Pro Kabaddi League : ಪ್ರೊ ಕಬಡ್ಡಿ ಲೀಗ್‌ನ ಮೊದಲ ದಿನ ಇರಾನ್ ಆಟಗಾರರು ಕಾಣಲಿಲ್ಲವೇಕೆ..? ಇಲ್ಲಿದೆ ಅಸಲಿ ಗುಟ್ಟು

ಬೆಂಗಳೂರು: Pro Kabaddi League Iranian players: ಪ್ರೊ ಕಬಡ್ಡಿ ಲೀಗ್-9ನೇ ಆವೃತ್ತಿಯ ಟೂರ್ನಿಗೆ ಶುಕ್ರವಾರ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಆದರೆ ಮೊದಲ ದಿನ ನಡೆದ ಮೂರು ಪಂದ್ಯಗಳಲ್ಲಿ ಆಡಿದ ಆರು ತಂಡಗಳಲ್ಲಿ ಒಬ್ಬನೇ ಒಬ್ಬ ಇರಾನ್ ಆಟಗಾರ ಕಾಣಲಿಲ್ಲ. ಪ್ರೊ ಕಬಡ್ಡಿ ಲೀಗ್’ನ ರೋಚಕತೆಯನ್ನು ಹೆಚ್ಚಿಸಿರುವ ಇರಾನ್’ನ ಸ್ಟಾರ್ ಆಟಗಾರರು ವೀಸಾ ಸಮಸ್ಯೆಯ ಕಾರಣ ಟೂರ್ನಿ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ವೀಸಾ ಸಮಸ್ಯೆಯ ಕಾರಣದಿಂದ ಇರಾನ್ ಆಟಗಾರರು ಇನ್ನೂ ಭಾರತಕ್ಕೆ ಆಗಮಿಸಿಲ್ಲ. ಹೀಗಾಗಿ ಟೂರ್ನಿಯ ಮೊದಲ ಹಂತದ ಕೆಲ ಪಂದ್ಯಗಳಿಗೆ ಲಭ್ಯರಿಲ್ಲ. ಇರಾನ್’ನ ಒಟ್ಟು 13 ಆಟಗಾರರನ್ನು ವಿವಿಧ ಫ್ರಾಂಚೈಸಿಗಳು ಇತ್ತೀಚೆಗೆ ನಡೆದ ಹರಾಜಿನಲ್ಲಿ ಖರೀದಿಸಿದ್ದವು. ಪ್ರೊ ಕಬಡ್ಡಿ ಲೀಗ್ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಿದ್ದ ಇರಾನ್ ಆಟಗಾರರು ಕೆಲ ದಿನಗಳ ಹಿಂದಷ್ಟೇ ಭಾರತದಿಂದ ಇರಾನ್’ಗೆ ಮರಳಿದ್ದರು. ಆದರೆ ವಾಪಸ್ ಭಾರತಕ್ಕೆ ಬರುವ ಪ್ರಕ್ರಿಯೆಯಲ್ಲಿ ವೀಸಾ ಸಮಸ್ಯೆ ಎದುರಾಗಿದೆ.

ಇರಾನ್ ಆಟಗಾರರ ಅಲಭ್ಯತೆಯಿಂದ ಪುಣೇರಿ ಪಲ್ಟನ್ ತಂಡಕ್ಕೆ ದೊಡ್ಡ ನಷ್ಟವಾಗಿದೆ. ಇರಾನ್’ನ ಸ್ಟಾರ್ ಆಟಗಾರರಾದ ಫಜಲ್ ಅಚ್ರಾಚಲಿ (1.38 ಕೋಟಿ) ಮತ್ತು ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್ (87 ಲಕ್ಷ) ಪುಣೇರಿ ಪಲ್ಟನ್ ತಂಡದಲ್ಲಿದ್ದಾರೆ. ಸ್ಟಾರ್ ಡಿಫೆಂಡರ್ ಫಜಲ್ ಅತ್ರಾಚಲಿ ಪುಣೇರಿ ತಂಡದ ನಾಯಕರೂ ಆಗಿದ್ದಾರೆ. ಇವರಿಬ್ಪರ ಅನುಪಸ್ಥಿತಿಯಲ್ಲಿ ಪುಣೇರಿ ಪಲ್ಟನ್ ತಂಡ ಶನಿವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ.

ಪ್ರೊ ಕಬಡ್ಡಿ ಲೀಗ್-9ರಲ್ಲಿ ಆಡುತ್ತಿರುವ ಇರಾನ್ ಆಟಗಾರರು
ಫಜಲ್ ಅತ್ರಾಚಲಿ, ಮೊಹಮ್ಮದ್ ನಬಿಭಕ್ಷ್: ಪುಣೇರಿ ಪಲ್ಟನ್
ಸೊಲೆಮಾನ್ ಪಹ್ಲೇವಾನಿ: ಬೆಂಗಾಲ್ ವಾರಿಯರ್ಸ್
ರೇಜಾ ಕಟೌಲಿನೆಜಾದ್: ದಬಾಂಗ್ ಡೆಲ್ಲಿ
ಅಮಿರ್’ಹೊಸೇನ್ ಬಸ್ಟಾಮಿ, ಮೊಹಮ್ಮದ್ ಮಘ್ಸೋದ್ಲು: ಹರ್ಯಾಣ ಸ್ಟೀಲರ್ಸ್
ರೇಜಾ ಮಿರ್ಬಾಘೆರಿ: ಜೈಪುರ ಪಿಂಕ್ ಪ್ಯಾಂಥರ್ಸ್
ಮೊಹಮ್ಮದ್ರೇಜಾ ಶಾದ್ಲೂ: ಪಾಟ್ನಾ ಪೈರೇಟ್ಸ್
ಹಮೀದ್ ನಾದರ್, ಮೊಹ್ಸೆನ್ ಜಫಾರಿ: ತೆಲುಗು ಟೈಟನ್ಸ್
ಹೈದರಾಲಿ ಎಕ್ರಾಮಿ, ಘೊಲಾಮಬ್ಬಾಸ್ ಕೊರೌಕಿ: ಯು ಮುಂಬಾ
ಅಬೋಝರ್ ಮಿಘಾನಿ: ಯುಪಿ ಯೋಧಾ

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ (Shree Kanteerava Indoor Stadium, Bengaluru) ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ (U Mumba) ತಂಡವನ್ನು 41-27ರ ಅಂತರಲ್ಲಿ ಭರ್ಜರಿಯಾಗಿ ಸೋಲಿಸಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi) ಶುಭಾರಂಭ ಮಾಡಿದರೆ, ಆತಿಥೇಯ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟನ್ಸ್ (Telugu Titans) ತಂಡವನ್ನು 34-29ರ ಅಂತರದಲ್ಲಿ ಸೋಲಿಸಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತು. ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾ (UP Yodha) ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡವನ್ನು 34-32ರ ಅಂತರದಲ್ಲಿ ರೋಚಕವಾಗಿ ಮಣಿಸಿತು. ಲೀಗ್’ನ ಎರಡನೇ ದಿನವಾದ ಶನಿವಾರವೂ 3 ಪಂದ್ಯಗಳು ನಡೆಯಲಿವೆ.

ಶನಿವಾರದ ಪಂದ್ಯಗಳು:
ಪಟ್ನಾ ಪೈರೇಟ್ಸ್ Vs ಪುಣೇರಿ ಪಲ್ಟನ್ (ರಾತ್ರಿ 7.30ಕ್ಕೆ)
ಗುಜರಾತ್ ಜೈಂಟ್ಸ್ Vs ತಮಿಳ್ ತಲೈವಾಸ್ (ರಾತ್ರಿ 8.30ಕ್ಕೆ)
ಬೆಂಗಾಲ್ ವಾರಿಯರ್ಸ್ Vs ಹರ್ಯಾಣ ಸ್ಟೀಲರ್ಸ್ (ರಾತ್ರಿ 9.30ಕ್ಕೆ)

ಸ್ಥಳ: ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Deepak Chahar Injured: ವಿಶ್ವಕಪ್ ಹೊಸ್ತಿಲಲ್ಲಿ ಭಾರತಕ್ಕೆ ಮತ್ತೊಂದು ಆಘಾತ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೀಪಕ್ ಚಹರ್ ಔಟ್

ಇದನ್ನೂ ಓದಿ : PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್

Why Iranian players were not seen Pro Kabaddi League Here’s the real secret

Comments are closed.