ಕೊರೊನಾ ತಾಳಕ್ಕೆ ಹೆಜ್ಜೆ ಹಾಕದ ಮೇಳ

0
  • ಶಶಿಧರ್ ತಲ್ಲೂರಂಗಡಿ

ದಾರಿಯೊಂದನ್ನು ನೆಚ್ಚಿಕೊಂಡು ಸುದೀರ್ಘವಾದ ಪ್ರಯಾಣವನ್ನು ಮಾಡುತ್ತಿರುವಾಗ ಒಮ್ಮೆಲೆ ಕತ್ತಲು ಬಂದರೆ ಮುಂದಿನ ದಾರಿ ಮುಚ್ಚಿ ಕೊಂಡರೆ ದಿಗಿಲಾಗುವುದು ಸಹಜ. ಒಂದೇ ದಾರಿಯಲ್ಲಿ ನಡೆದು ಬಂದವರಿಗೆ ಮುಂದಿನ ದಾರಿ ಕಾಣದಾದಾಗ ಬದುಕೇ ಕತ್ತಲಾಗಿ ಬಿಡುತ್ತದೆ. ಬೇರೆ ಮಾರ್ಗ ತಿಳಿದಿರುವುದಿಲ್ಲ ಅದೇ ಮಾರ್ಗದಲ್ಲಿ ಮುನ್ನಡೆಯಲು ಮಾರ್ಗ ಕಾಣುತ್ತಿಲ್ಲ.

ಬಹುಶಃ ಹೀಗೊಂದು ಆಘಾತ ಎದುರಾಗಬಹುದು ಎಂದು ಕನಸು ಮನಸ್ಸಿನಲ್ಲಿಯೂ ಯಾರೂ ಊಹಿಸಿರಲಿಕ್ಕಿಲ್ಲ. ಕಲೆಯನ್ನೇ ಬದುಕಾಗಿಸಿಕೊಂಡವರಿಗೆ ಕೊರೊನಾ ನೀಡಿದ ಪೆಟ್ಟು ಸಾಮಾನ್ಯದ್ದಲ್ಲ. ಜವರಾಯ ಹೇಗೆ ಯಾವ ಸೂಚನೆಯನ್ನೂ ನೀಡದೆ ಬಂದು ಕರೆದೊಯ್ಯುತ್ತಾನೋ ಹಾಗೆ ಯಾವ ಬಗೆಯ ಸಿದ್ಧತೆಯೂ ಇಲ್ಲದೆ ಎಲ್ಲ ಬಗೆಯ ಪ್ರದರ್ಶನಗಳನ್ನೂ ನಿಲ್ಲಿಸಬೇಕಾದ ಸ್ಥಿತಿ ಕಲಾಪ್ರಪಂಚಕ್ಕೆ ಬರಬಹುದೆಂಬ ಕಲ್ಪನೆಯೂ ಯಾರಲ್ಲಿಯೂ ಇರಲಿಲ್ಲ. ಪ್ರದರ್ಶನಗಳನ್ನೇನೋ ನಿಲ್ಲಿಸಬಹುದು ಆದರೆ ಬದುಕು.

ಪ್ರೇಕ್ಷಕರ ಕೊರತೆ, ಪ್ರಸಂಗ, ಪ್ರದರ್ಶನಗಳ ವಿಮರ್ಶೆ, ತೀರಾ ಅತಿಯಾದ ತೋರ್ಪಡಿಕೆಯ ಕಲಾ ಕಾಳಜಿಗಳಿಂದ ಡೇರೆ ಮೇಳಗಳು ಸೊರಗಿ ಹೋಗಿದ್ದವು. ಕಲಾವಿದರ ಸಂಬಳಕ್ಕೂ ಸಾಕಾಗದಷ್ಟು ಕಲೆಕ್ಷನ್ ಆಗುವ ಹಂತವನ್ನೂ ತಲುಪಿದ್ದಿದೆ. ಮೊದಲೇ ಈ ಬಗೆಯ ಹೊಡೆತಗಳನ್ನು ತಿನ್ನುತ್ತಾ ಸಾಗುತ್ತಿರುವಾಗ ಕೊರೊನಾ ಬಂದಿದ್ದಿದೆಯಲ್ಲ ಅದು ನುಂಗಲಾರದ ತುತ್ತು.

ಪೆಟ್ಟು ತಿಂದು ಅಭ್ಯಾಸ ಇದ್ದವನು ತಾನೇ ಮತ್ತೆ ತಲೆಯೆತ್ತುಲು ಸಾಧ್ಯ. ಬೇರೆ ಕಲಾಮಾಧ್ಯಮಗಳನ್ನು ಗಮನಿಸಿದರೆ ಕೊರೊನಾ ಹೊಡೆತಕ್ಕೊಳಗಾಗಿ ಕಲಾವಿದರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಆದರೆ ಯಕ್ಷಗಾನ ಕಲಾವಿದರ ಗಟ್ಟಿತನಕ್ಕೆ ಮೆಚ್ಚಲೇಬೇಕು. ಲಾಕ್ಡೌನ್ ಆರಂಭವಾದಾಗ ಸಂಘ ಸಂಸ್ಥೆಗಳು ನೆರವಿಗೆ ಬಂದದ್ದಿದೆ. ಕಲಾಪೋಷಕರ ಸಹಾಯವೂ ಇತ್ತು. ಆದರೆ ಎಷ್ಟುದಿನ.

ಹೇಗಿದ್ದರೂ ಆರು ತಿಂಗಳು ಯಕ್ಷಗಾನ ಉಳಿದಾರು ತಿಂಗಳು ಕೃಷಿ ಹಾಗೂ ಇತರೇ ಚಟುವಟಿಕೆಗಳನ್ನು ಮಾಡಿಕೊಂಡು ಬಂದವರು ಅಷ್ಟು ಧೃತಿಗೆಡಲಿಲ್ಲ. ಇನ್ಯಾವುದೋ ಉದ್ದಿಮೆಯೋ ಕೆಲಸವೋ ಆರಂಭಿಸಿ ಅದರಲ್ಲಿ ತೊಡಗಿಸಿಕೊಂಡ ಕಲಾವಿದರೂ ಇದ್ದಾರೆ. ಆನ್ಲೈನ್ ಯಕ್ಷಗಾನ ಎಂಬ ಹೊಸ ಪರಿಪಾಠವೂ ಆರಂಭವಾಯ್ತು ರಂಗಸ್ಥಳದಲ್ಲಿ ಸಿಗುವ ಆನಂದ ಚಿಕ್ಕ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ದೊರೆಯಲಸಾಧ್ಯವಾದರೂ ಕಲೆಗಾಗಿ ಕಲಾಭಿಮಾನಿಗಳು ಈ ಬಗೆಯ ಪ್ರಯತ್ನವನ್ನೂ ಪ್ರೋತ್ಸಾಹಿಸಿದರು. ಆದರೆ ಇವೆಲ್ಲವೂ ಎಷ್ಟು ದಿನ ?

ಕಲೆಯ ದಾರಿಯೊಂದನ್ನೇ ನೆಚ್ಚಿಕೊಂಡವರು ಬೇರೆ ದಾರಿಯಲ್ಲಿ ಹೆಚ್ಚೆಂದರೆ ಎಷ್ಟು ದಿನ ನಡೆಯಬಹುದು, ಸಾಧ್ಯವಿಲ್ಲದ ಮಾತದು. ಇಷ್ಟೆಲ್ಲ ನಡೆಯುವಾಗ ಡೇರೆ ಮೇಳವನ್ನು ನಡೆಸುವ ಓರ್ವ ಯಜಮಾನನ ಸ್ಥಿತಿ ಹೇಗಿರಬಹುದು! ಕಲಾವಿದರ ನೆರವಿಗೆ ನಿಲ್ಲಬೇಕಾದ ಅಗತ್ಯ. ತಿರುಗಾಟ ಹೊರಡುವ ಆರಂಭದ ದಿನಗಳಲ್ಲಿ ಪ್ರಸಂಗ ಜನಮಾನಸದಲ್ಲಿ ನೆಲೆಗೊಳ್ಳುವವರೆಗೆ ಅಥವಾ ಜಾತ್ರೆ, ಹಬ್ಬಗಳ ಪ್ರತಿ ವರ್ಷದ ಆಟಗಳು ನಡೆಯುವಲ್ಲಿವರೆಗೆ ಬಹುತೇಕ ಆಟಗಳನ್ನು ತನ್ನ ಸ್ವಂತ ಹೂಡಿಕೆಯಿಂದ ನಡೆಸುತ್ತಿರುತ್ತಾನೆ.

ಪ್ರೇಕ್ಷಕರ ಕೊರತೆ ಎದುರಿಸುತ್ತಿ ರುವ ಈ ಸಂದರ್ಭದಲ್ಲಿ ಆ ದಿನದ ಖರ್ಚಿನಷ್ಟು ಕಲೆಕ್ಷನ್ ಆದರೂ ಸಾಕೆಂಬಂತಿರುತ್ತದೆ ಮನಸ್ಥಿತಿ. ಬೇರೆಯವರು ವಹಿಸಿಕೊಂಡು ಆಟ ನಡೆಸುವಾಗ ಸ್ವಲ್ಪ ಆದಾಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ಈ ಎಲ್ಲ ಪ್ರಯತ್ನಗಳಿರುತ್ತವೆ. ಆದರೆ ವಹಿಸಿಕೊಂಡ ಆಟಗಳೆಲ್ಲ ಕೊರೊನಾ ದಿಂದಾಗಿ ರದ್ದಾದಾಗ ಯಜಮಾನನ ನೋವು ಕೇಳುವವರ್ಯಾರು.

“ಬಂದದ್ದೆಲ್ಲ ಬರಲಿ ಗೋವಿಂದನ ದಯೆಯೊಂದಿರಲಿ” ಎಂಬ ಮಾತಿನಂತೆ ಅದೇನೆ ಅಡೆತಡೆ ಬಂದರೂ ಬದುಕು ನಿಲ್ಲಬಾರದು. ಓಡುವ ಬದುಕು ನಡೆದರೂ ಅಡ್ಡಿಯಿಲ್ಲ ಆದರೆ ಸ್ಥಗಿತಗೊಳ್ಳ ಬಾರದಷ್ಟೆ. ಬರುವ ವರ್ಷ ಮೇಳ ನಡೆಯುತ್ತದೋ ಇಲ್ಲವೋ ಎಂದು ಮಾತಾಡಿ ಕೊಂಡಿದ್ದಿದೆ. ನಮ್ಮ ನಮ್ಮ ಇಷ್ಟದ ಕಲಾವಿದರ ಪ್ರದರ್ಶನ ಕಾಣಲು ಮನಸ್ಸು ಹಾತೊರೆದಿದ್ದಿದೆ. ಆದಷ್ಟು ಬೇಗ ಪ್ರದರ್ಶನಗಳು ಆರಂಭ ವಾಗುವಂತಾಗಲಿ ಎಂದು ಬೇಡಿಕೊಂಡದ್ದಿದೆ. ಇವೆಲ್ಲಕ್ಕೂ ಉತ್ತರವಾಗಿ ಶ್ರೀ ಪೆರ್ಡೂರು ಮೇಳ ಸುಸಜ್ಜಿತವಾಗಿ ತಿರುಗಾಟಕ್ಕೆ ಸಿದ್ಧವಾಗಿ ನಿಂತಿದೆಯೆಂದರೆ ಇದಕ್ಕಿಂತ ಖುಷಿಯ ವಿಚಾರ ಕಲಾಭಿಮಾನಿಗೆ ಬೇರ್ಯಾವುದಿದೆ ಹೇಳಿ.

ಬಲಗೈಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದೆಂಬಂತೆ ಶ್ರೀ ಪೆರ್ಡೂರು & ಹಾಲಾಡಿ ಮೇಳಗಳ ಯಜಮಾನರಾದ ಕರುಣಾಕರ ಶೆಟ್ಟಿಯವರು ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಮೇಳದ ಕಲಾವಿದರೊಂದಿಗೆ ನಿಂತರು. ಮೇಳದ ಯಜಮಾನನೊಬ್ಬನ ಕರ್ತವ್ಯವನ್ನು ವ್ಯವಸ್ಥಿತವಾಗಿ ಪಾಲಿಸಿದರು.

ಲಾಕ್ಡೌನ್ ನಲ್ಲಿ ಸಿಕ್ಕ ಸಮಯದಲ್ಲಿ ತನ್ನ ಮೇಳ ಯಶಸ್ವಿಯಾಗಿ ಮುನ್ನಡೆಯಲು ಏನೆಲ್ಲ ಮಾಡಬಹುದು ಎಂಬ ನೆಲೆಯಲ್ಲಿ ಯೋಚಿಸಿದರು ಮೇಳದ ಹಿತೈಶಿಗಳೊಂದಿಗೆ ಚರ್ಚಿಸಿದರು. ಕಲಾವಿದರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡರು. ಮುಂದೆ ಯಕ್ಷಗಾನ ತಿರುಗಾಟ ನಡೆಯುತ್ತದೋ ಇಲ್ಲವೋ ಎಂಬಂತೆ ಕಲಾಭಿಮಾನಿ ಚಿಂತಿಸುತ್ತಿರುವಾಗ ಯಜಮಾನನಾಗಿ ಅದೊಂದು ಧನಾತ್ಮಕ ಚಿಂತನೆಯೊಂದಿಗೆ ಮುನ್ನೆಡೆದಿದ್ದರ ಫಲ ಪೆರ್ಡೂರು ಮೇಳ ಹಿಂದೆಂದಿಗಿಂತಲೂ ಸಧೃಢ ಮೇಳವಾಗಿ ಸಜ್ಜಾಗಿದೆ.

ಎಲ್ಲವೂ ಸಿದ್ಧವಾಗಿದೆ. ಬೇಕಿರುವುದು ಕಲಾಭಿಮಾನಿಗಳ ಪ್ರೋತ್ಸಾಹವಷ್ಟೆ. ಎಲ್ಲೆಡೆ ಕೊರೊನಾ ರಣಕೇಕೆ ಹಾಕುತ್ತಿರುವ ಸಮಯದಲ್ಲಿಯೂ ಕೊರೊನಾ ತಾಳಕ್ಕೆ ಹೆಜ್ಜೆ ಹಾಕಲಾರೆ ಎಂದು ಮೇಳವೊಂದು ಎದ್ದು ನಿಲ್ಲುತ್ತದೆಯೆಂದರೆ ಅದಕ್ಕೆ ಕಾರಣ ಮೇಳಕ್ಕೆ ಕಲಾಭಿಮಾನಿಗಳ ಮೇಲಿರುವ ನಂಬಿಕೆ. ಶ್ರೀ ಪೆರ್ಡೂರು ಮೇಳದ ಪ್ರಧಾನ ಭಾಗವತರಾದ ಗಾನಸಾರಥಿ ಜನ್ಸಾಲೆ ರಾಘವೇಂದ್ರ ಆಚಾರ್ಯರ ಜನ್ಮದಿನ ದಂದೇ ಬರುವ ತಿರುಗಾಟದ ಪೋಸ್ಟರ್ ಬಿಡುಗಡೆಗೊಂಡುದು ವಿಶೇಷ.

ಕಲಾಪೋಷಕರು ಎಂದಿಗೂ ತಮ್ಮ ಕೈಬಿಡಲಾರರು ಎಂಬ ಮೇಳದ ಯಜಮಾನರ, ಕಲಾವಿದರ ನಂಬಿಕೆ ಹಾಗೂ ಧೈರ್ಯವನ್ನು ಕಲಾಭಿಮಾನಿ ಗಳಾದ ನಾವುಗಳು ಹುಸಿಗೊಳಿಸುವುದುಂಟೇ. ಶ್ರೀ ಅನಂತಪದ್ಮನಾಭನ ದಯೆಯಿಂದ ಎಲ್ಲವೂ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತಾ ಯಕ್ಷ ಪ್ರದರ್ಶನಗಳನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳೋಣವೇನು ?

Leave A Reply

Your email address will not be published.