Astrologer Kamalakar Bhat Case: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಆತನ ಗೆಳತಿ ಸುಚಿತ್ರಾ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಾಪುರದ ನ್ಯಾಯಾಲಯವು ಇವರೆಲ್ಲರಿಗೂ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಜನರಿಗೆ ಭವಿಷ್ಯ ಹೇಳುತ್ತಿದ್ದ ಕಮಲಾಕರ್ ಭಟ್, ರೀಲ್ಸ್ ಮೂಲಕ ಪರಿಚಯವಾಗಿದ್ದ ಸುಚಿತ್ರಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇವರಿಬ್ಬರ ಸಂಬಂಧವನ್ನು ಸುಚಿತ್ರಾ ಪತಿ ಮಹೇಶ್ ಪ್ರಶ್ನಿಸಿದ್ದೇ ಈ ದೊಡ್ಡ ದುರಂತಕ್ಕೆ ಕಾರಣವಾಯಿತು. ಮಹೇಶ್ ಮೇಲೆ ಹಲ್ಲೆ ಮಾಡಲು ಬಂದಿದ್ದ ಗ್ಯಾಂಗ್, ಆತನ ಸಹೋದರ ವಸಂತ ನಾಯ್ಕ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿತ್ತು.
ಬಂಧಿತ ಸುಚಿತ್ರಾಳ ಐಷಾರಾಮಿ ಜೀವನದ ಬಗ್ಗೆ ಈಗ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಜ್ಯೋತಿಷಿ ಕಮಲಾಕರ್ ಭಟ್ ಈಕೆಗಾಗಿ ಶಿವಮೊಗ್ಗದಲ್ಲಿ ಪ್ರತ್ಯೇಕ ಮನೆಯನ್ನು ಬಾಡಿಗೆಗೆ ಕೊಡಿಸಿದ್ದಲ್ಲದೆ, ಓಡಾಟಕ್ಕೆ ಎರಡು ಕಾರುಗಳನ್ನು ನೀಡಿದ್ದ ಎಂದು ತಿಳಿದುಬಂದಿದೆ. ಸುಚಿತ್ರಾ ತನ್ನ ಪತಿಯನ್ನು ಬಿಟ್ಟು ಕಳೆದ ಒಂಬತ್ತು ತಿಂಗಳಿನಿಂದ ಮಗಳೊಂದಿಗೆ ಶಿವಮೊಗ್ಗದಲ್ಲಿ ನೆಲೆಸಿದ್ದಳು.
ಖ್ಯಾತ ಟಿವಿ ಜ್ಯೋತಿಷಿ ಕಮಲಾಕರ್ ಭಟ್ ಬಂಧನ; ಅಕ್ರಮ ಸಂಬಂಧದ ದೂರು ನೀಡಿದ್ದಕ್ಕೆ ಕೊಲೆ ಸಂಚು ಮಾಡಿದ್ರಾ ಗುರೂಜಿ?
ಸ್ವತಃ ಸುಚಿತ್ರಾಳ ಮಗಳೇ ಈಗ ತಾಯಿ ಮತ್ತು ಜ್ಯೋತಿಷಿಯ ಕರಾಳ ಮುಖವನ್ನು ಬಯಲು ಮಾಡಿದ್ದಾಳೆ. ಈ ಇಬ್ಬರು ಸೇರಿ ತನಗೆ ಜೀವ ಬೆದರಿಕೆ ಹಾಕುತ್ತಿದ್ದರು ಮತ್ತು ಮನೆಯಿಂದ ಹೊರಹೋಗುವಂತೆ ಒತ್ತಾಯಿಸುತ್ತಿದ್ದರು ಎಂದು ಮಗಳು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾಳೆ. ತಾಯಿಯ ನಡವಳಿಕೆಯಿಂದ ಬೇಸತ್ತು ಆಕೆ ತನ್ನ ತಂದೆಗೆ ವಿಷಯ ತಿಳಿಸಿದ್ದಳು.
ದೂರು ನೀಡಲು ಮುಂದಾದ ಕಾರಣಕ್ಕಾಗಿಯೇ ತನ್ನ ತಂದೆ ಮತ್ತು ದೊಡ್ಡಪ್ಪನ ಮೇಲೆ ಈ ಹಲ್ಲೆ ನಡೆದಿದೆ ಎಂದು ಸುಮಾಶ್ರೀ ತಿಳಿಸಿದ್ದಾಳೆ. ಜ್ಯೋತಿಷ್ಯದ ಹೆಸರಿನಲ್ಲಿ ಐಷಾರಾಮಿ ಬದುಕು ನಡೆಸುತ್ತಿದ್ದ ಕಮಲಾಕರ್ ಭಟ್ ಮತ್ತು ತನ್ನ ಸುಖಕ್ಕಾಗಿ ಸಂಸಾರವನ್ನೇ ಹಾಳುಗೆಡವಿದ ಸುಚಿತ್ರಾಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕೆ ಆಗ್ರಹಿಸಿದ್ದಾಳೆ.


