ಕೊರೊನಾ ವೈರಸ್ ಎಫೆಕ್ಟ್ : ಕರಾವಳಿಯ ಪ್ರವಾಸಿ ತಾಣಗಳಿಗೆ ಯಾಕಿಲ್ಲ ನಿರ್ಬಂಧ ?

0

ಮಂಗಳೂರು : ಕೊರೊನಾ ವೈರಸ್ ವಿಶ್ವವನ್ನೇ ನಡುಗಿಸುತ್ತಿದೆ. ದೇಶ, ರಾಜ್ಯದಲ್ಲಿಯೂ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಕೇಂದ್ರ, ರಾಜ್ಯ ಸರಕಾರಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವಲ್ಲೇ ಕರಾವಳಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಕೊರೊನಾ ಆತಂಕ ಕರಾವಳಿಗರನ್ನು ಕಾಡುತ್ತಿದೆ.

ಕೊರೊನಾ ಮಹಾಮಾರಿ ಅಟ್ಟಹಾಸವನ್ನು ಮೆರೆಯೋದಕ್ಕೆ ಶುರುಮಾಡುತ್ತಿದ್ದಂತೆಯೇ ಚೀನಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಪ್ರವಾಸಿ ತಾಣಗಳಿಗೆ ನಿರ್ಬಂಧವನ್ನು ಹೇರಿವೆ. ಪ್ರವಾಸಿ ವೀಸಾಗಳನ್ನು ರದ್ದು ಮಾಡಿದೆ. ಪ್ರವಾಸಿಗರಿಂದ ಕೊರೊನಾ ಹರಡದಂತೆ ಜಾಗೃತಿಯನ್ನು ವಹಿಸಿವೆ.

ಅಲ್ಲದೇ ಕೊರೊನಾ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದೇ ನಿಟ್ಟಿನಲ್ಲಿ ರಾಜ್ಯದ ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರವಾಸಿ ತಾಣಗಳಿಗೂ ಆಯಾಯಾ ಜಿಲ್ಲಾಡಳಿತ ಈಗಾಗಲೇ ನಿಷೇಧವನ್ನು ಹೇರಿವೆ. ಆದರೆ ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಇನ್ನೂ ನಿರ್ಬಂಧ ಹೇರಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು, ಸಸಿಹಿತ್ಲು, ಪಿಲುಕುಳ ಹಾಗೂ ಉಡುಪಿ ಜಿಲ್ಲೆಯ ಮಲ್ಪೆ, ಸೈಂಟ್ ಮೇರಿಸ್, ಕಾಪು ಬೀಚ್, ಮರವಂತೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಆದರೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಹೆಚ್ಚಾಗಿ ಬರೋ ಪ್ರವಾಸಿಗರು ನೆರೆಯ ಕೇರಳ ರಾಜ್ಯದವರು.

ಕೇರಳದಲ್ಲಿ ಈಗಾಗಲೇ ಕೊರೊನಾ ವೈರಸ್ ದಿನೇ ದಿನೇ ಹೆಚ್ಚುತ್ತಿದೆ. ಕೇರಳದಲ್ಲಿ ಈಗಾಗಲೇ ಕೊರೊನಾ ತಡೆಗೆ ಅಗತ್ಯಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿ ತಾಣಗಳಿಗೂ ನಿರ್ಬಂಧ ಹೇರಿದೆ. ಆದರೆ ಕೇರಳಿಗರು ಹೆಚ್ಚಾಗಿ ಕರ್ನಾಟಕ ಕರಾವಳಿಯ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ. ಬೀಚ್ ಗಳಲ್ಲಿ ವೀಕೆಂಡ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದೀಗ ಪ್ರವಾಸಿ ತಾಣಗಳಿಂದಲೂ ಕೊರೊನಾ ಹರಡುವ ಭೀತಿ ಕರಾವಳಿಗರನ್ನು ಕಾಡುತ್ತಿದೆ.

ನೆರೆಯ ಚಿಕ್ಕಮಗಳೂರು, ಕೊಡಗು ಜಿಲ್ಲಾಡಳಿತಗಳು ಈಗಾಗಲೇ ತಮ್ಮ ಜಿಲ್ಲಾ ವ್ಯಾಪ್ತಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೋಗುವುದನ್ನು ನಿರ್ಬಂಧಿಸಿದೆ. ಅದೇ ರೀತಿಯಲ್ಲಿ ಕರಾವಳಿಯ ಪ್ರವಾಸಿ ತಾಣಗಳ ಮೇಲೆ ಕೆಲವು ದಿನಗಳ ಮಟ್ಟಿಗಾದ್ರೂ ನಿಷೇಧ ಹೇರಿ ಅನ್ನೋ ಮಾತುಗಳು ಕೇಳಿಬರ್ತಿದೆ.

ದಿನೇ ದಿನೇ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರೋದು ಕರಾವಳಿಗರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹೆಚ್ಚುತ್ತಿರೋ ಬೆನ್ನಲ್ಲೇ ಪ್ರವಾಸಿ ತಾಣಗಳಿಗೆ ನಿರ್ಬಂಧವನ್ನು ಹೇರದೆ ಸರಕಾರ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ ಅನ್ನೋದು ಸಾರ್ವಜನಿಕರ ಅಳಲು.

ಪ್ರವಾಸಿ ತಾಣಗಳು ಎಂದಿನಂತೆಯೇ ಕಾರ್ಯನಿರ್ವಹಿಸಿದ್ರೆ ಮುಂದಕ್ಕೆ ಆಗುವ ಅನಾಹುತಗಳಿಗೆ ಯಾರು ಹೊಣೆ. ಇತರ ದೇಶಗಳು ಮೊದಲು ನಿರ್ಬಂಧಿಸಿದ್ದು ಪ್ರವಾಸಿ ತಾಣಗಳನ್ನು, ಆದರೆ ಕರಾವಳಿ ಭಾಗದ ಪ್ರವಾಸಿ ತಾಣಗಳಿಗೆ ಇನ್ನೂ ನಿರ್ಬಂಧ ಬಿದ್ದಿಲ್ಲ. ಕೊರೊನಾ ಸೋಂಕು ವ್ಯಾಪಿಸಿದ ಮೇಲೆ ನಿರ್ಬಂಧ ಹೇರೋ ಬದಲು ಮೊದಲೇ ಎಚ್ಚೆತ್ತುಕೊಳ್ಳುವುದು ಒಳಿತು.

Leave A Reply

Your email address will not be published.