ಗೂಗಲ್ ಡೂಡಲ್‌ನಲ್ಲಿ ದಕ್ಷಿಣ ಭಾರತದ ಜನಪ್ರಿಯ ತಿಂಡಿ ‘ಇಡ್ಲಿ’ ಸಂಭ್ರಮ
Idli Google Doodle: ಇವತ್ತು ಬೆಳಿಗ್ಗೆ ಗೂಗಲ್ ತೆರೆದವರಿಗೆಲ್ಲ ಒಂದು ಆಶ್ಚರ್ಯಕರ ಸಂಗತಿ ಎದುರಾಗಿದೆ. ಅದೇನೆಂದರೆ ಇಂಟರ್‌ನೆಟ್ ದೈತ್ಯ ಗೂಗಲ್ ತನ್ನ ಮುಖಪುಟದಲ್ಲಿ ದಕ್ಷಿಣ ಭಾರತದ ಜನಪ್ರಿಯ ತಿಂಡಿ ‘ಇಡ್ಲಿಯ’ ಫೋಟೋ ಹಾಕಿ ಸಂಭ್ರಮಿಸಿದೆ.
ಸರ್ಚ್ ಇಂಜಿನ್ ದಕ್ಷಿಣ ಭಾರತದ ಸಾಂಸ್ಕೃತಿಕ ಆಹಾರ ಪದ್ಧತಿಯ ಮಹತ್ವವನ್ನು ಎತ್ತಿ ತೋರಿಸಿದೆ. ಇಡ್ಲಿ ದಕ್ಷಿಣ ಭಾರತದ ಜನಪ್ರಿಯ ಖಾದ್ಯವಾಗಿದ್ದು, ಉದ್ದಿನಬೇಳೆ ಮತ್ತು ಅಕ್ಕಿಯನ್ನು ತರಿತರಿಯಾಗಿ ರುಬ್ಬಿ ಹದವಾಗಿ ಹಬೆಯಲ್ಲಿ ಬೇಯಿಸಿ ತಯಾರಿಸುವ ಮೃದುವಾದ ಅಷ್ಟೇ ರುಚಿಕರವಾದ ತಿಂಡಿ.
ಸಾಮಾನ್ಯವಾಗಿ ಇದನ್ನು ಸಾಂಬಾರ ಮತ್ತು ತೆಂಗಿನಕಾಯಿಯ ಚಟ್ನಿಯೊಂದಿಗೆ ಸವಿಯಲಾಗುತ್ತದೆ. ಇದು ಬೆಳಗ್ಗಿನ ಉಪಹಾರದಲ್ಲಿ, ಮಧ್ಯಾಹ್ನದ ಊಟದಲ್ಲಿ ಹಾಗೂ ಸಂಜೆಯ ಸ್ನಾಕ್ಸ್‌ನಲ್ಲೂ ಸವಿಯಬಹುದಾದ ವಿಶೇಷ ಪಾಕವಿಧಾನವಾಗಿದೆ.
ಇಡ್ಲಿಯ ಇತಿಹಾಸ
ಇಡ್ಲಿಯ ಇತಿಹಾಸವು ದಕ್ಷಿಣ ಭಾರತದಲ್ಲಿ ಬಹಳ ಆಳವಾಗಿ ಬೇರೂರಿದೆ. ಇದನ್ನು ಪ್ರಾಚೀನ ಖಾದ್ಯವೆಂದು ಪರಿಗಣಿಸಲಾಗಿದೆ. ಇತಿಹಾಸಕಾರರು ಮತ್ತು ಆಹಾರ ತಜ್ಞರ ಪ್ರಕಾರ, ಇಡ್ಲಿಯು ಕ್ರಿ.ಶ. 800-1200 ರ ಸುಮಾರಿಗೆ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡಿತು.
ಕೆಲವು ಮೂಲಗಳು ಪ್ರಾಚೀನ ತಮಿಳು ಸಾಹಿತ್ಯ ಮತ್ತು ಪಠ್ಯಗಳಲ್ಲಿ ಇಡ್ಲಿಯ ಉಲ್ಲೇಖವಿದೆ ಎಂದು ಹೇಳುತ್ತವೆ. ಕೆಲವು ವಿದ್ವಾಂಸರು ಇಡ್ಲಿಯ ಕಲ್ಪನೆಯು ಇಂಡೋನೇಷ್ಯಾದಿಂದ ಭಾರತಕ್ಕೆ ಬಂದಿರಬಹುದು ಎಂದು ಹೇಳುತ್ತಾರೆ.
ಅಲ್ಲಿ ಅಕ್ಕಿ ಆಧಾರಿತ ಹಬೆಯಲ್ಲಿ ಬೇಯಿಸಿದ ಭಕ್ಷ್ಯಗಳು ಜನಪ್ರಿಯವಾಗಿರುವುದರಿಂದ ಹಾಗೆ ಹೇಳಿರಬಹುದು. ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಭಾಗಗಳಲ್ಲಿ ಇದು ಸ್ಥಳೀಯ ಆಹಾರವಾಗಿ ವಿಕಾಸಗೊಂಡಿತು.
ಕ್ರಿ.ಶ. 920 ರ ತಮಿಳು ಪುಸ್ತಕವೊಂದು “ಇಡ್ಡಲಿಗೆ” ಎಂಬ ಖಾದ್ಯವನ್ನು ಉಲ್ಲೇಖಿಸುತ್ತದೆ. ಇದು ಇಡ್ಲಿಯ ಆರಂಭಿಕ ರೂಪ ಎಂದು ನಂಬಲಾಗಿದೆ. 12 ನೇ ಶತಮಾನದ ಕನ್ನಡ ಪಠ್ಯ “ಮಾನಸೋಲ್ಲಾಸ” ಕೂಡ ಇಡ್ಲಿಯಂತಹ ಖಾದ್ಯವನ್ನು ವಿವರಿಸುತ್ತದೆ.
ಕಾಲಾನಂತರದಲ್ಲಿ, ಇಡ್ಲಿ ತಯಾರಿಸುವ ಬಗೆ ಸುಧಾರಿಸಿದವು. ಕ್ರಮೇಣ ಇಡ್ಲಿ ದಕ್ಷಿಣ ಭಾರತದಲ್ಲಿ ಪ್ರಮುಖ ಉಪಹಾರವಾಯಿತು. 19 ಮತ್ತು 20 ನೇ ಶತಮಾನಗಳಲ್ಲಿ, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಇದನ್ನು ಭಾರತ ಜೊತೆಗೆ ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿದವು.
ಇಂದು, ಇಡ್ಲಿ ಜಾಗತಿಕವಾಗಿ ಭಾರತೀಯ ಪಾಕಪದ್ಧತಿಯನ್ನು ಗುರುತಿಸುತ್ತದೆ.
ಇದನ್ನೂ ಓದಿ: ಒಂದೇ ರೀತಿಯ ಪುಲಾವ್ ತಿಂದು ಬೇಜಾರಾಗಿದ್ರೆ, ಡಿಫರೆಂಟ್ ಆಗಿ ಟೊಮೊಟೊ ಪುಲಾವ್ ತಯಾರಿಸಿ
ಇಡ್ಲಿಯಲ್ಲಿದೆ ವಿವಿಧ ಬಗೆ
ಪ್ರಾಚೀನ ಕಾಲದಲ್ಲಿ ಇಡ್ಲಿಯನ್ನು ಒಂದೇ ರೀತಿಯಲ್ಲಿ ತಯಾರಿಸುತ್ತಿರಬಹುದು. ಆದರೆ ಇಂದು ಹಾಗಲ್ಲ, ಆಧುನಿಕ ಜಗತ್ತಿನಲ್ಲಿ ಆಹಾರದ ಸಂಸ್ಕೃತಿ ವಿಕಾಸಗೊಳ್ಳುತ್ತಿದ್ದಂತೆ, ಕ್ರಮೇಣ ಇಡ್ಲಿಯಲ್ಲಿ ಹಲವು ಬಗೆಗಳು ಹುಟ್ಟಿಕೊಂಡವು.
ಅಕ್ಕಿ ಇಡ್ಲಿ, ರವಾ ಇಡ್ಲಿ, ಬಟನ್ ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ ಹೀಗೆ ಅದಕ್ಕೆ ಬಳಸುವ ಸಾಮಗ್ರಿಗಳು ಮತ್ತು ತಯಾರಿಕಾ ವಿಧಾನದ ಮೇಲೆ ವಿಭಿನ್ನ ಪ್ರಕಾರ ಹಾಗೂ ಹೆಸರುಗಳು ಹುಟ್ಟಿಕೊಂಡವು.
ಇಷ್ಟೇ ಅಲ್ಲದೇ, ತುಮಕೂರು ತಟ್ಟೆ ಇಡ್ಲಿ, ಕಾಂಚಿಪುರಮ್ ಇಡ್ಲಿ ಹೀಗೆ ಊರುಗಳ ಹೆಸರುಗಳೊಂದಿಗೂ ಇಡ್ಲಿ ಜನಪ್ರಿಯವಾಗಿದೆ.
ಸುಲಭವಾಗಿ ಇಡ್ಲಿ ತಯಾರಿಸುವುದು ಹೇಗೆ?
ಸುಮಾರು 4 ಗಂಟೆಯ ಕಾಲ ಒಂದು ಕಪ್ ಉದ್ದಿನಬೇಳೆ ಹಾಗೂ 2 ಕಪ್ ಇಡ್ಲಿ ರವಾವನ್ನು ಪ್ರತ್ಯೇಕವಾಗಿ ನೀರಿನಲ್ಲಿ ನೆನೆಸಿ. ನಂತರ ಅವೆರಡರ ನೀರನ್ನೂ ಬಸಿದುಕೊಳ್ಳಿ. ಒಂದು ಮಿಕ್ಸರ್ ಜಾರ್‌ಗೆ ಉದ್ದಿನ ಬೇಳೆಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ಇಡ್ಲಿ ರವಾಕ್ಕೆ ರುಬ್ಬಿಟ್ಟುಕೊಂಡ ಮಿಶ್ರಣ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ರಾತ್ರಿಯಿಡೀ ಹಾಗೆ ಬಿಡಿ. ಮರುದಿನ ಬೆಳಿಗ್ಗೆ ಇಡ್ಲಿ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಆ ಹಿಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ.
ಹಬೆಯಲ್ಲಿ 10–15 ನಿಮಿಷಗಳ ಕಾಲ ಬೇಯಿಸಿ. ರುಚಿಯಾದ, ಮೃದುವಾದ ಇಡ್ಲಿಯನ್ನು ಸಾಂಬಾರ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ.
ಇದನ್ನೂ ಓದಿ: ಬೆಳ್ಳುಳ್ಳಿ ಕೆಂಪು ಖಾರದ ಚಟ್ಟಿ: ಪರೋಟಾ, ರೋಟಿಗೆ ಇದು ಬೆಸ್ಟ್ ಕಾಂಬಿನೇಷನ್
(Google Doodle celebrates south Indian famous dish Idli know the history and simple idli recipe)



