ರಾಜ್ಯದಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಆರಂಭ! ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ
ರಾಜ್ಯದಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಆರಂಭವಾಗಿದ್ದು, ಹೊಸ ಸದಸ್ಯರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಸೇರಿದಂತೆ ಹಲವು ಸೇವೆಗಳಿಗೆ ಜನರು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

- ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ
- ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆಗೂ ಅರ್ಜಿ ಸ್ವೀಕಾರ
- ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಸೇವೆ ಲಭ್ಯ
ರಾಜ್ಯ ಸರ್ಕಾರವು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಈಗಾಗಲೇ ಇರುವ ಬಿಪಿಎಲ್ ಮತ್ತು ಇತರ ಪಡಿತರ ಚೀಟಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ 8ರಿಂದಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಜನರು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮದುವೆಯಾದ ನಂತರ ಹೊಸ ಮನೆಗೆ ತೆರಳಿದ ಮಹಿಳೆಯರು, ಮಕ್ಕಳ ಹೆಸರನ್ನು ಸೇರಿಸದ ಕುಟುಂಬಗಳು ಹಾಗೂ ವಿಳಾಸ ಬದಲಾಯಿಸಿಕೊಂಡವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಹಲವು ವರ್ಷಗಳಿಂದ ಹೆಸರು ಸೇರ್ಪಡೆ ಆಗದೇ ತೊಂದರೆ ಅನುಭವಿಸುತ್ತಿದ್ದವರಿಗೆ ಇದೀಗ ಸರ್ಕಾರದ ಈ ಕ್ರಮದಿಂದ ನೆರವಾಗಲಿದೆ.
ಈ ತಿದ್ದುಪಡಿಯಲ್ಲಿ ಕುಟುಂಬದ ಹೊಸ ಸದಸ್ಯರನ್ನು ಸೇರಿಸುವುದು, ಹೆಸರು ತೆಗೆದುಹಾಕುವುದು, ಮೊಬೈಲ್ ಸಂಖ್ಯೆ ಬದಲಾವಣೆ, ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ ಹಾಗೂ ವಿಳಾಸ ತಿದ್ದುಪಡಿ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ. ಸರ್ಕಾರದ ವಿವಿಧ ಸೇವೆಗಳು ಮತ್ತು ಪಡಿತರ ಸೌಲಭ್ಯ ಪಡೆಯಲು ಈ ತಿದ್ದುಪಡಿ ಉಪಯುಕ್ತವಾಗಲಿದೆ.
ಪತ್ನಿಯ ಹೆಸರನ್ನು ಸೇರಿಸಲು ಆಧಾರ್ ಕಾರ್ಡ್, ವಿವಾಹ ನೋಂದಣಿ ಪ್ರಮಾಣಪತ್ರ ಮತ್ತು ಪೋಷಕರ ರೇಷನ್ ಕಾರ್ಡ್ ಅಗತ್ಯವಿದೆ. ಮಕ್ಕಳ ಹೆಸರನ್ನು ಸೇರಿಸಲು ಜನನ ಪ್ರಮಾಣಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಕೂಡ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿಯನ್ನು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಹಾಗೂ ಸೈಬರ್ ಸೆಂಟರ್‌ಗಳಲ್ಲಿ ಸಲ್ಲಿಸಬಹುದಾಗಿದೆ. ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿಯೂ ಸೇವೆ ಲಭ್ಯವಿದ್ದು, ಗ್ರಾಮೀಣ ಭಾಗದ ಜನರಿಗೆ ಇದರಿಂದ ಅನುಕೂಲವಾಗಲಿದೆ.
ಅರ್ಜಿಯ ನಂತರ ತುರ್ತಾಗಿ ಕಾರ್ಡ್ ಬೇಕಿದ್ದರೆ ಸಂಬಂಧಿತ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಬಹುದು. ಅರ್ಜಿ ರಶೀದಿ ನೀಡಿದ ಬಳಿಕ ಪರಿಶೀಲನೆ ನಡೆಸಿ ತ್ವರಿತ ಸೇವೆ ನೀಡಲಾಗುತ್ತದೆ. ಸಾಮಾನ್ಯ ಪ್ರಕ್ರಿಯೆಯಲ್ಲಿ ಒಂದು ತಿಂಗಳೊಳಗೆ ಹೊಸ ಕಾರ್ಡ್ ದೊರೆಯುವ ಸಾಧ್ಯತೆ ಇದೆ.
ಇನ್ನೊಂದೆಡೆ ಅನ್ನಭಾಗ್ಯ ಯೋಜನೆಯಡಿ ರಾಗಿ ಮತ್ತು ಜೋಳ ವಿತರಣೆಯನ್ನೂ ಸರ್ಕಾರ ಹೆಚ್ಚಿಸಲು ಮುಂದಾಗಿದೆ. ಅಕ್ಕಿ ದುರುಪಯೋಗ ತಡೆಯಲು ಕೆಲವು ಪ್ರದೇಶಗಳಲ್ಲಿ ಎರಡು ಕೆಜಿ ರಾಗಿ ಅಥವಾ ಜೋಳ ವಿತರಿಸುವ ಯೋಜನೆ ರೂಪಿಸಲಾಗಿದೆ.



