ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ: 10 ದಿನ ರಜೆ ಘೋಷಿಸಿ ಐಪಿಎಸ್ ಅಧಿಕಾರಿ ಅಜ್ಞಾತ!
DGP Ramachandra Rao Viral Video: ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಡಿಜಿಪಿ ಡಾ. ರಾಮಚಂದ್ರ ರಾವ್ ಅವರದ್ದನ್ನಲಾದ ಆಕ್ಷೇಪಾರ್ಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ಬೆನ್ನಲ್ಲೇ, ಅಧಿಕಾರಿ ದಿಢೀರ್ ಹತ್ತು ದಿನಗಳ ರಜೆ ಘೋಷಿಸಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಈ ಬೆಳವಣಿಗೆಯಿಂದಾಗಿ ಇಲಾಖೆಯಲ್ಲಿ ತೀವ್ರ ಮುಜುಗರ ಉಂಟಾಗಿದ್ದು, ಸರ್ಕಾರ ಅವರ ವಿರುದ್ಧ ಕಠಿಣ ಶಿಸ್ತುಕ್ರಮಕ್ಕೆ ಮುಂದಾಗಿದೆ.
ಸಸ್ಪೆನ್ಷನ್ ಭೀತಿಯಲ್ಲಿ ಹಿರಿಯ ಅಧಿಕಾರಿ:
ವಿಡಿಯೋ ವೈರಲ್ ಆದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಾತನಾಡಿ, “ಕಾನೂನಿನ ಮುಂದೆ ಯಾರೂ ಅತೀತರಲ್ಲ. ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ, ಯಾವುದೇ ಕ್ಷಣದಲ್ಲಿ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ (Suspension) ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ.
ವಕೀಲರೊಂದಿಗೆ ಕಾನೂನು ಸಮರಕ್ಕೆ ಸಿದ್ಧತೆ:
ರಜೆ ಹಾಕಿರುವ ರಾಮಚಂದ್ರ ರಾವ್ ಅವರು ಪ್ರಸ್ತುತ ರಹಸ್ಯ ಸ್ಥಳದಲ್ಲಿ ವಕೀಲರ ತಂಡದೊಂದಿಗೆ ಕಾನೂನು ಹೋರಾಟದ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿಡಿಯೋ ವೈರಲ್ ಆಗಿರುವುದು ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಂಚು ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ.
ಡಿಜಿಪಿ ರಾಮಚಂದ್ರ ರಾವ್ ಅಸಭ್ಯ ವಿಡಿಯೋ; ತುರ್ತು ವರದಿ ಕೇಳಿದ ಸಿಎಂ
ಡಿಜಿಪಿ ರಾಮಚಂದ್ರ ರಾವ್ ಸ್ಪಷ್ಟನೆ:
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, “ಇದು ಈಗಿನ ವಿಡಿಯೋ ಅಲ್ಲ, ಸುಮಾರು ಎಂಟು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿದ್ದ ಸಂದರ್ಭದ ಹಳೆಯ ವಿಡಿಯೋ ಇರಬಹುದು. ಇಂದಿನ ಕಾಲದಲ್ಲಿ ತಂತ್ರಜ್ಞಾನ ಬಳಸಿ ಏನು ಬೇಕಾದರೂ ಸೃಷ್ಟಿಸಬಹುದು. ಈ ಬಗ್ಗೆ ಸತ್ಯಾಸತ್ಯತೆ ಹೊರಬರಲು ತನಿಖೆಯಾಗಬೇಕು” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೊದಲು ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ವಿವರಣೆ ನೀಡಲು ಪ್ರಯತ್ನಿಸಿದ್ದರು.
ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ:
ಇನ್ನು ಈ ಪ್ರಕರಣದ ಬಗ್ಗೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಘಟನೆಗಳು ಪೊಲೀಸ್ ಇಲಾಖೆಯ ಗೌರವವನ್ನು ಹರಾಜು ಹಾಕುತ್ತಿವೆ. ಸರ್ಕಾರವು ಹಿರಿಯ ಅಧಿಕಾರಿಗಳ ಇಂತಹ ನಡವಳಿಕೆಗೆ ಕಡಿವಾಣ ಹಾಕದಿದ್ದರೆ ಜನಸಾಮಾನ್ಯರಲ್ಲಿ ಇಲಾಖೆಯ ಬಗ್ಗೆ ನಂಬಿಕೆ ಕುಸಿಯುತ್ತದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಇಡೀ ರಾಜ್ಯದ ಗಮನ ಈಗ ಸರ್ಕಾರದ ಮುಂದಿನ ನಡೆಯತ್ತ ನೆಟ್ಟಿದೆ.



