ಬಜೆಟ್‌ ಚಿಂತೆ ಬಿಟ್ಟಾಕಿ : EMI ಕಟ್ಟಿ ಭಾರತದ ಐತಿಹಾಸಿಕ ಕ್ಷೇತ್ರಗಳಿಗೆ ಭೇಟಿ ನೀಡಿ

ಹಣವಿಲ್ಲ ಎಂದು ನಿಮ್ಮ ಕನಸಿನ ತೀರ್ಥಯಾತ್ರೆಯ ಆಸೆಗೆ ಕಡಿವಾಣ ಹಾಕುವ ಅವಶ್ಯಕತೆಯಿಲ್ಲ. ಇದೀಗ IRCTC ಅದಕ್ಕೊಂದು ವಿಶೇಷ ಸೌಲಭ್ಯ ಕಲ್ಪಿಸಿದೆ. ಅದೇನೆಂದರೆ EMI ಸೌಲಭ್ಯದಲ್ಲಿ ಭಾರತ ದರ್ಶನ. ಹಾಗೆಂದರೆ...

ಭಾರತ ದೇಶದ ಪಾರಂಪರಿಕ ತಾಣಗಳ ಪ್ರವಾಸವನ್ನು ಉತ್ತೇಜಿಸುವ ಸಲುವಾಗಿ ವಿಶೇಷವಾಗಿ ಓಡುವ ಭಾರತೀಯ ರೈಲು ಭಾರತ್ ಗೌರವ್‌ ಟೂರಿಸ್ಟ್‌ ಟ್ರೈನ್‌. ಇದು ದೇಶದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಪ್ರಚಾರ ಮಾಡುವ ಸಲುವಾಗಿ ಭಾರತೀಯ ರೈಲ್ವೆ ಹಾಗೂ IRCTC ಜಂಟಿಯಾಗಿ ಆರಂಭಿಸಿರುವ ವಿಶೇಷ ಥೀಮ್‌ನ ಪ್ರವಾಸಿ ರೈಲು. ಇದರ ಮುಖ್ಯ ಉದ್ದೇಶ ಭಾರತದ ಶ್ರೀಮಂತ ಪರಂಪರೆಯನ್ನು ಜನರಿಗೆ ಪರಿಚಯಿಸುವುದಾಗಿದೆ. ಭಾರತ್‌ ಗೌರವ್‌ ಟೂರಿಸ್ಟ್‌ ಟ್ರೈನ್‌ ಕೆಲವು ಪ್ರವಾಸಿ ಪ್ಯಾಕೇಜ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪರಿಚಯಿಸಿದೆ. ಇದು ಉತ್ತಮ ಪ್ರವಾಸಿ ಪ್ಯಾಕೇಜ್‌ ಎಂದು ಹೇಳಬಹುದಾಗಿದೆ.

ಭಾರತ್‌ ಗೌರವ್‌ ಟೂರಿಸ್ಟ್‌ ಟ್ರೈನ್‌ನಲ್ಲಿ ಯಾವೆಲ್ಲ ಸೌಲಭ್ಯಗಳಿವೆ?

ಇದೊಂದು ಪ್ರವಾಸಿ ರೈಲು ಆಗಿದ್ದರಿಂದ ಪ್ರವಾಸಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಪ್ಯಾಕೇಜ್‌ನಲ್ಲಿ ಒದಗಿಸುತ್ತದೆ. ಈ ರೈಲಿನ ಟಿಕೆಟ್ ದರದಲ್ಲೇ ಪ್ರಯಾಣ, ವಸತಿ, ಸಸ್ಯಾಹಾರಿ ಊಟ, ಮತ್ತು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬಸ್ ಸೌಲಭ್ಯ ಎಲ್ಲವೂ ಒಳಗೊಂಡಿರುತ್ತದೆ. ಈ ರೈಲಿನಲ್ಲಿ ಎಸಿ (AC) ಮತ್ತು ನಾನ್- ಎಸಿ (Non-AC) ಎರಡೂ ರೀತಿಯ ಬೋಗಿಗಳನ್ನು ಹೊಂದಿರುವ ರೈಲುಗಳು ಲಭ್ಯವಿದೆ. ಸುರಕ್ಷತೆಯ ಬಗ್ಗೆ ಹೇಳುವುದಾದರೆ ಇದರ ಪ್ರತಿಯೊಂದು ಕೋಚ್‌ನಲ್ಲೂ ಪ್ರವಾಸಿಗರ ನೆರವಿಗಾಗಿ ಪ್ರವಾಸ ಮಾರ್ಗದರ್ಶಕರು (Tour Escorts) ಮತ್ತು ಭದ್ರತಾ ವ್ಯವಸ್ಥೆ ಇರುತ್ತದೆ. ಈ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೂ ಉಚಿತವಾಗಿ ಪ್ರಯಾಣ ವಿಮೆ (Travel Insurance) ಸೌಲಭ್ಯವನ್ನು ಒದಗಿಸಲಾಗುತ್ತದೆ.

ಪ್ರಮುಖ ಪ್ರವಾಸಿ ಪ್ಯಾಕೇಜ್‌ಗಳು ಯಾವುವು?

ಭಾರತ್‌ ಗೌರವ್‌ ಟೂರಿಸ್ಟ್‌ ಟ್ರೈನ್‌ ವಿವಿಧ ಟೂರ್‌ ಪ್ಯಾಕೇಜ್‌ಗಳನ್ನು ನೀಡುತ್ತದೆ.

  • ಕಾಶಿ ದರ್ಶನ : ವಾರಣಾಸಿ (ಕಾಶಿ), ಅಯೋಧ್ಯೆ, ಪ್ರಯಾಗ್‌ರಾಜ್ ಮತ್ತು ಗಯಾ ಕ್ಷೇತ್ರಗಳನ್ನು ಒಳಗೊಂಡ ಪ್ರಸಿದ್ಧ ಯಾತ್ರಾ ಪ್ಯಾಕೇಜ್ ಇದಾಗಿದೆ.
  • ಜ್ಯೋತಿರ್ಲಿಂಗ ಯಾತ್ರೆ : ಭಾರತದ ಪ್ರಮುಖ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನಕ್ಕಾಗಿ ರೂಪಿಸಿರುವ ವಿಶೇಷ ಪ್ರವಾಸ ಪ್ಯಾಕೇಜ್‌ ಆಗಿದೆ.
  • ದಿವ್ಯ ದಕ್ಷಿಣ ಯಾತ್ರೆ : ಈ ಪ್ಯಾಕೇಜ್‌ ನಲ್ಲಿ ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳು ಸೇರಿವೆ. ಪ್ರಮುಖವಾಗಿ ತಿರುಪತಿ ಬಾಲಾಜಿ ದೇವಸ್ಥಾನ, ರಾಮನಾಥಸ್ವಾಮಿ ದೇವಸ್ಥಾನ (ರಾಮೇಶ್ವರಂ), ಮೀನಾಕ್ಷಿ ಅಮ್ಮನ್ ದೇವಸ್ಥಾನ (ಮಧುರೈ), ಕನ್ಯಾಕುಮಾರಿ, ಮಲ್ಲಿಕಾರ್ಜುನ ಜ್ಯೋತಿರ್ಲಿಂಗ (ಶ್ರೀಶೈಲಂ) ಮುಂತಾದ ಕ್ಷೇತ್ರಗಳು ಸೇರಿವೆ.
  • ಈಶಾನ್ಯ ಭಾರತ ಪ್ರವಾಸ : ಇದರಲ್ಲಿ ಭಾರತದ ಈಶಾನ್ಯ ಭಾಗದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಸೇರಿವೆ. ಗ್ಯಾಂಗ್ಟಾಕ್, ಡಾರ್ಜಿಲಿಂಗ್‌ ಹಾಗೂ ಆಸ್ಸಾಂನ ಪ್ರಮುಖ ತಾಣಗಳನ್ನು ಸಂದರ್ಶಿಸುವ ವಿಶೇಷ ಪ್ಯಾಕೇಜ್‌ ಇದಾಗಿದೆ.

ಬಜೆಟ್‌ ಎಷ್ಟಾಗಬಹುದು?

ಪ್ರಯಾಣಿಕರು ತಮ್ಮ ಅನುಕೂಲತೆ ಮತ್ತು ಬಜೆಟ್‌ಗೆ ಅನುಗುಣವಾಗಿ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸ್ಲೀಪರ್ (ಎಕಾನಮಿ ಕ್ಲಾಸ್‌) ದರಗಳು ಪ್ರತಿ ವ್ಯಕ್ತಿಗೆ ಸುಮಾರು 23,560 ರೂ. ಆಗಬಹುದು. 3AC (ಸ್ಟ್ಯಾಂಡರ್ಡ್‌) ದರಗಳು ಪ್ರತಿ ವ್ಯಕ್ತಿಗೆ ಸುಮಾರು 39,100 ರೂ. ಮತ್ತು 2AC (ಕಂಫರ್ಟ್) ದರಗಳು ಪ್ರತಿ ವ್ಯಕ್ತಿಗೆ ಸುಮಾರು 51,760 ರೂ. ಆಗಬಹುದು. ಪ್ರವಾಸದ ಆಧಾರದ ಮೇಲೆ ದರದಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಆದರೂ ಇದು ಕಡಿಮೆ ಬೆಲೆಯಲ್ಲಿ ಭಾರತವನ್ನು ಸುತ್ತಬಹುದಾದ ಬೆಸ್ಟ್‌ ಪ್ರವಾಸ ಪ್ಯಾಕೇಜ್‌ ಆಗಿದೆ. ಆಸಕ್ತ ಪ್ರಯಾಣಿಕರು IRCTC ಪ್ರವಾಸೋದ್ಯಮ ಕಚೇರಿ ಅಥವಾ ಅದರ ಅಧಿಕೃತ ವೆಬ್‌ಸೈಟ್: www.irctctourism.com ನಿಂದ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

EMI ಸೌಲಭ್ಯ ವೈಶಿಷ್ಟ್ಯ

ಈ ರೈಲಿನಲ್ಲಿ ಪ್ರವಾಸ ಕೈಗೊಳ್ಳಲು EMI ಸೌಲಭ್ಯ ಒದಗಿಸಲಾಗಿದೆ. ಮಧ್ಯಮ ವರ್ಗದ ಮತ್ತು ಬಜೆಟ್ ಕೊರತೆ ಇರುವ ಪ್ರಯಾಣಿಕರಿಗೂ ತೀರ್ಥಯಾತ್ರೆ ಸುಲಭವಾಗಲಿ ಎಂಬ ಉದ್ದೇಶದಿಂದ IRCTC ಈ ವಿಶೇಷ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ಈ ಸೌಲಭ್ಯ ಪಡೆದು ನಿಮ್ಮ ನೆಚ್ಚಿನ ಕ್ಷೇತ್ರಗಳನ್ನು ಭೇಟಿ ಮಾಡಬಹುದು.

  • ಕಂತುಗಳು : ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ 3 ತಿಂಗಳಿಂದ 36 ತಿಂಗಳುಗಳ EMI ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಪೇಮೆಂಟ್‌ ಗೇಟ್‌ವೇಸ್‌ : ಪೇಟಿಎಮ್‌, ರಜೂರ್‌ಪೇ, ಬಜಾಜ್‌ ಫೈನಾನ್ಸ್‌ ನಂತಹ ಪ್ರಮುಖ ಸಂಸ್ಥೆಗಳ ಮೂಲಕ EMI ಪಡೆಯಬಹುದು.
  • ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಆಫರ್‌

ಡೆಬಿಟ್ ಕಾರ್ಡ್ (Debit Card): 3 ರಿಂದ 18 ತಿಂಗಳವರೆಗಿನ EMI ಅವಧಿ.

* ಕ್ರೆಡಿಟ್ ಕಾರ್ಡ್ (Credit Card): 3 ರಿಂದ 24 ಅಥವಾ 36 ತಿಂಗಳವರೆಗಿನ EMI ಅವಧಿ.

* ಬಜಾಜ್ ಫೈನಾನ್ಸ್ (Bajaj Finance): ಕೇವಲ 3 ಮತ್ತು 5 ತಿಂಗಳ ಅಲ್ಪಾವಧಿ ಕಂತುಗಳ ಸೌಲಭ್ಯ.

ಇದನ್ನೂ ಓದಿ: Whistling Village Kongthong : ಈ ಹಳ್ಳಿಯಲ್ಲಿ ಮಕ್ಕಳನ್ನು ಹೆಸರಿಟ್ಟು ಕರೆಯಲ್ಲ, ಬದಲಿಗೆ ಹಾಡು ಹಾಡ್ತಾರೆ ! ಸೀಟಿ ಮೂಲಕವೇ ನಡೆಯುತ್ತೆ ಇಲ್ಲಿನ ಸಂವಹನ

ಈ ಸೌಲಭ್ಯ ಪಡೆಯುವುದು ಹೇಗೆ?

ಐಆರ್‌ಸಿಟಿಸಿಯ ಟೂರಿಸಂ ಪೋರ್ಟಲ್‌ಗೆ ಲಾಗಿನ್‌ ಆಗಿ ನಿಮ್ಮ ನೆಚ್ಚಿನ ಪ್ರವಾಸದ ಪ್ಯಾಕೇಜ್‌ ಆಯ್ದುಕೊಂಡು, ಅಲ್ಲಿ ಎಲ್ಲ ವಿವರಗಳನ್ನು ಭರ್ತಿ ಮಾಡಿದ ನಂತರ ಪೇಮೆಂಟ್‌ ಹಂತಕ್ಕೆ ಬಂದಾಗ EMI ಪಾವತಿ ಆಯ್ಕೆಯನ್ನು ಆರಿಸಿ. ಅಲ್ಲಿ ನಿಮ್ಮ ಕ್ರಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ವಿವರ ನಮೂದಿಸಿ, ಸೂಕ್ತ ಕಂತಿನ ಅವಧಿಯನ್ನು ಆಯ್ಕೆ ಮಾಡಿ. ನಿಮ್ಮ ಬ್ಯಾಂಕ್‌ ನಿಮ್ಮ ಸಿಬಿಲ್‌ ಸ್ಕೋರ್‌ ಆಧರಿಸಿ 24 ಗಂಟೆಗಳ ಒಳಗೆ ಸಾಲದ ಮೊತ್ತ ಅನುಮೋದಿಸುತ್ತದೆ.

ಗಮನಿಸಿ : ಕರ್ನಾಟಕದ ನಿವಾಸಿಗಳು ಕರ್ನಾಟಕ ಸರ್ಕಾರವು ಕಾಶಿ ಯಾತ್ರೆಗೆ ಈ ರೈಲನ್ನು ಬಳಸಿದರೆ, ಅವರಿಗೆ 7,500/- ಸಹಾಯಧನವನ್ನು ನೀಡುತ್ತದೆ. ಒಟ್ದಾರೆಯಗಿ ಇದರ ಸದುಪಯೋಗ ಪಡೆದುಕೊಂಡು ಪವಿತ್ರ ಕ್ಷೇತ್ರಗಳ ದರ್ಶನ ಪಡೆಯಬಹುದಾಗಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.