ಕಣ್ಮನ ಸೆಳೆಯುವ ಗಿರಿಧಾಮ ‘ರಾಣಿಪುರಂ’

0

ಪಶ್ಚಿಮಘಟ್ಟಗಳು ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿ. ಎತ್ತರವಾದ ಬೆಟ್ಟದ ಸಾಲು, ಮುಗಿಲು ಮುಟ್ಟುವಷ್ಟು ಎತ್ತರಕ್ಕೆ ಬೆಳೆದಿರೋ ಕಾಡುಗಳು. ನಯನಮನೋಹರ ದೃಶ್ಯಕಾವ್ಯ. ಇದು ಪಶ್ಚಿಮಘಟ್ಟದ ಪ್ರವಾಸಿ ತಾಣಗಳ ವಿಶೇಷತೆ. ಇಂತಹ ಎಲ್ಲಾ ಲಕ್ಷಣಗಳನ್ನು ಹೊಂದಿಕೊಂಡಿರುವ ಒಂದು ವಿಶಿಷ್ಟ ಪ್ರವಾಸಿ ತಾಣವೇ ಕೊಡಗು ಜಿಲ್ಲೆಯ ಸನಿಹದಲ್ಲಿರೋ ರಾಣಿಪುರಂ.

ಕೊಡಗಿನ ಗಡಿಪ್ರದೇಶವಾದ ಕರಿಕೆಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ರಾಣಿಪುರಂ ಕಾಸರಗೋಡು ಜಿಲ್ಲೆಗೆ ಸೇರುತ್ತದೆ. ಸಮುದ್ರ ಮಟ್ಟದಿಂದ 1022 ಮೀ. ಎತ್ತರದಲ್ಲಿರುವ ರಾಣಿಪುರ ಪ್ರವಾಸಿಗರ ಹಾಟ್ ಸ್ಪಾಟ್. ಕಾಸರಗೋಡು ಜಿಲ್ಲೆಯಲ್ಲಿರುವ ರಾಣಿಪುರಂ ಕೇರಳದ ಪ್ರಸಿದ್ದ ಗಿರಿಧಾಮಗಳಲ್ಲಿ ಒಂದು. ದೇವರ ನಾಡಿಗೆ ಸೇರಿರೋ ರಾಣಿಪುರ ಸೌಮ್ಯ ಬೆಟ್ಟಗಳು ಟ್ರೆಕ್ಕಿಂಗ್ ಜಾಡುಗಳಿಗೆ ಹೆಸರುವಾಸಿ. ಕೊಟ್ಟಂಚೇರಿ – ತಲಕಾವೇರಿ ಪರ್ವತ ಶ್ರೇಣಿಯ ಪಕ್ಕದಲ್ಲಿರುವ ಈ ಪ್ರದೇಶವು ದಟ್ಟ ಅರಣ್ಯ ಮತ್ತು ಹುಲ್ಲುಗಾವಲುಗಳನ್ನು ಒಳಗೊಂಡಿದೆ. ರಾಣಿಪುರ ಕರ್ನಾಟಕದ ತಲಕಾವೇರಿ ವನ್ಯಜೀವಿ ಅಭಯಾರಣ್ಯದೊಂದಿಗೆ ವಿಲೀನವಾಗಿದ್ದು, ಕರ್ನಾಟಕದ ಗಡಿಯನ್ನು ಹಂಚಿಕೊಳ್ಳುತ್ತದೆ.

ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು, ಜಿಂಕೆ, ಚಿರತೆ, ಮುಳ್ಳುಹಂದಿ, ಚಿಟ್ಟೆಗಳು ಮತ್ತು ದೈತ್ಯ ಅಳಿಲುಗಳಂತಹ ಪ್ರಾಣಿಗಳಿಗೆ ಆವಾಸ ತಾಣವೂ ಹೌದು. ಕೇವಲ ಪ್ರಾಣಿಗಳಷ್ಟೇ ಅಲ್ಲಾ, ಸುಮಾರು 200 ಕ್ಕೂ ಅಧಿಕ ಜಾತಿಯ ಪಕ್ಷಿಗಳನ್ನು ಕಾಣಬಹುದಾಗಿದೆ. ಅಭಯಾರಣ್ಯವನ್ನು ಅನ್ವೇಷಿಸುವವರಿಗೆ ಸಫಾರಿಯ ಅವಕಾವೂ ಇದೆ.

ರಾಣಿಪುರದಲ್ಲಿರುವ ಟ್ರೆಕ್ಕಿಂಗ್ ಮಾರ್ಗಗಳು ಹಾಗೂ ಇಲ್ಲಿರೋ ಸಸ್ಯ ವರ್ಗ ಟ್ರಕ್ಕಿಂಗ್ ಪ್ರಿಯರಿಗೆ ಸಖತ್ ಖುಷಿಯನ್ನು ಕೊಡುತ್ತದೆ. ಆದರೆ ಇಲ್ಲಿರೋ ಬಂಡೆಗಳು ಜಾರುವುದರಿಂದ ಟ್ರೆಕ್ಕಿಂಗ್ ಮಾಡುವಾಗ ಬಹು ಎಚ್ಚರಿಕೆಯನ್ನು ವಹಿಸುವುದು ಅತೀ ಅಗತ್ಯ. ತಲಕಾವೇರಿ ಮತ್ತು ಕೊಟ್ಟಗಿರಿಗೆ ರಾಣಿಪುರಂನಿಂದ ಚಾರಣ ಮಾರ್ಗಗಳಿವೆ.

ರಾಣಿಪುರ ಕೇವಲ ಪ್ರವಾಸಿ ತಾಣವಷ್ಟೇ ಅಲ್ಲಾ ಧಾರ್ಮಿಕ ಕ್ಷೇತ್ರವಾಗಿಯೂ ನೆಲೆನಿಂತಿದೆ. ಮಡಿಯಮ್ ಕೋವಿಲಕಾಂ ದೇವಸ್ಥಾನ, ಪಾಲಕ್ಕಿನ್ ಭಗವತಿ ದೇವಸ್ಥಾನ, ಭರಣಿ ಮಹೋತ್ಸವಂ, ಆನಂದಾಶ್ರಾಮ, ನಿತ್ಯಾನಂದಶ್ರಾಮ ಮತ್ತು ಕೊಟ್ಟಂಚೇರಿ ಬೆಟ್ಟಗಳು ರಾಣಿಪುರಕ್ಕೆ ಸಮೀಪವಿರುವ ಇತರ ಆಕರ್ಷಣೆಗಳಾಗಿವೆ.

ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಒದಗಿಸಿದ ಪ್ರವಾಸಿ ಕುಟೀರಗಳಲ್ಲಿ ಪ್ರವಾಸಿಗರು ಆಶ್ರಯವನ್ನು ಪಡೆಯಬಹುದಾಗಿದೆ. ಇನ್ನು ರಾಣಿಪುರಕ್ಕೆ ಭೇಟಿ ನೀಡುವವರಿಗೆ ನವೆಂಬರ್ ನಿಂದ ಮಾರ್ಚ್ ಸೂಕ್ತ ಸಮಯವಾಗಿದೆ. ಆದರೆ ರಾಣಿಪುರಂನಲ್ಲಿ ಯಾವುದೇ ತಿಂಡಿ ತಿನಿಸುಗಳು ಸಿಗೋದಿಲ್ಲಾ ಹೀಗಾಗಿ ಆಹಾರ ಸಾಮಗ್ರಿಗಳನ್ನು ಕೊಡೊಯ್ಯುವುದು ಸೂಕ್ತ.

ತಲುಪುವುದು ಹೇಗೆ ?
ರಾಣಿಪುರಂ ಅನ್ನು ಕಾಙಂಘಾಡ್ ಮತ್ತು ಪನಾಥಡಿ ಮೂಲಕ ತಲುಪಬಹುದು. ಪಣಥಾಡಿ ರಾಣಿಪುರಂ ಗಿರಿಧಾಮದಿಂದ 9 ಕಿಮೀ ದೂರದಲ್ಲಿದೆ. ಪನಾಥಡಿಯಿಂದ ಜೀಪ್ ಸೇವೆಗಳು ಪ್ರವಾಸಿಗರಿಗೆ ಲಭ್ಯವಿದ್ದು, ಇಡೀ ದಿನ ಇಲ್ಲಿಗೆ ಟ್ರಕ್ಕಿಂಗ್ ಮಾಡಲು ಅರಣ್ಯ ಇಲಾಖೆ ಅನುಮತಿ ನಿಡುತ್ತದೆ. ಪಾಣತ್ತೂರು ಪ್ರದೇಶಕ್ಕೂ ರಾಣಿಪುರಂ ಅತೀ ಸನಿಹದಲ್ಲಿದ್ದು, ಸುಳ್ಯದಿಂದ ಕೇವಲ 28 ಕಿ.ಮೀ. ದೂರದಲ್ಲಿದೆ. ರಾಣಿಪುರಂಗೆ ಮಂಗಳೂರಿನಿಂದ ಕಾಇ್ಜಿಂಗಾಡ್ ಮಾರ್ಗವಾಗಿಯೂ ಪ್ರಯಾಣಿಸಬಹುದಾಗಿದೆ.

Leave A Reply

Your email address will not be published.