ಡಿಜಿಟಲ್ ಅರೆಸ್ಟ್ ರೂಪದಲ್ಲಿ ಮಂಗಳೂರಿನ ವೃದ್ಧೆಗೆ ₹17 ಲಕ್ಷ ಪಂಗನಾಮ : ಪೊಲೀಸರ ಸಮಯಪ್ರಜ್ಞೆಯಿಂದ ಮರಳಿ ಬಂತು ಹಣ

Mangaluru Lady Digital Arrest : ಡಿಜಿಟಲ್ ಅರೆಸ್ಟ್ ನೆಪದಲ್ಲಿ ಮಂಗಳೂರಿನ ವೃದ್ಧೆಯೊಬ್ಬರನ್ನು ಖದೀಮರು ವಂಚಿಸಿ ಬರೋಬ್ಬರಿ 17 ಲಕ್ಷ ರೂಪಾಯಿಗಳನ್ನು ಪೀಕಲು ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಮಂಗಳೂರಿನ ಬಿಜೈ ನಿವಾಸಿಯಾಗಿರುವ 79 ವರ್ಷದ ಅಲೋಶಿಯಾ ಪಿಂಟೋ ಎಂಬವರು ಸೈಬರ್ ಖದೀಮರ ವಂಚನೆಗೆ ಬಲಿಯಾಗಿದ್ದಾರೆ. ನ್ಯಾಯಾಧೀಶರ ಸಮವಸ್ತ್ರ ಹಾಗೂ ಮುಂಬೈ ಪೊಲೀಸರ ಸಮವಸ್ತ್ರ ಧರಿಸಿ ಅಲೋಶಿಯಾ ಪಿಂಟೋ ಎಂಬವರಿಗೆ ಖದೀಮರು ಕರೆ ಮಾಡಿದ್ದರು. ನಿಮ್ಮನ್ನು ನಾವು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ವೃದ್ಧೆಗೆ ಖದೀಮರು ಧಮ್ಕಿ ಹಾಕಿದ್ದಾರೆ.
ನೀವು ಈ ಬಂಧನದಿಂದ ಪಾರಾಗಬೇಕು ಎಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್ಬಿಐನಲ್ಲಿ ಡಿಪಾಸಿಟ್ ಮಾಡಬೇಕೆಂದು ಅವರ ಖಾತೆಯ ಸಂಖ್ಯೆ ನೀಡಿದ್ದಾರೆ. ಅಲ್ಲದೇ ವೃದ್ಧೆಗೆ ಪ್ರಕರಣ ಮುಗಿಯುತ್ತಿದ್ದಂತೆಯೇ ಎಲ್ಲಾ ಹಣ ನಿಮ್ಮ ಖಾತೆಗೆ ಪುನಃ ವರ್ಗಾವಣೆಯಾಗುತ್ತದೆ ಎಂದು ನಂಬಿಸಿದ್ದಾರೆ.
ವಂಚಕರ ಜಾಲವನ್ನು ಅರಿಯದ ವೃದ್ಧೆ ತಮ್ಮ ಜೀವಮಾನದ ಉಳಿತಾಯವಾಗಿದ್ದ 17 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಯಿಂದ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದರು. ಬ್ಯಾಂಕ್ಗೆ ತೆರಳಿ ತನ್ನೆಲ್ಲ ಹಣವನ್ನು ವರ್ಗಾಯಿಸಿ ಬಂದು ಪಕ್ಕ ಮನೆಯವರಿಗೆ ವೃದ್ಧೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ : ಆಸ್ಪತ್ರೆಯಲ್ಲಿ ಪತ್ನಿ ಸಾವು, ಹೆಂಡತಿ ಶವ ಹಾಗೂ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪತಿ ಎಸ್ಕೇಪ್
Mangaluru Lady Digital Arrest : ಮರಳಿ ಬಂತು 17 ಲಕ್ಷ ಹಣ
ಪಕ್ಕದ ಮನೆಯವರಿಗೆ ವೃದ್ಧೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಹೇಳಿದ್ದಾರೆ. ಸ್ಥಳೀಯ ಠಾಣೆಗೆ ಪಕ್ಕದ ಮನೆಯವರ ನೆರವಿನೊಂದಿಗೆ ವೃದ್ಧೆ ಅಲೋಶಿಯಾ ಪಿಂಟೋ ದೂರು ನೀಡಿದ್ದರು.
ಕೂಡಲೇ ಗೋಲ್ಡನ್ ಅವರ್ನ ಸದ್ಬಳಕೆ ಮಾಡಿಕೊಂಡ ಪೊಲೀಸರು ಕೂಡಲೇ ಖಾತೆ ಫ್ರೀಜ್ ಮಾಡಿಸಿದ್ದಾರೆ. ಬಳಿಕ ಅಲೋಶಿಯಾ ಪಿಂಟೋ ಖಾತೆಗೆ 17 ಲಕ್ಷ ಹಣ ಮರಳಿ ಬಂದಿದೆ. ಅಕ್ಟೋಬರ್ 23ರಂದು ಈ ಘಟನೆ ನಡೆದಿದ್ದು ಪೊಲೀಸರ ತನಿಖೆ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಪೊಲೀಸ್ ವಶಕ್ಕೆ
ಇನ್ನು ವೃದ್ಧೆ ಅಲೋಶಿಯಾ ಪಿಂಟೋಗೆ ಕರೆ ಮಾಡಿದವರ ಪೈಕಿ ಮಹಿಳೆ ಹಾಗೂ ಪುರುಷರಿಬ್ಬರೂ ಇದ್ದರು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಅಲ್ಲದೇ ಇತ್ತೀಚಿನ ದಿನಗಳಲ್ಲಿ ವೃದ್ಧರನ್ನೇ ಗುರಿಯಾಗಿಸಿ ಡಿಜಿಟಲ್ ಅರೆಸ್ಟ್ ಮಾದರಿಯಲ್ಲಿ ಸಾಕಷ್ಟು ವಂಚನೆ ಪ್ರಕರಣಗಳು ದೇಶಾದ್ಯಂತ ನಡೆಯುತ್ತಿದ್ದು ಈ ರೀತಿಯ ವಂಚಕರ ಜಾಲದಿಂದ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.



