ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಆಘಾತ : ಮುಂದಿನ ತಿಂಗಳಿಂದ ಮತ್ತೆ ಟಿಕೆಟ್ ದರ ಏರಿಕೆ!
ಸಂಪೂರ್ಣ ಭಾರತದಲ್ಲಿಯೇ ಅತ್ಯಂತ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ನಮ್ಮ ಮೆಟ್ರೋಗಿದೆ. ಈ ಎಲ್ಲದರ ನಡುವೆ ಇದೀಗ ಮತ್ತೊಮ್ಮೆ ನಮ್ಮ ಮೆಟ್ರೋ ತನ್ನ ಪ್ರಯಾಣಿಕರಿಗೆ ಶಾಕ್ ನೀಡಲು ತಯಾರಾಗಿದೆ. ಮೆಟ್ರೋ ಟಿಕೆಟ್ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್ ಫಿಕ್ಸೇಶನ್ ಕಮಿಟಿ (FFC) ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಮೆಟ್ರೋ ಪ್ರಯಾಣ ಸಿಲಿಕಾನ್ ಸಿಟಿ ಮಂದಿಗೆ ಮತ್ತಷ್ಟು ಜೇಬು ಸುಡುವ ಸಾಧ್ಯತೆಯಿದೆ.
ಕಳೆದ ವರ್ಷ ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣದ ಕೆಲ ಮಾರ್ಗಗಳಿಗೆ ಟಿಕೆಟ್ ದರವನ್ನು ಬರೋಬ್ಬರಿ 75 ಪ್ರತಿಶತ ಏರಿಕೆ ಮಾಡಿತ್ತು. ಇದು ಪ್ರಯಾಣಿಕರಿಗೆ ಭಾರೀ ಪ್ರಮಾಣದಲ್ಲಿ ಹೊರೆ ಎನಿಸಿತ್ತು. ಸಂಚಾರ ದಟ್ಟಣೆ, ಮಾಲಿನ್ಯದ ಜಂಜಾಟಗಳಿಂದ ಮೆಟ್ರೋ ಪ್ರಯಾಣ ಆಯ್ಕೆಮಾಡಿಕೊಳ್ಳುವ ಪ್ರಯಾಣಿಕರು ಮುಂದಿನ ತಿಂಗಳಿನಿಂದ ಮತ್ತಷ್ಟು ಹೆಚ್ಚುವರಿ ಹಣ ನೀಡಿ ಟಿಕೆಟ್ ದರ ಖರೀದಿಸಬೇಕಾಗಿ ಬರಲಿದೆ.
ಆದರೆ ಪದೇ ಪದೇ ಪ್ರಯಾಣದ ದರ ಏರಿಕೆ ಮಾಡುತ್ತಿರುವ ಬಿಎಂಆರ್ಸಿಎಲ್ ನಡೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಮ್ಮ ಪ್ರಯಾಣಿಕ ಸ್ನೇಹಿ ಸೇವೆ ನೀಡಿದರೆ ಸಾಕು. ಈ ನಮೂನೆ ಪ್ರಯಾಣ ದರ ಏರಿಕೆ ಮಾಡಿ ಐಷಾರಾಮಿ ಪ್ರಯಾಣದ ಅನುಭವ ನೀಡಬೇಕೆಂಬು ನಾವು ಕೇಳುತ್ತಿಲ್ಲ. ಸಂಚಾರ ದಟ್ಟಣೆಯಿಂದ ಪಾರಾಗಲು ಹೋಗಿ ಜೇಬು ಸುಡುವಂತಾ ಪರಿಸ್ಥಿತಿ ನಿರ್ಮಾಣವಾಗ್ತಿದೆ. ರಸ್ತೆಗಿಳಿದರೆ ಟ್ರಾಫಿಕ್ ಎದುರಿಸಬೇಕು, ಮೆಟ್ರೋ ಹತ್ತಿದ್ರೆ ಬೆಲೆ ಏರಿಕೆ ಒಪ್ಪಿಕೊಳ್ಳಬೇಕು ಎಂಬ ಸ್ಥಿತಿ ಸದ್ಯ ಕರ್ನಾಟಕದಲ್ಲಿದೆ, ಪ್ರಯಾಣಿಕರು ಈ ವಿರುದ್ಧ ಹೋರಾಟಕ್ಕೆ ಇಳಿಯದೇ ಹೋದಲ್ಲಿ ಭವಿಷ್ಯದಲ್ಲಿ ಮೆಟ್ರೋ ಪ್ರಯಾಣ ಕೇವಲ ಶ್ರೀಮಂತರ ಸ್ವತ್ತಾಗುವುದರಲ್ಲಿ ಸಂದೇಹವೇ ಇಲ್ಲ.



