ಕೇವಲ ₹113 ಇದ್ದ ಅಕೌಂಟ್ಗೆ ಬಂತು 294 ಕೋಟಿ ರೂಪಾಯಿ ! ಬ್ಯಾಂಕ್ ಸಿಬ್ಬಂದಿಯೇ ಶಾಕ್
Bihar Plumber Story: ಬಿಹಾರದ ಗಯಾ ಜಿಲ್ಲೆಯ ಒಬ್ಬ ಸಾಮಾನ್ಯ ಪ್ಲಂಬರ್ ಖಾತೆಗೆ ಹಠಾತ್ ಆಗಿ ಬರೋಬ್ಬರಿ 294 ಕೋಟಿ ರೂಪಾಯಿ ಜಮೆಯಾಗಿದೆ! ಕೇವಲ 113 ರೂಪಾಯಿ ಬ್ಯಾಲೆನ್ಸ್ ಇದ್ದ ಖಾತೆಗೆ ಇಷ್ಟೊಂದು ಹಣ ಬಂದಿದ್ದು ಹೇಗೆ? ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ಏನು ಹೇಳ್ತಿದ್ದಾರೆ? ಈ ನಿಗೂಢ ಹಣದ ಹಿಂದಿರೋ ಅಸಲಿ ಕಥೆ ಏನು? ಸಂಪೂರ್ಣ ಮಾಹಿತಿ ಈ ವೀಡಿಯೊದಲ್ಲಿದೆ.

Bihar Plumber Story: ಬಿಹಾರ : ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಕೇವಲ 100 ರೂಪಾಯಿ ಇದೆ ಅಂತ ಅಂದುಕೊಳ್ಳಿ. ಮರುದಿನ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಆ ಖಾತೆಗೆ ಬರೋಬ್ಬರಿ 294 ಕೋಟಿ ರೂಪಾಯಿ ಬಂದು ಬಿದ್ದರೆ ನಿಮಗೇನಾಗಬೇಡ? ಹೌದು, ನೀವು ಕೇಳ್ತಿರೋದು ನೂರಕ್ಕೆ ನೂರು ನಿಜ.
ಬಿಹಾರದ ಒಬ್ಬ ಸಾಮಾನ್ಯ ಪ್ಲಂಬರ್ ಖಾತೆಗೆ ರಾತ್ರೋರಾತ್ರಿ ಬರೋಬ್ಬರಿ 294 ಕೋಟಿ ರೂಪಾಯಿ ಜಮೆಯಾಗಿದೆ..! ಇದನ್ನು ನೋಡಿ ಆ ಪ್ಲಂಬರ್ ಮಾತ್ರವಲ್ಲ, ಸ್ವತಃ ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರೇ ಶಾಕ್ ಆಗಿದ್ದಾರೆ.ಕೇವಲ 113 ರೂಪಾಯಿ ಇದ್ದ ಅಕೌಂಟ್ಗೆ ಇಷ್ಟೊಂದು ಕೋಟಿ ಹಣ ಬಂದಿದ್ದು ಹೇಗೆ ? ಈ ನಿಗೂಢ ಹಣದ ಹಿಂದಿರೋ ಅಸಲಿ ರಹಸ್ಯವೇನು? ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಬಿಹಾರದ ಗಯಾ ಜಿಲ್ಲೆಯ ಧೋಬಿ ಅನ್ನೋ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪ್ರಮೋದ್ ಕುಮಾರ್ ದಿನಗೂಲಿ ನೌಕರಿ ಮಾಡಿಕೊಂಡಿರೋ ಒಬ್ಬ ಸಾಮಾನ್ಯ ಪ್ಲಂಬರ್. ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದ್ರು ಇವರಿಗೆ ಸಿಗುತ್ತಿದ್ದುದು ಕೇವಲ ಕೆಲವು ನೂರು ರೂಪಾಯಿಗಳು ಮಾತ್ರ. ಇತ್ತೀಚೆಗೆ ಪ್ರಮೋದ್ ಕುಮಾರ್ ಅವರು ತಮ್ಮ ಮೊಬೈಲ್ಗೆ ಬಂದ ಒಂದು ಮೆಸೇಜ್ ನೋಡಿ ಒಂದು ಕ್ಷಣ ಕೈಕಾಲು ನಡುಗಲು ಆರಂಭಿಸಿತು. ಯಾಕಂದ್ರೆ, ಅವರ ಖಾತೆಗೆ ಬರೋಬ್ಬರಿ 2,94,00,00,000 ರೂಪಾಯಿ ಜಮೆಯಾಗಿದೆ ಎಂದಿತ್ತು.
ಮೆಸೇಜ್ ಬರುತ್ತಿದ್ದಂತೆಯೇ, ತಕ್ಷಣವೇ ಗಾಬರಿಯಾದ ಪ್ರಮೋದ್, ಓಡೋಡಿ ಹೋಗಿ ಬ್ಯಾಂಕ್ನಲ್ಲಿ ಚೆಕ್ ಮಾಡಿದಾಗ ಅವರ ಖಾತೆಯಲ್ಲಿ ಅಷ್ಟೂ ಹಣ ಇರೋದು ಕನ್ಫರ್ಮ್ ಆಯ್ತು. ಅಷ್ಟಕ್ಕೂ ಅದಕ್ಕಿಂತ ಮುಂಚೆ ಅವರ ಖಾತೆಯಲ್ಲಿದ್ದ ಒಟ್ಟು ಬ್ಯಾಲೆನ್ಸ್ ಎಷ್ಟು ಗೊತ್ತಾ? ಕೇವಲ 113 ರೂಪಾಯಿ ಮಾತ್ರ.
ಸಾಮಾನ್ಯವಾಗಿ ಅಕೌಂಟ್ಗೆ ಅಷ್ಟೊಂದು ಹಣ ಬಂದ್ರೆ ಜನ ಖುಷಿ ಪಡ್ತಾರೆ. ಆದ್ರೆ ಈ ಪ್ಲಂಬರ್ ಪ್ರಮೋದ್ ಕುಮಾರ್ ಮಾತ್ರ ಭಯದಿಂದ ನಡುಗಿ ಹೋಗಿದ್ದಾರೆ. ಯಾಕಂದ್ರೆ ತಾನೊಬ್ಬ ಬಡವ, ತನ್ನ ಖಾತೆಗೆ ಇಷ್ಟೊಂದು ಕೋಟಿ ಹಣ ಬಂದ್ರೆ ಐಟಿ ಡಿಪಾರ್ಟ್ಮೆಂಟ್ನವರು ಹಿಡ್ಕೊಂಡು ಜೈಲಿಗೆ ಹಾಕ್ತಾರೆ ಅನ್ನೋ ಭಯ ಒಂದು ಕಡೆಯಾದ್ರೆ, ಯಾರಾದ್ರೂ ದುಷ್ಟರು ಈ ಹಣಕ್ಕಾಗಿ ತನ್ನನ್ನು ಕೊಲೆ ಮಾಡಬಹುದು ಅನ್ನೋ ಜೀವಭಯ ಅವರಿಗೆ ಶುರುವಾಗಿದೆ.
ಅದಕ್ಕಾಗಿಯೇ ಪ್ರಮೋದ್ ತಡ ಮಾಡದೆ ಸೀದಾ ಸ್ಥಳೀಯ ಪೊಲೀಸ್ ಸ್ಟೇಷನ್ಗೆ ಹೋಗಿ ದೂರು ದಾಖಲಿಸಿದ್ದಾರೆ. ‘ಸ್ವಾಮಿ, ನನಗೂ ಈ ಹಣಕ್ಕೂ ಯಾವುದೇ ಸಂಬಂಧವಿಲ್ಲ. ನನಗೆ ಜೀವಭಯ ಇದೆ, ದಯವಿಟ್ಟು ನನಗೆ ರಕ್ಷಣೆ ಕೊಡಿ ಮತ್ತು ಈ ಹಣ ಎಲ್ಲಿಂದ ಬಂತು ಅಂತ ತನಿಖೆ ಮಾಡಿ’ ಅಂತ ಪೊಲೀಸರ ಕಾಲಿಗೆ ಬಿದ್ದಿದ್ದಾರೆ.
ಹಾಗಾದ್ರೆ ಈ ಹಣ ಬಂದಿದ್ದು ಎಲ್ಲಿಂದ?
ಬ್ಯಾಂಕ್ನವರು ಮತ್ತು ಪೊಲೀಸರು ಇನ್ವೆಸ್ಟಿಗೇಷನ್ ಮಾಡಿದಾಗ ಒಂದು ಶಾಕಿಂಗ್ ಸತ್ಯ ಹೊರಬಿದ್ದಿದೆ. ಸದ್ಯಕ್ಕೆ ಪೊಲೀಸರು ಮತ್ತು ಸೈಬರ್ ಕ್ರೈಮ್ ಬ್ರಾಂಚ್ ಈ ಖಾತೆಯನ್ನ ಸಂಪೂರ್ಣವಾಗಿ ಫ್ರೀಜ್ (Freeze) ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಅಥವಾ ಬ್ಲಾಕ್ ಮನಿ ಹೊಂದಿರುವ ದೊಡ್ಡ ದೊಡ್ಡ ವಂಚಕರು, ಇಂತಹ ಬಡವರ ಅಥವಾ ಇನ್-ಆಕ್ಟಿವ್ ಆಗಿರುವ ಬ್ಯಾಂಕ್ ಖಾತೆಗಳನ್ನ ಟಾರ್ಗೆಟ್ ಮಾಡ್ತಾರೆ.
ಸೈಬರ್ ವಂಚಕರು ಕೋಟ್ಯಾಂತರ ರೂ. ಹಣವನ್ನು ಕಣ್ಣು ತಪ್ಪಿಸಿ, ಇಂತಹ ನಿಷ್ಕ್ರೀಯವಾಗಿರುವ ಖಾತೆಗಳಿಗೆ ವರ್ಗಾವಣೆ ಮಾಡ್ತಾರೆ. ನಂತರದಲ್ಲಿ ಕಮಿಷನ್ ಆಸೆಯನ್ನು ಒಡ್ಡಿ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುವ ದೊಡ್ಡ ಜಾಲ ಭಾರತದಲ್ಲಿ ಸಕ್ರೀಯವಾಗಿದೆ. ಇದೀಗ ಪ್ರಮೋದ್ ಕುಮಾರ್ ಅವರ ಖಾತೆಯೂ ಕೂಡ ಇಂತಹದ್ದೇ ಜಾಲಕ್ಕೆ ಸಿಲುಕಿರುವ ಸಂಶಯ ವ್ಯಕ್ತವಾಗಿದೆ.
ಬಿಹಾರದಲ್ಲಿ ನಡೆದಿರುವ ಈ ಘಟನೆ ಎಲ್ಲರಿಗೂ ದೊಡ್ಡ ಪಾಠ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಘಟನೆಯಿಂದಾಗಿ ನಿಷ್ಕ್ರೀಯವಾಗಿರುವ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಳ್ಳುವುದು ಕೂಡ ಒಳಿತಲ್ಲ ಅನ್ನೋ ಸಂದೇಶ ಹೊರಬಿದ್ದಿದೆ. ಎಂದಾದ್ರೂ ನಿಮಗೆ ಕೂಡ ದೊಡ್ಡ ಮೊತ್ತದ ಹಣ ಜಮೆ ಆದ್ರೆ, ಯಾರದ್ರೂ ನಿಮ್ಮ ಖಾತೆಯನ್ನು ಹಣ ವರ್ಗಾವಣೆಗೆ ಬಳಸಿಕೊಳ್ಳುವುದಕ್ಕೆ ಆಮಿಷ ಒಡ್ಡಿದ್ರೆ ಖಂಡಿತಾ ಒಪ್ಪಬೇಡಿ. ತಕ್ಷಣ ಬ್ಯಾಂಕ್ ಸಿಬ್ಬಂಧಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿ.
bihar plumber 294 crore bank scam analysis



