B-M highway unscientific work: ಬೆಂಗಳೂರು – ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, 6 ತಿಂಗಳಲ್ಲಿ 80 ಕ್ಕೂ ಅಧಿಕ ಸಾವು : ಕಾಂಗ್ರೆಸ್‌ ಆರೋಪ

ಮೈಸೂರು: (B-M highway unscientific work) ಬೆಂಗಳೂರು- ಮೈಸೂರು ದಶಪಥದಲ್ಲಿ ವಾಹನ ಸಂಚಾರ ಆರಂಭವಾಗಿ ಆರು ತಿಂಗಳಲ್ಲಿ ಅಪಘಾತದ ಸಂಖ್ಯೆ ಹೆಚ್ಚಳವಾಗಿದ್ದು, ಎಂಬತ್ತ ನಾಲ್ಕಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 6 ತಿಂಗಳಲ್ಲಿ 335 ಅಪಘಾತಗಳು, 84 ಮಂದಿ ಸಾವು. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಈ ಅನಾಹುತಗಳಿಗೆ ಕಾರಣ ಎಂದು ಕಾಂಗ್ರೆಸ್‌ ಟೀಕಿಸಿದೆ.

ಸೆಪ್ಟೆಂಬರ್‌ ನಲ್ಲಿ ಈ ಹೊಸ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ಅಂದಿನಿಂದ ಈ ವರೆಗೆ 335 ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ವರದಿಯಾಗಿವೆ. ಹೆದ್ದಾರಿಯ ಕಾಮಗಾರಿ ಅಂತಿಮ ಹಂತಕ್ಕೆ ಬಂದ ಡಿಸೆಂಬರ್‌, ಜನವರಿ ತಿಂಗಳಲ್ಲೇ ಹೆಚ್ಚು ಅಪಘಾತಗಳು ವರದಿಯಾಗಿದ್ದು, ಕುಂಬಳಗೋಡಿನಿಂದ ನಿಡ್ಲಘಟ್ಟ ವರೆಗಿನ ರಾಮನಗರ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 110 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 41 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ರಾಮನಗರ ಜಿಲ್ಲೆಯಲ್ಲಿ ಒಟ್ಟು 51 ಕಿ.ಮೀ. ನಷ್ಟು ದಶಪಥ ಹಾದು ಹೋಗುತ್ತದೆ. ರಾಮನಗರ ಚೆನ್ನಪಟ್ಟಣ ಬೈಪಾಸ್‌ ಗಳಲ್ಲಿ ವಾಹನಗಳ ವೇಗ ಹೆಚ್ಚಿದ್ದು, ಇದರ ಜೊತೆಗೆ ಸರ್ವೀಸ್‌ ರಸ್ತೆಗಳಲ್ಲಿಯೂ ವಾಹನ ಓಡಾಟ ಹೆಚ್ಚಿದೆ.ಮಿತಿ ಮೀರಿದ ವೇಗದಿಂದ ವಾಹನಗಳ ನಡುವೆ ಅಪಘಾತ ಸಂಭವಿಸುತ್ತಿದ್ದು ಇದರಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ಈ ದಶಪಥ ಹಾಗೂ ಬೈಪಾಸ್‌ ರಸ್ತೆ ನಡುವೆ ಏಳು ಅಡಿ ಎತ್ತರದ ಬೇಲಿ ಇದ್ದು, ಮಧ್ಯೆ ಆಂಬ್ಯುಲೆನ್ಸ್‌, ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆ ವಾಹನಗಳ ಓಡಾಟಕ್ಕೆ ಅವಕಾಶ ನೀಡಿಲ್ಲ.

ವಾಹನ ಓಡಾಟಕ್ಕೆ ಮಾತ್ರ ಹೆದ್ದಾರಿ ಸಿದ್ದಗೊಂಡಿದೆ. ಆದರೆ ವಾಹನ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಇನ್ನೂ ಸಿದ್ದಗೊಂಡಿಲ್ಲ. ಇನ್ನೂ ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಇನ್ನೊಂದು ಮುಖ್ಯ ಕಾರಣವಾಗಿದೆ ಎನ್ನಲಾಗಿದೆ. ಈ ಎಲ್ಲಾ ರೀತಿಯ ಅವೈಜ್ಞಾನಿಕತೆಯೂ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಕಾರಣ ಎಂದು ಕೈಪಾಳಯ ಹೇಳುತ್ತಿದೆ. “6 ತಿಂಗಳಲ್ಲಿ 335 ಅಪಘಾತಗಳು, 84 ಮಂದಿ ಸಾವು. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದೇ ಈ ಅನಾಹುತಗಳಿಗೆ ಕಾರಣ. ಸರ್ವಿಸ್ ರಸ್ತೆಗಳ ಅವ್ಯವಸ್ಥೆ ಹೇಳತೀರದಾಗಿದೆ. ಇಷ್ಟರ‌ ಮಧ್ಯೆ BJP ಸರ್ಕಾರ ಕ್ರೆಡಿಟ್ ಪಡೆಯಲು ತುದಿಗಾಲಲ್ಲಿ ನಿಂತಿದೆ. ಹಾಗಿದ್ದರೆ ಅಮಾಯಕರ ಜೀವ ತೆಗೆದ “ಕ್ರೆಡಿಟ್’ ಕೂಡ ನಿಮಗೇ ಸಲ್ಲಲಿ.” ಎಂದು ಕಾಂಗ್ರೆಸ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ : Singapore tour plan: ಪೌರಕಾರ್ಮಿಕರಿಗೆ ಸಿಹಿ ಸುದ್ದಿ! 300 ಪೌರಕಾರ್ಮಿಕರಿಗೆ “ಸಿಂಗಾಪುರ ಪ್ರವಾಸ ಯೋಜನೆ” ಭಾಗ್ಯ

B-M highway unscientific work: Bangalore-Mysore highway unscientific work, more than 80 deaths in 6 months: Congress alleges

Comments are closed.