ವಿವಾಹಕ್ಕೆ ಒಪ್ಪದ ಪ್ರಿಯತಮೆ; ಮನನೊಂದು ಪುರೋಹಿತ ಯುವಕ ಆತ್ಮಹತ್ಯೆ
Purohit suicide:: ಅಂಕೋಲಾ: ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಸ್ಲಗದ್ದೆ ನಿವಾಸಿ ಪವನ್ ಭಟ್ (24) ಎಂದು ಗುರುತಿಸಲಾಗಿದೆ. ವೃತ್ತಿಯಿಂದ ಪುರೋಹಿತನಾಗಿದ್ದ ಪವನ್, ತನ್ನದೇ ಗ್ರಾಮದ ಯುವತಿಯೊಬ್ಬಳನ್ನು ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ತಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸಿದ್ದ ಪವನ್, ಯುವತಿಯ ಬಳಿ ವಿವಾಹವಾಗುವಂತೆ ಪ್ರಸ್ತಾಪ ಇಟ್ಟಿದ್ದರು. ಆದರೆ, ಯುವತಿಯು ಈ ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿರಲಿಲ್ಲ. ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ ವಿಷಯದಿಂದ ತೀವ್ರವಾಗಿ ಮನನೊಂದಿದ್ದ ಪವನ್, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಉಡುಪಿ ಶ್ರೀಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ : ಎರಡೂವರೆ ಕೋಟಿ ಮೌಲ್ಯದ ಗ್ರಂಥದ ಲೋಕಾರ್ಪಣೆ ಯಾವಾಗ
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಂಕೋಲಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇತ್ತೀಚೆಗಷ್ಟೇ ಯಲ್ಲಾಪುರದಲ್ಲಿ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನಡೆದಿದ್ದ ರಫೀಕ್-ರಂಜಿತಾ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣದ ಭೀತಿ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಪ್ರೇಮ ಸಂಬಂಧಿತ ಆತ್ಮಹತ್ಯೆ ಪ್ರಕರಣ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.



