ಕಾಲಗರ್ಭ ಸೇರಿದ ತಾಂತ್ರಿಕ ‌ಶಿಲ್ಪಿ : ಕೋಟ ‌ರಾಮಚಂದ್ರ ಆಚಾರ್ಯ

  • ಪ್ರಸಾದ್ ಮೊಗೆಬೆಟ್ಟು

ಕೋಟ ‌ರಾಮಚಂದ್ರ ಆಚಾರ್ಯರು ಯಕ್ಷ-‘ಮಯ’. ಅವರ ಬದುಕೂ ಕಲಾಮಯ. ಮಯ‌ನೆಂಬ ಶಿಲ್ಪಿ  ಅದ್ಭುತ ತಾಂತ್ರಿಕ ‌ವಿನ್ಯಾಸದಲ್ಲಿ ಪೌರಾಣಿಕ ಲೋಕ ಪ್ರಸಿದ್ಧ. ಅಂತೆಯೇ ಕೋಟ ರಾಮಚಂದ್ರ ಆಚಾರ್ಯರು ಬೆರಗು ಹುಟ್ಟಿಸಬಲ್ಲ ತಾಂತ್ರಿಕ ಚಾತುರ್ಯದಲ್ಲಿ ಸಿದ್ಧಹಸ್ತರಾಗಿದ್ದ ಅಸಾಧಾರಣ ಪ್ರತಿಭೆ.

ರಂಗಸ್ಥಳದ ‌ಮೇಲೆ ರಂಗಸ್ಥಳ ‌ಕಾಣಿಸುವ‌ ಕಲೆಗಾರಿಕೆ ಸಾಮಾನ್ಯವೇ? ಆಚಾರ್ಯರ ಆಯ-ಪಾಯದಲ್ಲಿ ನಿರ್ಮಾಣಗೊಳ್ಳುವ ‘ಅಟ್ಟಣಿಗೆ‌ ರಂಗಸ್ಥಳ’ ಗಳ‌ ವೈಭವ ಕರಾವಳಿಯಲ್ಲಿ‌ ಕಂಡ ಕಲಾರಸಿಕರ ಕಣ್ಣುಗಳ ಲ್ಲಿ ಯಾವತ್ತೂ ಮರೆಯಾಗದು. ದೊಂದಿ‌ ಬೆಳಕಿನ ಪ್ರಯೋಗಗಳಲ್ಲೂ ಇವರ ಕಲಾತ್ಮಕ ‌ರಂಗಸಜ್ಜಿಕೆಯ ವಿನ್ಯಾಸ  ಪೂರ್ವ ‌ಯಕ್ಷಗಾನದ ಅಪೂರ್ವ ಕಲಾ ವೈಭವಕ್ಕೆ ಸಾಕ್ಷಿಯಾಗುತ್ತಿತ್ತು.

ಪರಂಪರೆಯ ಯಕ್ಷಗಾನದ‌ ಸೊಗಡನ್ನು ಆಸ್ವಾದಿಸುವ ಆಚಾರ್ಯರು ಯಕ್ಷಗಾನದೊಳಗಿನ ಯಾವುದೇ ‌ಸಹ್ಯ ರಂಗ ಪ್ರಯೋಗಗಳಿಗೂ ನಿರ್ದೇಶಕನ ಕಲ್ಪನೆಗೆ ಸ್ಪಂದಿಸಿ, ಅನೂಹ್ಯ ರೀತಿಯಲ್ಲಿ ರಂಗ ತಂತ್ರ ವನ್ನು ಮೆರೆವ ಕಲೆ ಅವರಿಗೆ ದೈವದತ್ತವಾಗಿತ್ತು. ಎಂಥಾ ಕ್ಲಿಷ್ಟಕರ ಸಂಗತಿಗಳೂ ಆಚಾರ್ಯರ ಕಲಾಧೀಶಕ್ತಿ ಯಿಂದ ಸರಳ‌-ಸುಂದರ ರಾಂಗಿಕ- ತಾಂತ್ರಿಕ ಸಾಕಾರಕ್ಕೆ ಸುಲಭ ಸಾಧ್ಯವಾಗುತ್ತಿದ್ದವು.

ತೀರ್ಥಹಳ್ಳಿ ಸಮೀಪ ಒಬ್ಬರು ಗೃಹಸ್ಥರ‌ ಕೋರಿಕೆಯಂತೆ ತನ್ನ ಬುದ್ಧಿಮತ್ತೆಗೆ ಯಂತ್ರ ಬಲವನ್ನು ಕೂಡಿಸಿ ಅಲ್ಲಿರುವ ಇಪ್ಪತ್ತು ವರ್ಷಗಳ ಹತ್ತು ತೆಂಗಿನ ಮರಗಳ ನ್ನು ಆಳಗರ್ಭದಿಂದ ಮೇಲೆತ್ತಿ ಮತ್ತೊಂದು ‌ಸ್ಥಳದಲ್ಲಿ ನೆಟ್ಟ ಕುಶಲಿಗ ರಾಮಚಂದ್ರ ‌ಆಚಾರ್ಯರು. 

ಆ ಮರಗಳೆಲ್ಲವೂ ಜೀವಂತ.
ಬದಲೀ ಸ್ಥಳದಲ್ಲಿ ಮತ್ತೆ ಬೇರು ಬಿಟ್ಟ ಹತ್ತೂ ಮರಗಳು ಒಳ್ಳೆಯ ಫಲ‌ ಕೊಡುತ್ತವೆ ಎಂಬುದನ್ನು ಹಲವಾರು ‌ವರ್ಷಗಳ ಬಳಿಕ ಆ ಮನೆಯವರಿಗೆ ಫೋನಾಯಿಸಿ ತಿಳಿದು ಕೊಂಡ ಕಥೆ ಆಚಾರ್ಯರೇ ನನ್ನಲ್ಲಿ‌‌ ಹೇಳಿದ್ದರು.

ರಾಮಚಂದ್ರ ಆಚಾರ್ಯರು ಮುಗ್ಧ ಮನಸ್ಸಿನ ರುದ್ರಯೋಗಿ !
ಸಾಮಾಜಿಕವಾಗಿ ಅಸಂಖ್ಯ ಶವಗಳನ್ನು ಸಂಸ್ಕಾರ ಶುದ್ಧವಾಗಿ ದಹಿಸಿದ ಪರಮ ಪುಣ್ಯವೂ ಇವರದ್ದು. ಆಚಾರ್ಯರು ಕಾಣದೂರಿಗೆ ನಡೆದಿದ್ದಾರೆ. ನನ್ನ ಕಲಾಪ್ರಯೋಗಗಳಿಗೆ ಅವರು ನೀಡಿದ ‌ಸಹಕಾರ ಅನನ್ಯ. ಆತ್ಮೀಯ ಆಚಾರ್ಯರೆ ನಿಮಗೆ ಅಶ್ರುತರ್ಪಣ‌.

Comments are closed.