KL Rahul Training at NCA : ಕೆ.ಎಲ್ ರಾಹುಲ್ ಬ್ಯಾಟಿಂಗ್ ; ದಿಗ್ಗಜ ಮಹಿಳಾ ಕ್ರಿಕೆಟರ್ ಬೌಲಿಂಗ್, NCAನಲ್ಲಿ ಭರ್ಜರಿ ಪ್ರಾಕ್ಟೀಸ್

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಕಂಬ್ಯಾಕ್ ( KL Rahul Training at NCA ) ಹಾದಿಯಲ್ಲಿದ್ದಾರೆ. ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ರಾಹುಲ್ ಟ್ರೈನಿಂಗ್’ಗೆ ಮರಳಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಎನ್’ಸಿಎನಲ್ಲಿ ರಾಹುಲ್ ಅವರ ಬ್ಯಾಟಿಂಗ್ ಅಭ್ಯಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದ ದಿಗ್ಗಜ ವೇಗದ ಬೌಲರ್ ಜೂಲನ್ ಗೋಸ್ವಾಮಿ ನೆರವಾಗುತ್ತಿದ್ದಾರೆ. ರಾಹುಲ್ ಅವರಿಗೆ ನೆಟ್ಸ್”ನಲ್ಲಿ ನೆಟ್ ಬೌಲರ್”ಗಳ ಜೊತೆ ಜೂಲನ್ ಗೋಸ್ವಾಮಿ ಕೂಡ ಬೌಲಿಂಗ್ ಮಾಡುತ್ತಿದ್ದಾರೆ.

ಸ್ಪೋರ್ಟ್ಸ್ ಹರ್ನಿಯಾ ಗಾಯದಿಂದ ಚೇತರಿಸಿಕೊಂಡಿರುವ 29 ವರ್ಷದ ಕೆ.ಎಲ್ ರಾಹುಲ್ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ (India Vs West Indies) ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿವೆ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದಾರೆ. ಆದರೆ ಸರಣಿಗೂ ಮುನ್ನ ರಾಹುಲ್ ಫಿಟ್”ನೆಸ್ ಸಾಬೀತು ಪಡಿಸಬೇಕಿದೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದರಷ್ಟೇ ರಾಹುಲ್ ವೆಸ್ಟ್ ಇಂಡೀಸ್ ಫ್ಲೈಟ್ ಹತ್ತಲಿದ್ದಾರೆ.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗೂ ಮುನನ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಗೆ ತುತ್ತಾಗಿದ್ದ ರಾಹುಲ್, ಗಾಯದ ಕಾರಣದಿಂದ ಹರಿಣಗಳ ವಿರುದ್ಧದ ಸರಣಿಗೆ ಅಲಭ್ಯರಾಗಿದ್ದರು. ಆ ಸರಣಿಯಲ್ಲಿ ರಾಹುಲ್ ಭಾರತ ತಂಡದ ನಾಯಕತ್ವ ವಹಿಸಬೇಕಿತ್ತು. ರಾಹುಲ್ ಅಲಭ್ಯತೆಯ ಕಾರಣ ವಿಕೆಟ್ ಕೀಪರ್ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ದಕ್ಷಿಣ ಆಫ್ರಿಕಾ ಸರಣಿಯನ್ನು ತಪ್ಪಿಸಿಕೊಂಡಿದ್ದ ರಾಹುಲ್ ಇಂಗ್ಲೆಂಡ್ ಪ್ರವಾಸದಿಂದಲೂ ಹೊರ ಬಿದ್ದಿದ್ದರು.

ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೆ ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಹೀಗಾಗಿ ಸ್ಪೋರ್ಟ್ಸ್ ಹರ್ನಿಯಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಳೆದ ತಿಂಗಳು ಜರ್ಮನಿಯಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಜರ್ಮನಿಯಿಂದ ಬೆಂಗಳೂರಿಗೆ ಮರಳಿದ್ದ ರಾಹುಲ್, ಈಗ ಅಭ್ಯಾಸಕ್ಕೆ ಮರಳಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸತತ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.

ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕೆ.ಎಲ್ ರಾಹುಲ್, ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಯೋ-ಯೋ ಟೆಸ್ಟ್’ಗೆ ಒಳಗಾಗಲಿದ್ದಾರೆ. ಯೋ-ಯೋ ಟೆಸ್ಟ್’ನಲ್ಲಿ ಪಾಸಾಗಿ ಫಿಟ್ನೆಸ್ ಸಾಬೀತು ಪಡಿಸಿದರೆ ಮಾತ್ರ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ರಾಹುಲ್ ಆಡಲಿದ್ದಾರೆ. ಇಂಗ್ಲೆಂಡ್”ನಲ್ಲಿ ಏಕದಿನ ಹಾಗೂ ಟಿ20 ಸರಣಿಗಳನ್ನು ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್’ನಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಏಕದಿನ ಸರಣಿ ಜುಲೈ 22ರಂದು (ಶುಕ್ರವಾರ) ಆರಂಭವಾಗಲಿದ್ದು, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಿರಿಯ ಎಡಗ ಓಪನರ್ ಶಿಖರ್ ಧವನ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜುಲೈ 29ರಂದು ನಡೆಯಲಿದ್ದು, ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ.

ಭಾರತ Vs ವೆಸ್ಟ್ ಇಂಡೀಸ್: ಏಕದಿನ ಸರಣಿಯ ವೇಳಾಪಟ್ಟಿ
ಜುಲೈ 22: ಮೊದಲ ಏಕದಿನ ಪಂದ್ಯ (ಟ್ರಿನಿಡಾಡ್)
ಜುಲೈ 24: ಎರಡನೇ ಏಕದಿನ ಪಂದ್ಯ (ಟ್ರಿನಿಡಾಡ್)
ಜುಲೈ 27: ಮೂರನೇ ಏಕದಿನ ಪಂದ್ಯ (ಟ್ರಿನಿಡಾಡ್)

ಭಾರತ Vs ವೆಸ್ಟ್ ಇಂಡೀಸ್: ಟಿ20 ಸರಣಿಯ ವೇಳಾಪಟ್ಟಿ
ಜುಲೈ 29: ಮೊದಲ ಟಿ20 ಪಂದ್ಯ (ಟ್ರಿನಿಡಾಡ್)
ಆಗಸ್ಟ್ 01: ಎರಡನೇ ಟಿ20 ಪಂದ್ಯ (ಸೇಂಟ್ ಕಿಟ್ಸ್)
ಆಗಸ್ಟ್ 02: ಮೂರನೇ ಟಿ20 ಪಂದ್ಯ (ಸೇಂಟ್ ಕಿಟ್ಸ್)
ಆಗಸ್ಟ್ 06: ನಾಲ್ಕನೇ ಟಿ20 ಪಂದ್ಯ (ಫ್ಲೋರಿಡಾ)
ಆಗಸ್ಟ್ 07: ಐದನೇ ಟಿ20 ಪಂದ್ಯ (ಫ್ಲೋರಿಡಾ)

ಇದನ್ನೂ ಓದಿ : ಸೂರ್ಯಕುಮಾರ್ ಯಾದವ್ ಯಶಸ್ಸಿನ ಹಿಂದೆ ರೋಹಿತ್ ಶರ್ಮಾ ಪಾತ್ರ ; ರಹಸ್ಯ ಬಿಚ್ಚಿಟ್ಟ SKY !

ಇದನ್ನೂ ಓದಿ : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Team India vice Captain KL Rahul Training at NCA

Comments are closed.