Kannada Rajyotsava 2022: ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಬಗ್ಗೆ ನಿಮಗೆಷ್ಟು ಗೊತ್ತು

Kannada Rajyotsava 2022: ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡ ನಾವಾಡುವ ಭಾಷೆ ಮಾತ್ರವಲ್ಲ.. ಅದು ನಮ್ಮ ಜೀವಾಳ.. ಕವಿ ಕುವೆಂಪುರವರು ತಮ್ಮ ಈ ಹಾಡಿನ ಮೂಲಕ ಕನ್ನಡದ ಬಗೆಗಿನ ಭಾವನೆಗಳಿಗೆ, ವಾಸ್ತವಾಂಶಗಳಿಗೆ ಜೀವ ತುಂಬಿದ್ದಾರೆ. ಪ್ರತಿವರ್ಷ ನವೆಂಬರ್ 1ರಂದು ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಿಕೊಳ್ಳುತ್ತೇವೆ. ಆದರೆ ಈ ನಮ್ಮ ಸಂಭ್ರಮದ ಹಿಂದೆ ಅದೆಷ್ಟೋ ಜನರ ಬೆವರ ಹನಿಗಳಿವೆ. ನಿದ್ದೆಯಿಲ್ಲದ ರಾತ್ರಿಗಳಿವೆ. ಇದೆಲ್ಲಕ್ಕಿಂತ ಮೀರಿದ ಶ್ರಮದ ಕಥೆಗಳಿವೆ. ಕರ್ನಾಟಕವನ್ನು ಒಂದು ರಾಜ್ಯವನ್ನಾಗಿ ರೂಪುಗೊಳಿಸಲು, ಏಕೀಕರಣಗೊಳಿಸಲು ಹಲವಾರು ಮಂದಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಸಾಹಿತಿಗಳು, ಸಮಾಜ ಸೇವಕರು, ಕೆಲ ರಾಜಕಾರಣಿಗಳು ಕನ್ನಡ ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿ ಹೋಗಿದ್ದಾರೆ. ಅದೇ ಕಾರಣಕ್ಕಾಗಿ ಇಂದು ನಾವು ಕರ್ನಾಟಕದಲ್ಲಿ ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದೇವೆ.

ಇದನ್ನೂ ಓದಿ: Karnataka Rajyotsava 2022 : ಕನ್ನಡ ರಾಜ್ಯೋತ್ಸವದ ಇತಿಹಾಸ, ಮಹತ್ವ, ಆಚರಣೆ : ಸಂಪೂರ್ಣ ಮಾಹಿತಿ

ಕರ್ನಾಟಕ ಏಕೀಕರಣ ಹೋರಾಟ:
ಕನ್ನಡ ಭಾಷೆಯನ್ನು ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿ ತರಲು ನಡೆದ ಹೋರಾಟವೇ ಕರ್ನಾಟಕ ಏಕೀಕರಣ ಹೋರಾಟ. ಮದ್ರಾಸ್, ಮುಂಬೈ, ಹೈದರಾಬಾದ್ ಸೇರಿ ಹಲವೆಡೆ ಹಂಚಿಹೋಗಿದ್ದ ಕನ್ನಡ ಜನರನ್ನು ಒಗ್ಗೂಡಿಸಿ 1956ರ ನವೆಂಬರ್ 1ರಂದು ಮೈಸೂರನ್ನು ರಾಜ್ಯವನ್ನಾಗಿ ಅಸ್ತಿತ್ವಕ್ಕೆ ತರಲಾಗಿತ್ತು. ಬಳಿಕ ಅದು ಕರ್ನಾಟಕ ರಾಜ್ಯವಾಗಿ ಬದಲಾಗಿದ್ದು ಗೊತ್ತೇ ಇದೆ. ಆದರೆ ಕರ್ನಾಟಕ ಏಕೀಕರಣಕ್ಕೆ ಹಲವಾರು ಮಂದಿ ಹೋರಾಟ ನಡೆಸಿದ್ದಾರೆ.

ಕುವೆಂಪು, ದ.ರಾ. ಬೇಂದ್ರೆ, ಕೆಂಗಲ್ ಹನುಮಂತಯ್ಯ, ಹುಯಿಲಗೋಳ ನಾರಾಯಣರಾವ್, ಆಲೂರು ವೆಂಕಟರಾಯರು, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಹೆಚ್.ಎಸ್.ದೊರೆಸ್ವಾಮಿ, ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಡೆಪ್ಯೂಟಿ ಚನ್ನಬಸಪ್ಪ, ಪಾಟೀಲ್ ಪುಟ್ಟಪ್ಪ, ಉತ್ತಂಗಿ ಚನ್ನಪ್ಪ, ಅ.ನ.ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಹಾರನಹಳ್ಳಿ ರಾಮಸ್ವಾಮಿ, ಕೋ.ಚನ್ನಬಸಪ್ಪ, ಕಡಿದಾಳ್ ಮಂಜಪ್ಪ, ಹುಲ್ಲೂರು ಶ್ರೀನಿವಾಸ ಜೋಯಿಸ ಹೀಗೆ ಹಲವಾರು ಮಂದಿ ಕನ್ನಡಾಂಬೆಯ ಸೇವೆ ಸಲ್ಲಿಸಿದ್ದಾರೆ. ಹೇಳಹೊರಟರೆ ಶಬ್ಧಗಳೇ ಸಾಲದಷ್ಟು ಸಾಧನೆಗಳಿವೆ. ಈ ಪೈಕಿ ಆಲೂರು ವೆಂಕಟರಾಯರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ನಾಡಿಗೆ ಅವರ ಸೇವೆ ಅಪಾರವಾದುದು.

ಇದನ್ನೂ ಓದಿ: Karnataka : ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ.. ಕನ್ನಡ ಧ್ವಜದಲ್ಲಿ ಹಳದಿ, ಕೆಂಪು ಬಣ್ಣ ಯಾಕಿದೆ, ಇಲ್ಲಿದೆ ಮಾಹಿತಿ

ಆಲೂರು ವೆಂಕಟರಾಯರು:

ಕನ್ನಡದ ವಿಚಾರ ಬಂದಾಗಲೆಲ್ಲಾ ಮೊದಲು ನೆನಪಾಗುವ ಹೆಸರೇ ಆಲೂರು ವೆಂಕಟರಾಯರದ್ದು. 1880ರ ಜುಲೈ 12ರಂದು ಇವರು ಬಿಜಾಪುರದಲ್ಲಿ ಇವರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬಿಜಾಪುರದಲ್ಲಿ ಪಡೆದ ಇವರು 1903ರಲ್ಲಿ ಪುಣೆಯಲ್ಲಿ ಬಿ.ಎ ಪದವಿ ಪಡೆದರು. ಬಳಿಕ ಮುಂಬೈನಲ್ಲಿ ಕಾನೂನು ಅಭ್ಯಾಸ ಮಾಡಿ 1905ರಲ್ಲಿ ವಕೀಲರಾದರು. ಕರ್ನಾಟಕ ಇತಿಹಾಸ, ಸಾಹಿತ್ಯಗಳ ವ್ಯಾಸಂಗ ಮಾಡುತ್ತಾ ಹೋದ ಇವರು ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರವೇಶಿಸುತ್ತಾರೆ. ಅಂದಿನಿಂದ ಕನ್ನಡ ಪರ ಅವರ ಹೋರಾಟ ಆರಂಭಗೊಳ್ಳುತ್ತದೆ. ಕರ್ನಾಟಕ ವಿದ್ಯಾವರ್ಧಕದ ಕಾರ್ಯಭಾರವನ್ನು ಹೊತ್ತ ಅವರು ವಾಗ್ಭೂಷಣ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿ ಅದಕ್ಕೆ ಹೊಸ ರೂಪ ನೀಡುತ್ತಾರೆ. ಕನ್ನಡ ಪುಸ್ತಕದ ಕೊರತೆ ನೀಗಿಸಲು 2 ಬಾರಿ ಗ್ರಂಥಕರ ಸಮಾವೇಶ ನಡೆಸುತ್ತಾರೆ.

ಅಂದಿನ ದಿನಗಳಲ್ಲಿ ಆಲೂರು ವೆಂಕಟರಾಯರು, ಬೆನಗಲ್ ರಾಮರಾಯರು ಕರ್ನಾಟಕ ಏಕೀಕರಣ ಕುರಿತು ಲೇಖನಗಳು, ಉಪನ್ಯಾಸಗಳನ್ನು ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. 1922ರಲ್ಲಿ ಇವರ ನೇತೃತ್ವದಲ್ಲಿ ಜಯ ಕರ್ನಾಟಕ ಪತ್ರಿಕೆ ಆರಂಭಗೊಂಡಿತು. ಸುಮಾರು 6 ವರ್ಷಗಳ ಕಾಲ ನಡೆದ ಈ ಪತ್ರಿಕೆ ಜನರಲ್ಲಿ ಕನ್ನಡದ ಕಂಪನ್ನು ಸೂಸಿತು. ಬೆಟಗೇರಿ ಕೃಷ್ಣಶರ್ಮ, ದ.ರಾ ಬೇಂದ್ರೆ ಈ ಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಇದರ ಜೊತೆಗೆ ಕನ್ನಡಿಗ, ಕರ್ಮವೀರ ಮುಂತಾದ ಪತ್ರಿಕೆಗಳನ್ನೂ ಆರಂಭಿಸಲಾಯಿತು. ಇವರು ಆರಂಭಿಸಿದ ಗ್ರಂಥಕರ್ತರ ಸಮಾವೇಶ ಪತ್ರಿಕೆಯು ಕರ್ನಾಟಕ ಸಾಹಿತ್ಯ ಪರಿಷತ್ತಿನ ನಿರ್ಮಾಣಕ್ಕೆ ನಾಂದಿಹಾಡಿತು. ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿವಿಯ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕದ ವಿದ್ಯಾವರ್ಧಕ ಸಂಘ (ಧಾರವಾಡ) ಈ ಎಲ್ಲಾ ಯೋಜನೆಗಳ ಹಿಂದೆ ಆಲೂರು ವೆಂಕಟರಾವ್ ಅವರ ಸತತ ಶ್ರಮವಿದೆ. ಹೀಗಾಗಿಯೇ ಇವರನ್ನು ಕನ್ನಡದ ಕುಲಪುರೋಹಿತ ಎಂದೇ ಕರೆಯಲಾಗುತ್ತದೆ

ಇದನ್ನೂ ಓದಿ: Kannada Rajyotsava 2022 : ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು ?.

ಸಾಹಿತ್ಯ ರಚನೆಗೆ ಒತ್ತು ನೀಡಿದ್ದ ಇವರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಸಂಸಾರ ಸುಖ, ಕರ್ನಾಟಕದ ವೀರರತ್ನಗಳು, ಕರ್ನಾಟತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ರಾಷ್ಟ್ರೀಯತ್ವದ ಮೀಮಾಂಸೆ ಹೀಗೆ ಹತ್ತು ಹಲವು ಸಾಹಿತ್ಯಗಳನ್ನು ರಚಿಸಿ ಜನರನ್ನು ಬಡಿದೆಬ್ಬಸುವ ಪ್ರಯತ್ನ ಮಾಡಿದರು. ಕರ್ನಾಟಕಕ್ಕಾಗಿ ಹೋರಾಡಿದ ರೀತಿಯಲ್ಲಿಯೇ ರಾಷ್ಟ್ರೀಯತ್ವಕ್ಕಾಗಿ ಹೋರಾಡಿದ್ದ ಇವರನ್ನು 1931ರಲ್ಲಿ ಬ್ರಿಟಿಷ್ ಸರ್ಕಾರ ಬಂಧಿಸಿತ್ತು. ಕಾರಾಗೃಹದಲ್ಲಿಯೂ ಇವರು ಆಧ್ಯಾತ್ಮದ ಬಗ್ಗೆ ಅಧ್ಯಯನ ನಡೆಸಿದರು. ಜೈಲಿನಲ್ಲೇ ಕೂತು ಗ್ರಂಥಗಳನ್ನು ಬರೆದರು. ತಮ್ಮ ಜೀವನದ ಕೊನೆ ಗಳಿಗೆಯಲ್ಲಿ ಅವರು ಸಾರ್ವಜನಿಕ ಜೀವನದಿಂದ ದೂರವಿದ್ದರು. ರಾಜಕಾರಣದಿಂದ ಪೂರ್ಣ ಪ್ರಮಾಣ ದೂರ ಸರಿದು ಆಧ್ಯಾತ್ಮದತ್ತ ತಮ್ಮನ್ನು ತಾವು ತೊಡಗಿಸಿಕೊಂಡ ಆಲೂರು ವೆಂಕಟರಾಯರು 1964ರ ಫೆಬ್ರವರಿ 25ರಂದು ನಿಧನ ಹೊಂದುತ್ತಾರೆ. ಆದರೆ ಇಂದಿಗೂ ಕನ್ನಡ ನಾಡಿನಲ್ಲಿ ಇವರ ಹೆಸರು ಅಮರವಾಗಿದೆ.

Kannada Rajyotsava 2022: how much do you know about aluru venkatarao

Comments are closed.