ಮಲ್ಪೆ ಬಂದರಿನಲ್ಲಿ ಗಲಾಟೆ: ಪರಸ್ಪರ ದೂರು ದಾಖಲು
ಮೀನುಗಾರಿಕಾ ವ್ಯವಹಾರ ನಡೆಸುತ್ತಿದ್ದ ಜಯೇಶ್ ಕೋಟ್ಯಾನ್ ಹಾಗೂ ಹರೀಶ್ ನಡುವಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.
ಉಡುಪಿ : ಮಲ್ಪೆ ಬಂದರು ವ್ಯಾಪ್ತಿಯ ಆಕ್ಷನ್ ದಕ್ಕೆಯಲ್ಲಿ ಮೀನುಗಾರಿಕಾ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ದೂರುಗಳ ಆಧಾರದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೀನುಗಾರಿಕಾ ವ್ಯವಹಾರ ನಡೆಸುತ್ತಿದ್ದ ಜಯೇಶ್ ಕೋಟ್ಯಾನ್ ಹಾಗೂ ಹರೀಶ್ ನಡುವಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ವೈಷಮ್ಯ ಉಂಟಾಗಿತ್ತು ಎನ್ನಲಾಗಿದೆ.
ದೂರುದಾರ ಹರೀಶ್ ನೀಡಿದ ಮಾಹಿತಿಯಂತೆ, ಏ.30ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಕೊಡವೂರು ಗ್ರಾಮದ ಮಲ್ಪೆ ಬಂದರಿನ ಆಕ್ಷನ್ ದಕ್ಕೆಯಲ್ಲಿ ತಾನು ಇದ್ದ ವೇಳೆ, ಜಯೇಶ್ ಕೋಟ್ಯಾನ್ ಅವರ ತಾಯಿ ಭಾರತಿ ಕೋಟ್ಯಾನ್, ಉದಯ ಪೂಜಾರಿ ಅಲಿಯಾಸ್ ಕೋರಿ ಉದಯ, ಶೇಕು ಕಟಪಾಡಿ ಹಾಗೂ ಪರುಶೋತ್ತಮ ಕಾರಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕಾರ್ಕಳದ ರೌಡಿ ಶೀಟರ್ ಸೋಮನಾಥ ಗಡಿಪಾರು
ಜಯೇಶ್ ಕೋಟ್ಯಾನ್ ತನ್ನ ಎದೆ ಹಾಗೂ ಮರ್ಮಾಂಗ ಭಾಗಕ್ಕೆ ತುಳಿದಿದ್ದು, ಬಳಿಕ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯರು ಮಧ್ಯಪ್ರವೇಶಿಸಿ ಗಾಯಾಳು ಹರೀಶ್ ಅವರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊಲೆ ಯತ್ನ ಆರೋಪದಡಿ ಕ್ರಮ ಕೈಗೊಳ್ಳುವಂತೆ ಹರೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮಲ್ಪೆ ಠಾಣೆ ಅಪರಾಧ ಸಂಖ್ಯೆ 48/2026ರಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಇನ್ನೊಂದೆಡೆ, ಜಯೇಶ್ ಕೋಟ್ಯಾನ್ ಅವರ ತಾಯಿ ಭಾರತಿ ಕೋಟ್ಯಾನ್ ಅವರು ಸಹ ಹರೀಶ್ ವಿರುದ್ಧ ಪ್ರತಿದೂರು ನೀಡಿದ್ದು, ಮಲ್ಪೆ ಠಾಣೆ ಅಪರಾಧ ಸಂಖ್ಯೆ 49/2026ರಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



