ಶಿವಮೊಗ್ಗ : ಆಸ್ಪತ್ರೆಯಲ್ಲಿ ಪತ್ನಿ ಸಾವು, ಹೆಂಡತಿ ಶವ, ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪತಿ ಕುಟುಂಬಸ್ಥರು ಪರಾರಿ

ಶಿವಮೊಗ್ಗ ( Shivamogga) : ಕೌಂಟುಂಬಿಕ ದೌರ್ಜನ್ಯದಿಂದ ರೋಸಿ ಹೋಗಿದ್ದ ಗೃಹಿಣಿಯೊಬ್ಬರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆಯು ಶಿವಮೊಗ್ಗ ತಾಲೂಕಿನ ಮಾವಿನಕೆರೆ ಎಂಬಲ್ಲಿ ಸಂಭವಿಸಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಹಿಳೆಯು ಸಾವನ್ನಪ್ಪುತ್ತಿದ್ದಂತೆಯೇ ಗಂಡನ ಮನೆಯವರು ಮೃತದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಎನ್. ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಶಂಕರಳ್ಳಿಯ ನಿವಾಸಿ ಈಶ್ವರಪ್ಪ ಎಂಬವರ ಪುತ್ರಿ 30 ವರ್ಷದ ಪೂಜಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮೂರು ವರ್ಷಗಳ ಹಿಂದೆ ಮೃತ ಪೂಜಾ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬವರ ಜೊತೆ ಮದುವೆಯಾಗಿದ್ದರು. ಈ ದಂಪತಿಗೆ ಮೂರು ವರ್ಷದ ಗಂಡು ಮಗು ಕೂಡ ಇದೆ.
ಪತಿಯ ಮನೆಯಲ್ಲಿ ಪೂಜಾ ನಿತ್ಯ ಕಿರುಕುಳ ಅನುಭವಿಸುತ್ತಿದ್ದರು ಎನ್ನಲಾಗಿದೆ. ಪತಿ,ಅತ್ತೆ, ಮಾವ ಹಾಗೂ ಪತಿಯ ಸಹೋದರಿ ಪೂಜಾಳಿಗೆ ಇನ್ನಿಲ್ಲದ ಕಾಟ ನೀಡುತ್ತಿದ್ದರು. ಪತಿ ಮನೆಯವರ ಕಾಟಕ್ಕೆ ಬೇಸತ್ತ ಪೂಜಾ ತವರು ಮನೆಗೆ ತೆರಳಿದ್ದರು.
Also Read : ಕಾಂಗ್ರೆಸ್ ಶಾಸಕನ ಪುತ್ರನಿಗೆ ತನ್ನ ಹೆಸರನ್ನೇ ನಾಮಕರಣ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್
ಹಾಗೂ ತವರು ಮನೆಯಲ್ಲಿ ತನಗೆ ಪತಿಯ ಕುಟುಂಬದವರಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ. ಪುತ್ರಿಯನ್ನು ಸಮಾಧಾನ ಪಡಿಸಿದ ತವರು ಮನೆಯವರು ಪುನಃ ಪೂಜಾಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು.
ಪತಿ ಮನೆಗೆ ಮರಳಿದ ಪೂಜಾ ಗಂಡನ ಮನೆಯವರ ಕಾಟ ಸಹಿಸಲು ಸಾಧ್ಯವಾಗದೇ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕೂಡಲೇ ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಪೂಜಾ ಮೃತಪಟ್ಟಿದ್ದು ಈ ವಿಚಾರ ತಿಳಿಯುತ್ತಿದ್ದಂತೆಯೇ ಪತ್ನಿ ಪೂಜಾಳ ಮೃತದೇಹ ಹಾಗೂ ಪುಟ್ಟ ಕಂದಮ್ಮನನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪತಿ ಶರತ್ ಹಾಗೂ ಕುಟುಂಬಸ್ಥರು ಕಾಲ್ಕಿತ್ತಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎನ್ಆರ್ಪುರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Also Read : ಸರಕಾರಿ ಕಚೇರಿಗಳಲ್ಲಿ ಇನ್ಮುಂದೆ ಕೇವಲ ನಂದಿನಿ ತಿನಿಸು : ಪ್ಲಾಸ್ಟಿಕ್ ಬಾಟಲಿ ಬಳಕೆಯೂ ನಿಷೇಧ
Shivamogga Wife dies in hospital Husband flees leaving wife body and child in hospital



