೆಯೊಳಗೆ ಗೂಳಿಯಂತೆ ನುಗ್ಗಿ 80ನೇ ನಿಮಿಷ (ಪೆನಾಲ್ಟಿ), 81 ಹಾಗೂ 118ನೇ ನಿಮಿಷದಲ್ಲಿ (ಪೆನಾಲ್ಟಿ) ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು.

ಇದನ್ನೂ ಓದಿ : Lionel Messi Fifa World cup: ಕೊನೆಗೂ ನನಸಾಯ್ತು ಮೆಸ್ಸಿ ಕನಸು, ಜೀವನದ ಅತೀ ದೊಡ್ಡ ಕ್ಷಣಕ್ಕೆ ಸಾಕ್ಷಿಯಾದ ಅರ್ಜೆಂಟೀನಾ ಸೂಪರ್ ಸ್ಟಾರ್

ಇದನ್ನೂ ಓದಿ : Karnataka Players IPL Auction 2023: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಕರ್ನಾಟಕ ಆಟಗಾರರ ಕಂಪ್ಲೀಟ್ ಲಿಸ್ಟ್

ಹೀಗಾಗಿ ಫಲಿತಾಂಶ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್’ನಲ್ಲಿ ಒತ್ತಡ ಮೆಟ್ಟಿ ನಿಂತ ಅರ್ಜೆಂಟೀನಾ 4-2ರ ಅಂತರದಲ್ಲಿ ಜಯಭೇರಿ ಬಾರಿಸಿ ವಿಶ್ವಕಪ್ ಮುಡಿಗೇಸಿಕೊಂಡಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಮೂಡಿ ಬಂದ ಲಿಯೋನಲ್ ಮೆಸ್ಸಿ ಈ ವಿಶ್ವಕಪ್’ನಲ್ಲಿ ಆಡಿದ 7 ಪಂದ್ಯಗಳಿಂದ 7 ಗೋಲು ಗಳಿಸಿ ಅರ್ಜೆಂಟೀನಾ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಫೈನಲ್’ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಫ್ರಾನ್ಸ್ ತಂಡದ ಸೂಪರ್ ಸ್ಟಾರ್ ಸ್ಟ್ರೈಕರ್ ಕೈಲಿಯನ್ ಎಂಬಾಪೆ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Team India players watched the FIFA World Cup final match on a special screen

Comments are closed.