ತನ್ನ ಮದುವೆಯಲ್ಲಿ ಕ್ರಿಮಿನಲ್‌ಗಳ ಜೊತೆ ಕುಣಿದಾಡಿದ ಪೊಲೀಸ್! ಕಂತೆ ಕಂತೆ ಹಣ ತೂರಿದವ ಸಸ್ಪೆಂಡ್
India News | Viral News: ಜೈಪುರ : ತನ್ನ ಮದುವೆಯ ಸಂಭ್ರಮದಲ್ಲಿ ಹತ್ತಾರು ಬೇಕಾಗಿದ್ದ (Wanted) ಕ್ರಿಮಿನಲ್‌ಗಳನ್ನು ಆಹ್ವಾನಿಸಿ, ಅವರೊಂದಿಗೆ ಹಣದ ಮಳೆ ಸುರಿಸುತ್ತಾ ಕುಣಿದಾಡಿದ ರಾಜಸ್ಥಾನದ ಪೊಲೀಸ್ ಪೇದೆಯೊಬ್ಬರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಮದುವೆಯಾಗಿ ಎರಡೇ ದಿನಕ್ಕೆ ಈ ಪೇದೆ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ.
ಏನಿದು ಘಟನೆ?
ಝಲಾವರ್ ಜಿಲ್ಲೆಯ ವಿಶೇಷ ತಂಡದ (Special Team) ಭಾಗವಾಗಿದ್ದ ಪೇದೆ ಅಶೋಕ್ ಬಿಷ್ಣೋಯ್ ಎಂಬುವವರ ಮದುವೆ ಇತ್ತೀಚೆಗೆ ನಾಗೌರ್‌ನಲ್ಲಿ ನಡೆದಿತ್ತು. ಈ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋದಲ್ಲಿ ಬಿಷ್ಣೋಯ್ ಜೊತೆಗೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕುಖ್ಯಾತ ಕ್ರಿಮಿನಲ್‌ಗಳು ಪೋಸ್ ನೀಡಿರುವುದು ಮತ್ತು ಮದುವೆಯಲ್ಲಿ ಕಂತೆ ಕಂತೆ ಹಣವನ್ನು ಗಾಳಿಯಲ್ಲಿ ತೂರಿ ಸಂಭ್ರಮಿಸಿರುವುದು ಕಂಡುಬಂದಿದೆ.
ಅತಿಥಿಗಳಾಗಿದ್ದವರು ಯಾರು?
ಪೋಲಿಸ್ ದಾಖಲೆಗಳ ಪ್ರಕಾರ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿರುವ ಎಂಟು ಜನರಿಗಿಂತ ಹೆಚ್ಚು ಅಪರಾಧಿಗಳು ಈ ಮದುವೆಗೆ ಹಾಜರಾಗಿದ್ದರು:
ಪಪ್ಪು ತನ್ವರ್: ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಪ್ರಕರಣದ ಆರೋಪಿ. ಇತ್ತೀಚೆಗಷ್ಟೇ ಪೊಲೀಸರು ಈತನ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.
ಟಾಪ್-10 ಅಪರಾಧಿಗಳು: ಡ್ರಗ್ಸ್ ಸಾಗಾಣಿಕೆ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ದುರ್ಗಾಲಾಲ್ ಅಲಿಯಾಸ್ ದುರ್ಗಾಶಂಕರ್, ರಮೇಶ್, ರಾಮಗೋಪಾಲ್, ಅತೀಕ್ ಮೊಹಮ್ಮದ್ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದ್ದರು.
Also Read : ಮಕ್ಕಳಲ್ಲಿ ಕ್ಯಾನ್ಸರ್: ಪೋಷಕರು ನಿರ್ಲಕ್ಷಿಸಬಾರದ ಪ್ರಮುಖ ಲಕ್ಷಣಗಳಿವು
Viral News : ಪೊಲೀಸ್ ಇಲಾಖೆಯ ಕ್ರಮ:
ಕ್ರಿಮಿನಲ್‌ಗಳ ಜೊತೆ ಪೇದೆ ಮೋಜು ಮಸ್ತಿ ಮಾಡುತ್ತಿರುವ ದೃಶ್ಯ ಮೇಲಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಝಲಾವರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಲಾಖಾ ತನಿಖೆಗೆ ಆದೇಶಿಸಿದ್ದರು. ಪೊಲೀಸ್ ಸಮವಸ್ತ್ರದ ಘನತೆಗೆ ಧಕ್ಕೆ ತರುವ ಯಾವುದೇ ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಪೇದೆಯ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಅಶೋಕ್ ಬಿಷ್ಣೋಯ್‌ನನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಕ್ರಿಮಿನಲ್ ಜಾಲಕ್ಕೂ ಮತ್ತು ಸ್ಥಳೀಯ ಪೊಲೀಸರಿಗೂ ನಡುವೆ ಇರುವ ಸಂಬಂಧದ ಬಗ್ಗೆ ಈಗ ಆಳವಾದ ತನಿಖೆ ನಡೆಯುತ್ತಿದೆ.



