ಜಾತಿ ಸಮೀಕ್ಷೆ ಬೇಸಿಗೆಯಲ್ಲಿ ನಡೆಸಿ, ಸೋನಿಯಾ ಓಲೈಕೆಗೆ ಸಿದ್ದು ಸಮೀಕ್ಷೆ : ಸುನಿಲ್ ಕುಮಾರ್
Karnataka Caste Survey : ಬೆಂಗಳೂರು : ಕರ್ನಾಟಕ ಸರಕಾರ ತರಾತುರಿಯಲ್ಲಿ ಜಾತಿ ಸಮೀಕ್ಷೆ ನಡೆಸುವ ಬದಲು ಬೇಸಿಗೆಯಲ್ಲಿ ನಡೆಸಲಿ. ಸಿದ್ದರಾಮಯ್ಯ ಸೋನಿಯಾ ಗಾಂಧಿ ಓಲೈಕೆಗಾಗಿ ಜಾತಿಗಣತಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ (V Sunil Kumar) ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿರುವ ಜಾತಿ, ಉಪಜಾತಿಗಳ ಪಟ್ಟಿಯಲ್ಲಿ ಹಿಂದೂ ಜಾತಿಗಳ ಜೊತೆಗೆ ಕ್ರಿಶ್ಚಿಯನ್ ಹೆಸರು ಸೇರ್ಪಡೆ ಮಾಡಿದ್ದಾರೆ.
ಹಿಂದೂ ಜಾತಿಯ ಜೊತೆಗೆ ಕ್ರಿಶ್ಚಿಯನ್ ಹೆಸರು ಸೇರ್ಪಡೆ ಮಾಡುವ ಮೂಲಕ ಮತಾಂತರಕ್ಕೆ ಅವಕಾಶ ನೀಡಿ, ಸಿದ್ದರಾಮಯ್ಯ ಪೋಪ್ ಆಗೋದಕ್ಕೆ ಹೊರಟ್ಟಿದ್ದಾರೆ ಎಂದಿದ್ದಾರೆ.
ಕ್ರಿಶ್ಚಿಯನ್ ಹೆಸರು ಸೇರ್ಪಡೆಯ ಕುರಿತು ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಕೂಡ ಕರ್ನಾಟಕದ ಕಾಂಗ್ರೆಸ್ ಸರಕಾರ ಮೊಂಡುವಾದ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಜಾತಿಗಣತಿ : ಮತಾಂತರಕ್ಕೆ ಸಿಎಂ ಅವಕಾಶ
ಜಾತಿ ಸಮೀಕ್ಷೆಯ ಹೆಸರಲ್ಲಿ ಜಾತಿಪಟ್ಟಿಯಲ್ಲಿಯೇ ಇಲ್ಲದ ಕ್ರಿಶ್ಚಿಯನ್ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಮತಾಂತರಕ್ಕೆ ಅವಕಾಶ ನೀಡಲಾಗುತ್ತಿದೆ. ಅಹಿಂದ ಹೆಸರು ಹೇಳುವ ಸಿಎಂ ಸಿದ್ದರಾಮಯ್ಯ ಅವರೇ ಖುದ್ದು ಮತಾಂತರಕ್ಕೆ ಅವಕಾಶ ಕೊಡ್ತಾ ಇರೋದು ದುರದೃಷ್ಟಕರ ಎಂದಿದ್ದಾರೆ.
ಬೇಸಿಗೆಯಲ್ಲಿ ಜಾತಿ ಸಮೀಕ್ಷೆ ನಡೆಸಿ
ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ತರಾತುರಿಯಲ್ಲಿ ಜಾತಿ ಸಮೀಕ್ಷೆ ನಡೆಸುವುದು ಬೇಡ. ಬೇಸಿಗೆಯಲ್ಲಿ ಜಾತಿ ಸಮೀಕ್ಷೆಯನ್ನು ನಡೆಸುವುದು ಸೂಕ್ತ ಎಂದಿದ್ದಾರೆ.
ಜಾತಿ ಸಮೀಕ್ಷೆ ನಡೆಸುವ ಮೊದಲು ಸರ್ವಪಕ್ಷಗಳ ಸಭೆಯನ್ನು ಕರೆದು ಎಲ್ಲರ ಅಭಿಪ್ರಾಯವನ್ನು ಪಡೆದು, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುವುದು ರಾಜ್ಯದ ಹಿತದೃಷ್ಟಿಯಿಂದ ಉತ್ತಮ ಎಂದಿದ್ದಾರೆ.
ಕರ್ನಾಟಕದಲ್ಲಿ ಜಾತಿ ಸಮೀಕ್ಷೆಯ ಔಚಿತ್ಯವೇನು ?
ಕೇಂದ್ರ ಸರಕಾರ ಈಗಾಗಲೇ ಜಾತಿಗಣತಿ ನಡೆಸುವ ಕುರಿತು ಈಗಾಗಲೇ ಘೋಷಣೆ ಮಾಡಿದೆ. ಆದರೂ ಕೂಡ ಕರ್ನಾಟಕ ಸರಕಾರ ರಾಜ್ಯದಲ್ಲಿ ಜಾತಿಗಣತಿ ನಡೆಸುವ ಔಚಿತ್ಯವೇನು ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಅಧಿಕಾರ ವಿಸ್ತರಣೆಗಾಗಿಯೇ ಈ ಸಮೀಕ್ಷೆಯನ್ನು ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರೇ ನೀಡುತ್ತಿರುವ ಮಾಹಿತಿಯ ಪ್ರಕಾರ ನವೆಂಬರ್ ತಿಂಗಳಿನಲ್ಲಿ ಸಿದ್ದರಾಮಯ್ಯ ಅವರ ಅಧಿಕಾರ ಹೋಗುತ್ತೆ.
ಹೀಗಾಗಿ ಅಧಿಕಾರ ಉಳಿಸಿಕೊಳ್ಳುವ ಕಾರಣಕ್ಕೆ ಸಿದ್ದರಾಮಯ್ಯ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಜಾತಿಸಮೀಕ್ಷೆಯ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ : ಜಾತಿಗಣತಿ ರದ್ದಾಗುತ್ತಾ ? ಹೈಕೋರ್ಟ್‌ಗೆ ಸಲ್ಲಿಕೆ ಆಯ್ತು ಪಿಐಎಲ್
ಕರ್ನಾಟಕ ಸರಕಾರ ಹಾಗೂ ಕರ್ನಾಟಕ ಹಿಂದುಳಿದ ಆಯೋಗ ನಡೆಸುತ್ತಿರುವ ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿದ್ದು, ಈ ಕಾರ್ಯವನ್ನು ನಾಗರೀಕ ಸಮಾಜ ಒಪ್ಪುವುದಕ್ಕೆ ಸಾಧ್ಯವಿಲ್ಲ.
ಕೆ. ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಲಾಗಿದೆ. ಆದರೆ ಹೈಕಮಾಂಡ್ 10 ವರ್ಷ ಹಳೆಯ ವರದಿ ಅನ್ನೋ ಕಾರಣಕ್ಕೆ ಆ ವರದಿಯನ್ನು ಸರಕಾರ ಕಸದ ಬುಟ್ಟಿಗೆ ಹಾಕಿದೆ.
ಈ ಹಿಂದೆ ಕಾಂತರಾಜು ಆಯೋಗದ ವರದಿಗಾಗಿ ಸರಕಾರ 160 ಕೋಟಿ ರೂಪಾಯಿಯನ್ನು ವಿನಿಯೋಗ ಮಾಡಿತ್ತು. ಇದು ನೀರಲ್ಲ ಹೋಮ ಮಾಡಿದಂತೆ ಆಗಿತ್ತು.
ಇದೀಗ ಮತ್ತೆ ಜಾತಿ ಸಮೀಕ್ಷೆಗಾಗಿ ಕರ್ನಾಟಕ ಸರಕಾರ 420 ಕೋಟಿ ರೂಪಾಯಿ ಹಣವನ್ನು ವಿನಿಯೋಗ ಮಾಡುತ್ತಿದೆ. ನಾಳೆ ಸಮೀಕ್ಷೆ ಸರಿಯಾಗಿಲ್ಲ ಎಂದು ಹಣದ ದುರುಪಯೋಗ ನಡೆಸೋದು ಸರಿಯಲ್ಲ ಎಂದು ಸರಕಾರಕ್ಕೆ ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಮಾಜಿ ಸಿಎಂ ಡಿವಿ ಸದಾನಂದಗೌಡರಿಗೆ ಹ್ಯಾಕರ್ಸ್ ಕಾಟ: 3 ಲಕ್ಷ ಕನ್ನ, ಸೈಬರ್ ಕ್ರೈಂಗೆ ದೂರು
ಸಿಎಂ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಜಾತಿ ಸಮೀಕ್ಷೆಗೆ ಕ್ಯಾಬಿನೆಟ್ ಸಭೆಯಲ್ಲಿಯೇ ವಿರೋಧ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ತಾಳಮೇಳ ಇಲ್ಲ, ರಾಜಕೀಯ ಲಾಭಕ್ಕಿಂತ ಸರಕಾರಕ್ಕೆ ದೂರದೃಷ್ಟಿ ಇರಬೇಕು ಎಂದಿದ್ದಾರೆ.
Karnataka Caste Survey MLA Sunil Kumar Reaction



