Channapatna By election : ಚನ್ನಪಟ್ಟಣ : ಗೊಂಬೆ ನಗರಿ ಚನ್ನಪಟ್ಟಣ ಉಪ ಚುನಾವಣೆಯ ಅಖಾಡ ದಿನೇ ದಿನೇ ರೋಚಕತೆಯನ್ನು ಪಡೆಯುತ್ತಿದೆ. ಮೈತ್ರಿ ನಾಯಕರಿಗೆ ಶಾಕ್ ಕೊಟ್ಟು ಕಾಂಗ್ರೆಸ್ ಪಾಳಯ ಸೇರ್ಪಡೆ ಆಗಿರುವ ಸಿಪಿ ಯೋಗೀಶ್ವರ್‌ಗೆ ಭರ್ಜರಿ ಪಂಚ್ ಕೊಡಲು ಜೆಡಿಎಸ್ ಮುಂದಾಗಿದೆ. ಚನ್ನಪಟ್ಟಣದಿಂದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರನ್ನೇ ಸ್ಪರ್ಧೆ ಇಳಿಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಇದು ನಿಜವೇ ಆಗಿದ್ರೆ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಖಭಂಗ ಎದುರಾಗೋದು ಪಕ್ಕಾ.

ಕರ್ನಾಟಕದಲ್ಲಿ ಸಂಡೂರು, ಶಿಗ್ಗಾವಿ, ಚನ್ನಪಟ್ಟಣಕ್ಕೆ ವಿಧಾನಸಭಾ ಉಪಚುನಾವಣೆ ಘೋಷಣೆ ಆಗಿದೆ. ಆದರೆ ಈ ಪೈಕಿ ಹೆಚ್ಚು ಕುತೂಹಲ ಮೂಡಿಸಿರುವುದು ಚನ್ನಪಟ್ಟಣ ಉಪ ಚುನಾವಣೆ. ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಡಿಕೆ ಸುರೇಶ್, ಸಿಪಿ ಯೋಗೀಶ್ವರ್, ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಇದು ಪ್ರತಿಷ್ಠೆಯ ಕ್ಷೇತ್ರ. ಶತಾಯಗತಾಯ ಚನ್ನಪಟ್ಟಣವನ್ನು ಗೆಲ್ಲಲೇ ಬೇಕು ಅಂತಾ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಯತ್ನಿಸುತ್ತಿವೆ.
ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಸೈನಿಕ ಸಿಪಿ ಯೋಗೀಶ್ವರ್ ಕಣಕ್ಕೆ ಇಳಿಯುತ್ತಾರೆ ಅಂತಾ ಹೇಳಲಾಗುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಿಪಿ ಯೋಗೀಶ್ವರ್ ಬಿಜೆಪಿ ನಾಯಕರಿಗೆ ಕೈ ಕೊಟ್ಟು ಇದೀಗ ಡಿಕೆ ಬ್ರದರ್ಸ್ ಪಾಳಯವನ್ನು ಸೇರಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸಿಪಿ ಯೋಗೀಶ್ವರ್ ಅವರನ್ನು ತನ್ನತ್ತ ಸೆಳೆದು ಪಕ್ಷದ ಟಿಕೆಟ್ ಘೋಷಿಸುವ ಮೂಲಕ ಗೆಲುವಿನ ವಿಶ್ವಾಸದಲ್ಲಿದೆ.

ಚನ್ನಪಟ್ಟಣ ಹೇಳಿ ಕೇಳಿ ಜೆಡಿಎಸ್ ಪಕ್ಷದ ಭದ್ರಕೋಟೆ. ಕ್ಷೇತ್ರದಲ್ಲಿ ೭೦ ಸಾವಿರಕ್ಕೂ ಅಧಿಕ ಜೆಡಿಎಸ್ ಮತಗಳಿವೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಚನ್ನಪಟ್ಟಣದಲ್ಲಿ ಭವಿಷ್ಯವಿಲ್ಲ. ಸಿಪಿ ಯೋಗೀಶ್ವರ್ ಬಿಜೆಪಿ ಸೇರ್ಪಡೆ ಆದ ನಂತರದಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿ ಒಂದಿಷ್ಟು ಬಲಿಷ್ಠವಾಗಿತ್ತು. ಏನೇ ಆದ್ರೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕ್ಷೇತ್ರದಲ್ಲಿ ನೆಪಕ್ಕೆ ಮಾತ್ರವೇ ಹೊರತು ಚುನಾವಣೆಯ ಮೇಲೆ ಎರಡೂ ಪಕ್ಷಗಳು ಯಾವುದೇ ಪರಿಣಾಮ ಬೀರೋದಿಲ್ಲ. ಆದರೆ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿರುವುದು ಸಿಪಿ ಯೋಗೀಶ್ವರ್ ಹಾಗೂ ಜೆಡಿಎಸ್ ಪಕ್ಷದ ನಡುವೆ ಮಾತ್ರ.
ಸಿಪಿ ಯೋಗೀಶ್ವರ್ ಇದುವರೆಗೆ ಒಟ್ಟು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಐದು ಬಾರಿಯೂ ಕೂಡ ಪಕ್ಷಕ್ಕಿಂತ ಯೋಗೀಶ್ವರ್ ವೈಯಕ್ತಿಕ ವರ್ಚಸ್ಸಿನಿಂದಲೇ ಗೆಲುವು ಕಂಡಿದ್ದಾರೆ ಅನ್ನೋದನ್ನು ಗಮನಿಸಬೇಕು. ಅಲ್ಲದೇ ಈ ಬಾರಿ ಕಾಂಗ್ರೆಸ್ ಪಾಳಯ ಸೇರ್ಪಡೆ ಆಗಿದ್ದರೂ ಕೂಡ ಈ ಬಾರಿಯೂ ಸಿಪಿ ಯೋಗೀಶ್ವರ್ ಅವರ ವೈಯಕ್ತಿಕ ಮತಗಳೇ ಗೆಲುವನ್ನು ನಿರ್ಣಯಿಸುತ್ತದೆ.

ಜೆಡಿಎಸ್ ಪಕ್ಷದ ಚಿಹ್ನೆಯ ಅಡಿಯಲ್ಲಿ ಸ್ಪರ್ಧೆ ಮಾಡುವಂತೆ ಸಿಪಿ ಯೋಗೀಶ್ವರ್‌ಗೆ ಬಿಜೆಪಿ ಹೈಕಮಾಂಡ್ ಹಾಗೂ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮನವಿ ಮಾಡಿಕೊಂಡಿದ್ದರೂ ಕೂಡ ಯೋಗೀಶ್ವರ್ ಕ್ಯಾರೇ ಮಾಡಿರಲಿಲ್ಲ. ಇದು ಜೆಡಿಎಸ್ ಹಾಗೂ ಬಿಜೆಪಿಗೆ ಮುಜುಗರ ತರಿಸಿದೆ. ಸದ್ಯ ಜೆಡಿಎಸ್ ಯುವ ನಾಯಕ ನಿಕಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಆದರೆ ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆಯ ಸೋಲು ನಿಕಿಲ್ ಕುಮಾರಸ್ವಾಮಿ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಕಂಗೆಡಿಸಿದೆ. ಸೋಲಿನ ಬೆನ್ನಲ್ಲೇ ನಿಕಿಲ್ ಪಕ್ಷ ಸಂಘಟನೆಯ ಕಾರ್ಯ ಮಾಡುತ್ತಿದ್ದಾರೆ.
ಪ್ರತಿಷ್ಠೆಯ ಕಣ ಆಗಿರೋ ಕಾರಣಕ್ಕೆ ನಿಕಿಲ್ ಕುಮಾರಸ್ವಾಮಿ ಅವರ ಸ್ಪರ್ಧೆ ಕಾರ್ಯಕರ್ತರು ಉತ್ಸಾಹ ತೋರಿದ್ದರೂ ಕೂಡ, ಎಚ್‌ಡಿ ಕುಮಾರಸ್ವಾಮಿ ಅವರು ಒಲವು ತೋರುತ್ತಿಲ್ಲ ಎನ್ನಲಾಗಿದೆ. ಅನಿತಾ ಕುಮಾರಸ್ವಾಮಿ ಅವರ ಹೆಸರು ಕೇಳಿಬರುತ್ತಿದ್ದರೂ ಕೂಡ ಅವರು ಮತ್ತೆ ರಾಜಕೀಯಕ್ಕೆ ಮರಳುವುದು ಅನುಮಾನ. ಇನ್ನು ಮಂಡ್ಯ ಮಾಜಿ ಸಂಸದೆ ಸುಮಲತಾ ಅವರನ್ನು ಕಣಕ್ಕೆ ಇಳಿಸುವಂತೆ ಕೂಗು ಕೇಳಿಬಂದಿದೆ. ಆದರೆ ಕುಮಾರಸ್ವಾಮಿ ಅವರು ಇದಕ್ಕೆ ಮನಸ್ಸು ಮಾಡುವುದು ಅನುಮಾನ. ಹೀಗಾಗಿ ಜೆಡಿಎಸ್‌ಗೆ ಉಳಿದಿರುವ ಅಂತಿಮ ಅಸ್ತ್ರವೇ ಎಚ್‌ಡಿ ದೇವೇಗೌಡ.
ಇದನ್ನೂ ಓದಿ : ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದಾಖಲಾಗೇ ಬಿಡ್ತು ಎಫ್ ಐಆರ್ ; ರಾಜೀನಾಮೆ ನೀಡ್ತಾರಾ ಸಿಎಂ?
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. ಈ ಮೂಲಕ ಮತ್ತೆ ರಾಜಕೀಯಕ್ಕೆ ಮರಳೋದಿಲ್ಲ ಅನ್ನುವ ಮಾತನ್ನು ಹೇಳಿದ್ದಾರೆ. ಕರ್ನಾಟಕದಿಂದ ಭಾರತದ ಪ್ರಧಾನಿ ಆಗಿರುವ ಏಕೈಕ ನಾಯಕ ಎಚ್‌ಡಿ ದೇವೇಗೌಡರಿಗೆ ಗೆಲುವಿನ ಮೂಲಕ ರಾಜಕೀಯ ನಿವೃತ್ತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಚರ್ಚೆ ನಡೆದಿದೆ. ಸಿಪಿ ಯೋಗೀಶ್ವರ್ ಜೊತೆಗೆ ಡಿಕೆ ಬ್ರದರ್ಸ್ ಅವರ ರಾಜಕೀಯ ಭವಿಷ್ಯ ಕೊಡಲಿಯೇಟು ಕೊಡಲು ಜೆಡಿಎಸ್ ಹಾಗೂ ಬಿಜೆಪಿ ಇರುವ ದಾರಿ ದೇವೇಗೌಡರನ್ನು ಸ್ಪರ್ಧೆಗೆ ಇಳಿಸುವುದು.
ಒಂದೊಮ್ಮೆ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇ ಆದ್ರೆ ದೇವೇಗೌಡರ ಗೆಲುವು ಶತಸಿದ್ದ. ಹೀಗಾದ್ರೆ ಜೆಡಿಎಸ್ ಹಾಗೂ ಬಿಜೆಪಿ ಒಂದೇ ಕಲ್ಲಿನಲ್ಲಿ ಡಿಕೆ ಬ್ರದರ್ಸ್, ಸಿದ್ದರಾಮಯ್ಯ ಹಾಗೂ ಯೋಗೀಶ್ವರ್‌ಗೆ ಏಟು ಕೊಟ್ಟಂಗೆ ಆಗಲಿದೆ. ಒಕ್ಕಲಿಗರ ನಾಯಕ ಎನಿಸಿಕೊಂಡಿರುವ ಎಚ್‌ಡಿ ದೇವೇಗೌಡರು ಈ ಚುನಾವಣೆಯಲ್ಲಿ ಗೆಲುವು ಕಾಣುವ ಮೂಲಕ ಮತ್ತೊಮ್ಮೆ ವಿಧಾನಸೌಧದ ಮೆಟ್ಟಿಲು ತುಳಿಯುತ್ತಾರಾ ಅನ್ನೋ ಕುತೂಹಲವೂ ಇದೆ. ಒಂದೊಮ್ಮೆ ಜೆಡಿಎಸ್ ದೇವೆಗೌಡರ ಹೊರತು ಪಡಿಸಿ ಬೇರೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಸೋಲು ಕಂಡ್ರೆ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಅಸ್ಥಿತ್ವಕ್ಕೆ ಕುತ್ತು ಬರುವ ಸಾಧ್ಯತೆಯಿದೆ.
ದೇವೇಗೌಡರು ಹಾಸನ ರಾಜಕೀಯದಿಂದ ದೂರ ಉಳಿದ ಬೆನ್ನಲ್ಲೇ ಹಾಸನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೀಗ ರಾಮನಗರದ ಜೆಡಿಎಸ್ ಪಾಲಿಗೆ ಎಚ್‌ಡಿ ದೇವೇಗೌಡರು ಭಗೀರಥ ಆಗ್ತಾರಾ ಅನ್ನೋದು ಕುತೂಹಲವು ಮೂಡಿಸಿದೆ. ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಕೋರ್‌ಕಮಿಟಿ ಸಭೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆಯ ಕುರಿತು ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ : ಹನಿಮೂನ್ ನಲ್ಲೇ ಡಿವೋರ್ಸ್: ಚುನಾವಣೆ ಗೂ ಮುನ್ನವೇ ಮುರಿದುಬೀಳುತ್ತಾ ಜೆಡಿಎಸ್ -ಬಿಜೆಪಿ ಮೈತ್ರಿ
Channapatna By election HD Deve Gowda contest from JDS