ನರಹಂತಕ ಆನೆ ಸೆರೆಗೆ ಸರ್ಕಾರದ ಆದೇಶ : ಕಾರ್ಯಾಚರಣೆಗೆ ಇಳಿಯಲಿದೆ ‘ಏಕಲವ್ಯ’ ಪಡೆ
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ವನ್ಯ ಜೀವಿ ವಲಯದಲ್ಲಿ ಶುಕ್ರವಾರದಂದು ಒಂಟಿ ಸಲಗದ ದಾಳಿಗೆ ಇಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ನರಹಂತಕ ಒಂಟಿ ಸಲಗ (Sringeri elephant) ವನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುವಂತೆ ಆದೇಶ ನೀಡಿದೆ.
ನಿನ್ನೆ ಮುಂಜಾನೆ ಸುಮಾರಿಗೆ ತುಂಗಭದ್ರಾ ಮೀಸಲು ಅರಣ್ಯ ವಲಯದ ಮುಡುಬಾ ಎಂಬಲ್ಲಿ 43 ವರ್ಷದ ಉಮೇಶ್ ಹಾಗೂ 42 ವರ್ಷದ ಹರೀಶ್ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಕಳೆದ 10ರಿಂದ 15 ವರ್ಷಗಳಿಂದ ಆಗುಂಬೆ, ಕೆರೆಕಟ್ಟೆ, ಕುದುರೆಮುಖ ಪ್ರದೇಶಗಳಲ್ಲಿ ಓಡಾಡಿಕೊಂಡು ಹಲವಾರು ಕಡೆಗಳಲ್ಲಿ ದಾಳಿ ಮಾಡಿ ಕೃಷಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿಕೊಂಡಿತ್ತು.
ಇದೀಗ ಪ್ರಾಣಹಾನಿಯನ್ನೂ ಮಾಡಿರುವ ಕಾಡಾನೆಯನ್ನು ಸೆರೆಹಿಡಿಯಲು ಅನುಮತಿ ಹಾಗೂ ಸಹಕಾರ ಕೋರಿ ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರವು ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾರ್ಕಳ ವನ್ಯಜೀವಿ ಇವರ ಕೋರಿಕೆಯಂತೆ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಮಾನವ-ಪ್ರಾಣಹಾನಿಗೆ ಕಾರಣವಾದ ಕಾಡಾನೆಯನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆ ಹಿಡಿದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡ ಹರವ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಆದೇಶಿಸಿದೆ.
ಇದನ್ನೂ ಓದಿ : ಪತ್ನಿ ಸಾವು, ಆಸ್ಪತ್ರೆಯಲ್ಲಿ ಶವ ಮಗುವನ್ನು ಬಿಟ್ಟು ಪತಿ ಎಸ್ಕೇಪ್
ಅಲ್ಲದೇ ಈ ಕಾಡಾನೆಯ ಸೆರೆಗೆ ಏಕಲವ್ಯ, ಪ್ರಶಾಂತ, ಧನಂಜಯ, ಹರ್ಷ ಆನೆಯನ್ನು ದೊಡ್ಡ ಹರವೆಯಿಂದ ಹಾಗೂ ಅಜಯ ಆನೆಯನ್ನು ದುಬಾರೆ ಆನೆ ಶಿಬಿರದಿಂದ ಮತ್ತು ಹಾರಂಗಿ ಆನೆ ಶಿಬಿರದಿಂದ ಇತರೆ ಆನೆಗಳನ್ನು ಕಾಯಾರ್ಚರಣೆ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಮುತುವರ್ಜಿ ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ನಿನ್ನೆ ಕಾಡಿನಿಂದ ಸೊಪ್ಪು ತರಲು ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಅಮಾಯಕರು ಕಾಡಾನೆ ದಾಳಿಗೆ ಬಲಿಯಾಗಿದ್ದು ಈ ಪ್ರಕರಣವು ಸ್ಥಳೀಯರ ನಿದ್ದೆಗೆಡಿಸಿತ್ತು. ಹೀಗಾಗಿ ಕಾಡನೆಯನ್ನು ಹಿಡಿಯಲೇಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಇದೀಗ ಸರ್ಕಾರ ಕೂಡ ಕಾಡಾನೆ ಸೆರೆಗೆ ಆದೇಶ ಹೊರಡಿಸಿದ್ದು ಈ ಭಾಗದ ಜನತೆ ಕೊಂಚ ನಿರಾಳವಾಗಿದ್ದಾರೆ.
ಇದನ್ನೂ ಓದಿ : ಸರಕಾರಿ ಕಚೇರಿಗಳಲ್ಲಿ ಇನ್ಮುಂದೆ ನಂದಿನಿ ಉತ್ಪನ್ನ ಕಡ್ಡಾಯ : ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ
Government orders capture of Sringeri elephant : ‘Ekalavya’ force to launch operation



