ಬಿಜೆಪಿಯಿಂದ ಧರ್ಮಸ್ಥಳ ಚಲೋ : ಸೆ. 1 ರಂದು ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ

BJP Dharmasthala Chalo : ಬೆಂಗಳೂರು : ಧರ್ಮಸ್ಥಳದ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆದಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಎನ್‌ಐಎ ತನಿಖೆಗೆ ಒಪ್ಪಿಸಬೇಕು. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಅನ್ನೋದು ಬಯಲಾಗಬೇಕು.
ಇದೇ ಕಾರಣದಿಂದಲೇ ಬಿಜೆಪಿ ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋ, ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಘೋಷಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ರು. ಧರ್ಮಸ್ಥಳ ಪ್ರಕರಣದ ಹಿಂದಿನ ಷಡ್ಯಂತ್ರದ ಜೊತೆಗೆ ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸದ ಪಿ ಸಿ ಮೋಹನ್, ಶಾಸಕ ಎಸ್ ಆರ್ ವಿಶ್ವನಾಥ್, ಶಾಸಕ ಗೋಪಾಲಯ್ಯ ಸಾಥ್ ಕೊಟ್ಟಿದ್ದರು.
ಸಿಎಂ ಸಿದ್ದರಾಮಯ್ಯಗೆ ದೇವರ ಮೇಲೆ ನಂಬಿಕೆ ಎಷ್ಟಿದೆ ?
ಕಳೆದೊಂದು ತಿಂಗಳಿನಿಂದಲೂ ಧರ್ಮಸ್ಥಳ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿದೆ. ಮಾತ್ರವಲ್ಲ ಧರ್ಮಸ್ಥಳ ವಿಚಾರ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿದೆ. ಸರಕಾರ ಎಸ್ಐಟಿ ರಚನೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ ? ಅಣ್ಣಪ್ಪ ಸ್ವಾಮಿಯ ಮೇಲೆ ಎಷ್ಟು ಶ್ರದ್ದೆ ಇದೆಯೋ ಗೊತ್ತಿಲ್ಲ. ಆದರೆ ಅಣ್ಣಪ್ಪ ಸ್ವಾಮಿಗೆ ಕೋಟಿ ಕೋಟಿ ಭಕ್ತರಿದ್ದಾರೆ.
ಧರ್ಮಸ್ಥಳ ಶ್ರೀಕ್ಷೇತ್ರ ಶ್ರದ್ದಾ ಕೇಂದ್ರ ಅನ್ನೋ ಮಾಹಿತಿ ಸಿಎಂಗೆ ಇದೆ ಅಂತಾ ಭಾವಿಸಿದ್ದೇನೆ. ಇಂತಹ ಪವಿತ್ರ ಕ್ಷೇತ್ರದ ಬಗ್ಗೆ ದಾರಿಯಲ್ಲಿ ಹೋಗೋ ಯಾರೋ ವ್ಯಕ್ತಿ ಬುರುಡೆ ಹಿಡಿದು ಬಂದ, ಆತನ ಹಿನ್ನೆಲೆ, ಆತನ ಹಿಂದೆ ಯಾರಿದ್ದಾರೆ.
ಯಾವ ಸಂಘಟನೆಗಳಿವೆ ಅಂತ ಗುಪ್ತಚರ ವಿಭಾಗದಿಂದ ಮಾಹಿತಿ ಪಡೆಯಬೇಕಿತ್ತು. ಆದರೆ ಸಿಎಂ ಧರ್ಮಸ್ಥಳ ವಿಚಾರದಲ್ಲಿ ಯಾಕೆ ಆತುರಕ್ಕೆ ಬಿದ್ರೋ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ : ದೂರುಕೊಟ್ಟ ಚಿನ್ನಯ್ಯ ಅರೆಸ್ಟ್ ಆಗಿದ್ಯಾಕೆ ?
ಆರಂಭದಲ್ಲಿ ಎಸ್ಐಟಿ ರಚನೆ ಮಾಡಲ್ಲ ಅಂದ್ರು, ನಂತರ ಎಸ್ಐಟಿ ರಚನೆಯ ಘೋಷಣೆ ಮಾಡಿದ್ರು. ಅಷ್ಟೇ ಯಾಕೆ ಹಿಂದಿನ ದಿನ ಎಸ್ಐಟಿ ಮಾಡಲ್ಲ ಅಂದು, ಮಾರನೇ ದಿನ ಘೋಷಣೆ ಮಾಡಿದ್ರು. ರಾತ್ರೋ ರಾತ್ರಿ ಸಿಎಂ ನಿಲುವು ಬದಯಲಾಯಿತು.
ಹಾಗಾದ್ರೆ ಇದರ ಹಿಂದೆ ಯಾರ ಒತ್ತಡ ಇತ್ತು ? ಎಂದು ಪ್ರಶ್ನಿಸಿದ ಅವರು ಧರ್ಮಸ್ಥಳದ ಬಗ್ಗೆ ಪರಾಮರ್ಷೆ ಮಾಡದೆ ರಾತ್ರೋ ರಾತ್ರಿ ತಮ್ಮ ನಿರ್ಧಾರ ಬದಲಾಯಿಸಿಕೊಂಡರು. ಇದೆಲ್ಲವೂ ಬಹಿರಂಗ ಆಗಬೇಕಾಗುತ್ತದೆ ಎಂದಿದ್ದಾರೆ.
ಧರ್ಮಸ್ಥಳ ಪ್ರಕರಣ ಎನ್ಐಎ ತನಿಖೆಗೆ ವಿಜಯೇಂದ್ರ ಆಗ್ರಹ
ಧರ್ಮಸ್ಥಳ ಭಕ್ತರು, ಹಿಂದೂಗಳು, ಹಿಂದೂ ಸಮಾಜದ ಪರವಾಗಿ ಸಿಎಂಗೆ ಮನವಿ ಮಾಡುತ್ತೇವೆ. ಸರಕಾರಕ್ಕೆ ಕಳಂಕ ಅಂಟಿದೆ. ಈ ಕಳಂಕದಿಂದ ಹೊರ ಬರಬೇಕಿದೆ. ದುಷ್ಕೃತ್ಯದ ಹಿಂದೆ ಯಾರಿದ್ದಾರೆ ಅಂತಾ ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕಾಗಿದೆ.
ಕೆಲವು ದುಷ್ಟ ಶಕ್ತಿಗಳು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಧರ್ಮಸ್ಥಳ ನಂತರ ಬೇರೆ ದೇವಸ್ಥಾನಗಳ ಮೇಲೂ ಅಪಪ್ರಚಾರ ಆಗಬಹುದು. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು.
ಧರ್ಮಸ್ಥಳ ಪ್ರಕರಣವನ್ನು ರಾಜ್ಯ ಸರಕಾರ ಸಂಪೂರ್ಣ ತನಿಖೆಗೆ ನಿಸ್ಪಪಕ್ಷಪಾತ ತನಿಖೆಗೆ ಎನ್ಐಎಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಧರ್ಮಸ್ಥಳದ ವಿರುದ್ದ ನಡೆದಿರುವ ಷಡ್ಯಂತ್ರದ ತನಿಖೆಯನ್ನು ಎನ್ಐಗೆ ವಹಿಸಬೇಕು.
ಹೀಗೆ ಮಾಡಿದ್ರೆ ಮಾತ್ರವೇ ಭಕ್ತರಿಗೂ ವಿಶ್ವಾಸ ಮೂಡುತ್ತದೆ. ಇದೇ ಕಾರಣದಿಂದಲೇ ಸೆಪ್ಟೆಂಬರ್ 01 ರಂದು ಸೋಮವಾರ ಧರ್ಮಸ್ಥಳ ಚಲೋಗೆ ಬಿಜೆಪಿ ಕರೆ ಕೊಡ್ತಿದೆ ಎಂದಿದ್ದಾರೆ. ಬಿಜೆಪಿ ಆಯೋಜಿಸಿದ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸ್ತಾರೆ.
ಎಲ್ಲಾ ಕ್ಷೇತ್ರಗಳಿಂದಲೂ ಭಕ್ತರು, ಹಿಂದೂಗಳು ಧರ್ಮಸ್ಥಳಕ್ಕೆ ಬರಲಿದ್ದಾರೆ. ಅಂದು ಬೆಳಗ್ಗೆ ಅವರ ಊರುಗಳಲ್ಲಿ ಪೂಜೆ ಮಾಡಿಕೊಂಡು ಧರ್ಮಸ್ಥಳಕ್ಕೆ ಹೊರಡಬೇಕು. ಮಧ್ಯಾಹ್ನ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ ಎಂದಿದ್ದಾರೆ.
ಧರ್ಮಸ್ಥಳ ಚಲೋಗೆ ಬಿಜೆಪಿ ಸಮಿತಿ
ಧರ್ಮಸ್ಥಳ ಚಲೋ ಆಯೋಜನೆಯ ಬೆನ್ನಲ್ಲೇ ಬಿಜೆಪಿ ಧರ್ಮಸ್ಥಳ ಚಲೋ ಸಮಿತಿಯನ್ನು ರಚಿಸಿದೆ. ಈ ಸಮಿತಿಗೆ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರು ಸಂಚಾಲಕರಾಗಿ ಇರಲಿದ್ದಾರೆ.
ಪಿಸಿ ಮೋಹನ್ ಸಹ ಸಂಚಾಲಕರು, ಸುನೀಲ್ ಕುಮಾರ್, ರವಿಕುಮಾರ್, ಪ್ರೀತಂ ಗೌಡ, ರಾಜೀವ್, ದೊಡ್ಡನಗೌಡ ಪಾಟೀಲ್, ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಭಾರತಿ ಶೆಟ್ಟಿ, ಹರೀಶ್ ಪೂಂಜಾ, ತಮ್ಮೇಶ್ ಗೌಡ, ಭಾಗೀರಥಿ ಮುರುಳ್ಯ ಸಮಿತಿ ಸದಸ್ಯರು ಆಗಿರಲಿದ್ದಾರೆ ಎಂದಿದ್ದಾರೆ.
ಧರ್ಮಸ್ಥಳ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡಲ್ಲ
ಕರ್ನಾಟಕ ಸರಕಾರದ ಹಿಂದೂ ವಿರೋಧಿ ನೀತಿ, ಹಿಂದೂ, ಬಿಜೆಪಿ ಕಾರ್ಯಕರ್ತರ ಹತ್ಯೆ, ಹಲ್ಲೆ ಎಲ್ಲವನ್ನೂ ನಾವು ಗಮನಿಸಿದ್ದೀವಿ. ಧರ್ಮಸ್ಥಳ ವಿಚಾರದಲ್ಲಿ ಇಷ್ಟೆಲ್ಲ ಅಪಪ್ರಚಾರ ನಡೆಸಿದ್ದಾಗಲೂ ಕರ್ನಾಟಕದ ಕಾಂಗ್ರೆಸ್ ಸರಕಾರ ಯಾವ ಕ್ರಮ ತಗೊಳ್ಳಿಲ್ಲ ಎಂದು ಆರೋಪಿಸಿದ್ದಾರೆ.
ಭಗವಂತ ಈ ಕಾಂಗ್ರೆಸ್ ಸರ್ಕಾರಕ್ಕೆ ಸದ್ಬುದ್ಧಿ ಕೊಡಲಿ. ಕರ್ನಾಟಕ ಸರಕಾರ ತಾನಾಗಿಯೇ ಎನ್ಐಎ ತನಿಖೆಗೆ ವಹಿಸುವ ಸದ್ಬುದ್ಧಿ ಬರಲಿ ಎಂದಿದ್ದಾರೆ. ಧರ್ಮಸ್ಥಳ ಚಲೋ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ.
ಈ ಕಾರ್ಯಕ್ರಮದಲ್ಲಿ ಯಾರೂ ಬೇಕಾದರೂ ಭಾಗವಹಿಸಬಹುದಾಗಿದೆ. ಧರ್ಮಸ್ಥಳದ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಅಡಗಿದೆ. ಇದೇ ಕಾರಣದಿಂದಲೇ ಧರ್ಮಸ್ಥಳ ವಿಚಾರವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಸರಕಾರದ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರು ಧರ್ಮಸ್ಥಳದ ವಿರುದ್ದದ ಪಿತೂರಿ ಎನ್‌ಐಎಗೆ ಕೊಡಲಿ ಎನ್ನುವ ಹೇಳಿಕೆಯನ್ನು ನೀಡಿದ್ದರು. ಸತೀಶ್ ಜಾರಕಿಹೊಳಿ ಅವರ ಹೇಳಿಕೆಯ ಬಗ್ಗೆಯೂ ವಿಜಯೇಂದ್ರ ಪ್ರತಿಕ್ರಿಯಿದ್ದಾರೆ.
ಯಾರು ಏನು ಹೇಳಿದ್ದಾರೆ ಅನ್ನೋದಕ್ಕಿಂತ, ಕರ್ನಾಟಕ ಸರಕಾರ ನಂಬಿಕೆ ಉಳಿಸಿಕೊಳ್ಳಲಿ. ನಿಸ್ಪಪಕ್ಷಪಾತ ತನಿಖೆ ಆಗಲು ಎನ್ಐಗೆ ಪ್ರಕರಣ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಡಿಕೆಶಿ ಹೇಳಿಕೆಗೆ ವಿಜಯೇಂದ್ರ ಗರಂ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ದ ವಿಜಯೇಂದ್ರ ಗರಂ ಆಗಿದ್ದಾರೆ. ನಾವು ಬಾಯಿ ಮುಚ್ಚಿಕೊಂಡಿರಲು ಕಾಂಗ್ರೆಸ್‌ನವರಲ್ಲ. ಈ ಸರಕಾರವನ್ನು ಬಗ್ಗಿಸುವ ಶಕ್ತಿ ಹಿಂದೂಗಳಿಗೆ ಇದೆ. ಡಿಕೆಶಿ ಅವರ ದೈವಭಕ್ತಿ ಬಗ್ಗೆ ನಾನು ಪ್ರಶ್ನೆ ಮಾಡಲ್ಲ.
ಡಿಕೆಶಿ ಅವರಿಗೂ ಸಹ ಧರ್ಮಸ್ಥಳ ಬಗ್ಗೆ ಶ್ರದ್ಧೆ ಭಕ್ತಿ ಇದೆ. ಆದ್ರೆ ಷಢ್ಯಂತ್ರ ಬಗ್ಗೆ ಡಿಕೆಶಿ ಕೈಕಟ್ಟಿ ಕೂರುವುದು ಸರಿಯಲ್ಲ. ಸಿಎಂ ಮೇಲೆ ಒತ್ತಡ ತಂದು ಡಿಕೆಶಿ ಅವರು ಪ್ರಕರಣ ಎನ್ಐಎಗೆ ವಹಿಸಲಿ ಎಂದಿದ್ದಾರೆ.
ಇದನ್ನೂ ಓದಿ : ಗಣೇಶ ಚತುರ್ಥಿ : ಡಿಜೆ ನಿಷೇಧ, ಮಣ್ಣಿನ ಗಣಪನಿಗಷ್ಟೇ ಅವಕಾಶ
ಅಷ್ಟೇ ಅಲ್ಲಾ ಡಿಕೆ ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ ಅಂದ್ರೆ ಅವರಿಗೆ ಜ್ಞಾನೋದಯ ಆಗಿದೆ ಅಂತರ್ಥ. ಕೆಲವು ಕಾಂಗ್ರೆಸ್ ನಾಯಕರು ಆರೆಸೆಸ್ ಮೇಲೆ ವಿಷ ಕಕ್ಕುತ್ತಿದ್ದಾರೆ.
ಆರ್‌ಎಸ್‌ಎಸ್ ವಿಷಕಂಠ ಸಂಸ್ಥೆ, ವಿಷ ನುಂಗಿಕೊಂಡೇ ಸಮಾಜ ಸೇವೆ ಮುಂದುವರೆಸುತ್ತೆ ಎಸ್ಐಟಿಗೆ ಆರಂಭದಲ್ಲಿ ಬಿಜೆಪಿ ವಿರೋಧಿಸಲಿಲ್ಲವೇಕೆಂಬ ಕಾಂಗ್ರೆಸ್ ನವ್ರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಧರ್ಮಸ್ಥಳ ವಿರುದ್ಧ ಆರೋಪ ಬಂದಾಗ ಕೋಟ್ಯಂತರ ಭಕ್ತರಲ್ಲಿ ಆತಂಕ ಆದ ಹಾಗೆ ನಮಗೂ ಆತಂಕ ಆಗಿತ್ತು. ನಿಸ್ಪಕ್ಷಪಾತ ತನಿಖೆ ಆಗಲಿ ನೋಡೋಣ ಅಂತ ನಾವು ಸುಮ್ಮನಿದ್ವಿ. ಆದ್ರೆ ಈ ತನಿಖೆ, ಅಪಪ್ರಚಾರಕ್ಕೆ ಕಡಿವಾಣ ಹಾಕಲಿಲ್ಲ.
ಡಿಕೆಶಿ ಅವರೇ ಹದಿನೈದು ದಿನ ಆದ ಮೇಲೆ ಷಢ್ಯಂತ್ರ ಇದೆ ಅಂದ್ರು. ರಾಜ್ಯದ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ಎಡವಿದೆ. ಆ ಕಾರಣಕ್ಕಾಗಿಯೇ ಕೆಲವು ಕಾಂಗ್ರೆಸ್ ನಾಯಕರು ಕೇಸರಿ ಶಲ್ಯ ಹಾಕಿಕೊಂಡು ಧರ್ಮಸ್ಥಳಕ್ಕೆ ಹೊರಟಿದ್ದಾರೆ ಎಂದರು.
ಪ್ರಾಯಶ್ಚಿತ್ತಕ್ಕಾಗಿ ಧರ್ಮಸ್ಥಳಕ್ಕೆ ಕಾಂಗ್ರೆಸ್ ಭೇಟಿ…!
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ಇಮೇಜ್ ಬಗ್ಗೆ ಯೋಚಿಸಿದ್ರು. ಕಾಲ್ತುಳಿತ ಪ್ರಕರಣದಲ್ಲಿ ಇಮೇಜ್ ಸರಿಪಡಿಸಿಕೊಳ್ಳೋ ಜನಪ್ರಿಯತೆ ಹೆಚ್ಚಿಸಿಕೊಳ್ಳೋ ದುರುದ್ಧೇಶ ಇತ್ತು. ಸಿಎಂ, ಡಿಸಿಎಂ ಅವರ ಪುಕ್ಕಟ್ಟೆ ಪ್ರಚಾರದ ಹಪಾಹಪಿಯಿಂದ ಕಾಲ್ತುಳಿತ ಆಯ್ತು.
ಆರ್‌ಸಿಬಿ ಸಂಭ್ರಮಾಚರಣೆಗೆ ಆತುರದ ನಿರ್ಧಾರ ಮಾಡಿದಂತೆಯೇ ಧರ್ಮಸ್ಥಳ ವಿಚಾರದಲ್ಲೂ ಸಿಎಂ ಆತುರ ತೋರಿದ್ರು ಎಂದಿದ್ದಾರೆ. ಅನಾಮಿಕನ ಸುಳ್ಳು ಆರೋಪ ನಂಬಿ ಎಸ್ಐಟಿ ಮಾಡಿದರು.
ಕೋಟಿ ಕೋಟಿ ಭಕ್ತರ ಭಾವನೆಗಳಿಗೆ ಇದರಿಂದ ಘಾಸಿ ಆಗಿರೋದು ಸತ್ಯ. ಅಪಪ್ರಚಾರ, ಯಾವುದು ನಂಬಬೇಕು ಯಾವುದು ನಂಬಬಾರದು ಅನ್ನುವ ನೋವು ಭಕ್ತರಿಗೆ ಕಾಡ್ತಿದೆ. ಭಕ್ತರಲ್ಲಿ ಸರ್ಕಾರದ ಬಗ್ಗೆ ತಪ್ಪು ಕಲ್ಪನೆ ಮೂಡಿದೆ.
ಯಾವುದೇ ಪೂರ್ವಾಪರ ವಿಚಾರಿಸದೇ ಎಸ್ಐಟಿ ಗೆ ಪ್ರಕರಣ ಕೊಟ್ಟ ಬಗ್ಗೆ ಜನ, ಭಕ್ತರು ಮಾತಾಡ್ತಿದ್ದಾರೆ. ಇದೊಂದು ಗಂಭೀರವಾಗಿರುವ ವಿಚಾರವಾಗಿದೆ ಎಂದು ಬಿವೈ ವಿಜಯೇಂದ್ರ ಅವರು ಹೇಳಿದ್ದಾರೆ.
BJP Dharmasthala Chalo Dharma Jagrathi Samavesha in Dharmasthala on September 1



