ರಾಜ್ಯದಲ್ಲಿ ನಿಲ್ಲದ ವರುಣನ ಅಬ್ಬರ : ಇಂದು ಕೂಡ ಮುಂದುವರಿಯಲಿದೆ ಭಾರೀ ಮಳೆ
ರಾಜ್ಯದಲ್ಲಿ ಮಳೆಯ ಲಕ್ಷಣ ಯಾಕೋ ಮುಗಿಯುವಂತೆ ಕಾಣುತ್ತಿಲ್ಲ. ಇಷ್ಟು ದಿನ ಕೊರೆಯುವ ಚಳಿ ಹಿನ್ನೆಲೆಯಲ್ಲಿ ವರುಣದೇವ ಕೊಂಚ ವಿರಾಮ ಪಡೆದುಕೊಂಡಿದ್ದ. ಆದ್ರೀಗ ಮತ್ತೊಮ್ಮೆ ರಾಜ್ಯಕ್ಕೆ ವರುಣಾಗಮನವಾಗಿದ್ದು ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗಿದೆ.
ಮುಂದಿನ 12 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಹಗುರ ಮಳೆ ಹಾಗೂ ಮಂಜು ಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತಾಪಮಾನವು ಗರಿಷ್ಠ 27°C ವರೆಗೆ ಹೋಗಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಂದರ್ಭಿಕವಾಗಿ ಹಗುರ ಮಳೆಯಾಗುವ ಸಾಧ್ಯತೆಯಿದೆ, ಆದ್ರ್ರತೆಯ ಮಟ್ಟವು ಸುಮಾರು ಶೇಕಡಾ 66 ರಷ್ಟು ಮತ್ತು ಗಾಳಿಯ ವೇಗ ಗಂಟೆಗೆ ಸುಮಾರು 13.3 ಕಿ.ಮೀ. ಇರಲಿದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ: ಮಾವು ಬೆಳೆಗಾರರಿಗೆ ಕಂಟಕವಾಯ್ತು ಕೊರೆಯುವ ಚಳಿ : ಈ ಬಾರಿ ಇಳುವರಿ ಭಾರೀ ಕುಸಿತ
ಇನ್ನುಳಿದಂತೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದಾದ್ಯಂತ ಶುಷ್ಕ ಹವಾಮಾನದ ಪರಿಸ್ಥಿತಿ ಇರುವ ನಿರೀಕ್ಷೆಯಿದೆ. ಇತ್ತ ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ವರ್ಷದ ಮೊದಲ ಮಳೆಯಾಗಿದ್ದು ಕಾಫಿ ಒಣಗಿಸುವ ಪ್ರಕ್ರಿಯೆಯಲ್ಲಿದ್ದ ಕಾಫಿ ಬೆಳೆಗಾರರಿಗೆ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆ. ಅದರಲ್ಲೂ ಕುಕ್ಕೆಯಲ್ಲಿ ಭಾರೀ ಮಳೆಯಾಗಿದೆ. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಭಾರೀ ತೊಂದರೆಯುಂಟಾಗಿದೆ. ಇಂದು ಕೂಡ ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.



