ಮಹಿಳೆಯರೇ! ಈ 8 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ: ವಿಟಮಿನ್ ಡಿ ಕೊರತೆ ನಿಮ್ಮನ್ನು ಕಾಡುತ್ತಿರಬಹುದು
Vitamin D Deficiency In Women: ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಮಹಿಳೆಯುರು ಬಹಳಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಟಮಿನ್ ಗಳ ಕೊರತೆ ಅವರನ್ನು ಹೆಚ್ಚೆಚ್ಚು ಕಾಡುತ್ತಿದೆ.
ಅದರಲ್ಲಿಯೂ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಣಿಸುತ್ತಿದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ಭಾರತದಂತಹ ಹೆಚ್ಚು ಸೂರ್ಯನ ಬೆಳಕು ಇರುವ ದೇಶದಲ್ಲಿಯೂ ವಿಟಮಿನ್ ಡಿ ಯ ಕೊರತೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದೇ ಇರುವಂತಹ ಜೀವನಶೈಲಿಯಾಗಿದೆ.
ಆದರೆ ವಿಟಮಿನ್ ಡಿ ಯ ಕೊರತೆಯಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ವಿಟಮಿನ್ ಡಿ ಯ ಕೊರತೆಯ ಬಗ್ಗೆ ಅಷ್ಟಾಗಿ ಗಮನ ಹರಿಸದಿರುವವರೇ ಹೆಚ್ಚು.
ಇದನ್ನು ಅತ್ಯಂತ ಚಿಕ್ಕ ಸಮಸ್ಯೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ನಿಜವಾಗಿಯೂ ಇದು ಗಂಭೀರ ಸಮಸ್ಯೆಗಳಲ್ಲೊಂದು.
ಮಹಿಳೆಯುರು ಇದರ ಬಗ್ಗೆ ತೋರುವ ನಿರ್ಲಕ್ಷ ಮುಂದೊಂದು ದಿನ ಹೆಚ್ಚಿನ ತೊಂದರೆಗೆ ಈಡಾಗುವಂತೆ ಮಾಡುತ್ತದೆ. ಆದ್ದರಿಂದ ಕೊರತೆಯ ಲಕ್ಷಣಗಳನ್ನು ಆರಂಭದಲ್ಲಿ ಗುರುತಿಸಿ ಸೂಕ್ತ ಔಷಧೋಪಚಾರ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಹಾಗಾದರೆ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯ ಲಕ್ಞಣಗಳು ಯಾವ ರೀತಿಯಲ್ಲಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ನಿರಂತರ ಆಯಾಸ ಮತ್ತು ಸುಸ್ತು
ಸಾಕಷ್ಟು ನಿದ್ರೆ ಮಾಡಿದರೂ ಸಹ ಯಾವಾಗಲೂ ಆಯಾಸ ಹಾಗೂ ಆಲಸ್ಯದಿಂದ ಬಳಲುತ್ತಿದ್ದರೆ ಅದ ವಿಟಮಿನ್ ಡಿ ಕೊರತೆಯ ಲಕ್ಷಣವಾಗಿದೆ.
ಆಯಾಸದ ಮಟ್ಟ ಎಷ್ಟಿರುತ್ತದೆ ಎಂದರೆ ದೈನಂದಿನ ಕೆಲಸವನ್ನು ಪೂರೈಸಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರ ಬಳಿ ಖಂಡಿತ ಹೋಗಿ.
ಪದೇ ಪದೇ ಸೋಂಕಿಗೆ ತುತ್ತಾಗುವುದು
ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
ಇದು ಪದೇ ಪದೇ ಶೀತ, ಜ್ವರ ಮತ್ತು ಇತರ ಸೋಂಕುಗಳಿಗೆ ಕಾರಣವಾಗುತ್ತದೆ.
ಮೂಳೆ ಮತ್ತು ಸ್ನಾಯು ನೋವು
ನಮ್ಮ ದೇಹ ಕ್ಯಾಲ್ಸಿಯಂ ಅಂಶ ಹೀರಿಕೊಳ್ಳಲು ವಿಟಮಿನ್ ಡಿ ಸಹಾಯ ಮಾಡುತ್ತದೆ. ಅದರ ಕೊರತೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಮೃದುವಾಗಿಸುತ್ತದೆ.
ಇದರಿಂದ ಮೂಳೆ ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಖಿನ್ನತೆ ಮತ್ತು ಮನಸ್ಥಿತಿ ಬದಲಾವಣೆ
ಯಾವುದೇ ಸ್ಪಷ್ಟ ಕಾರಣವಿಲ್ಲದೆ ನೀವು ದುಃಖ, ಕಿರಿಕಿರಿ ಅಥವಾ ಒತ್ತಡವನ್ನು ಅನುಭವಿಸುತ್ತೀರಾ? ವಿಟಮಿನ್ ಡಿ ಕೊರತೆಯು ಮೆದುಳಿನ ಕಾರ್ಯಕ್ಕೆ ನೇರವಾಗಿ ಸಂಬಂಧಿಸಿದೆ.
ವಿಶೇಷವಾಗಿ ಮನಸ್ಥಿತಿಯನ್ನು ನಿಯಂತ್ರಿಸುವ ಹಾರ್ಮೋನುಗಳಿಗೆ. ಆದ್ದರಿಂದ, ವಿಟಮಿನ್ ಡಿ ಕೊರತೆಯು ಖಿನ್ನತೆ ಹಾಗೂ ಮನಸ್ಥಿತಿ ಬದಲಾವಣೆಗೆ ನೇರವಾಗಿ ಸಂಬಂಧಿಸಿದೆ.
ಕೂದಲು ಉದುರುವಿಕೆ
ಕೆಲವರು ತಮ್ಮ ಕೂದಲು ಬಹಳಷ್ಟು ಉದುರುತ್ತದೆ ಎಂದು ದೂರುವುದನ್ನು ಕೇಳಿರಬಹುದು. ಅದು ಹಲವು ಕಾರಣಗಳಿಂದ ಉಂಟಾಗಬಹುದು, ಆದರೆ ಒತ್ತಡ ಮತ್ತು ಪೌಷ್ಟಿಕಾಂಶದ ಕೊರತೆಯ ಜೊತೆಗೆ, ವಿಟಮಿನ್ ಡಿ ಕೊರತೆಯಿಂದಲೂ ಕೂದಲು ಉದುರುತ್ತದೆ.
ಕೂದಲುಗಳ ಬೇರುಗಳಲ್ಲಿರುವ ಕಿರುಚೀಲಗಳಿಗೆ ಶಕ್ತಿ ತುಂಬಲು ವಿಟಮಿನ್ ಡಿ ಅತ್ಯಗತ್ಯ. ಅದರ ಕೊರತೆಯು ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಮೂಳೆ ಮುರಿತ
ವಿಟಮಿನ್ ಡಿ ಯ ದೀರ್ಘಕಾಲದ ಕೊರತೆಯಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ. ಇದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅದು ಕ್ರಮೇಣ ಮೂಳೆ ಮುರಿತ ಸಮಸ್ಯೆಗೆ ಕಾರಣವಾಗುತ್ತದೆ.
ವಿಶೇಷವಾಗಿ ಬೆನ್ನುಮೂಳೆ, ಸೊಂಟ ಮತ್ತು ಮಣಿಕಟ್ಟುಗಳ ಮುರಿತದಂತಹ ಅಪಾಯ ಹೆಚ್ಚು.
ಗಾಯ ವಾಸಿಯಾಗದೇ ಇರುವುದು
ನಿಮ್ಮ ದೇಹದಲ್ಲಾದ ಗಾಯ ಎಷ್ಟೇ ಔಷಧೋಪಚಾರ ಮಾಡಿದರೂ ವಾಸಿಯಾಗದೇ ಉಳಿಯುತ್ತಿದ್ದರೆ ಅದಕ್ಕೆ ವಿಟಮಿನ್ ಡಿ ಯ ಕೊರತೆಯೂ ಕಾರಣವಾಗಿರಬಹುದು.
ಏಕೆಂದರೆ ಹೊಸ ಚರ್ಮದ ಕೋಶಗಳ ರಚನೆ ಮತ್ತು ಗುಣಪಡಿಸುವ ಪ್ರಕ್ರಿಯೆಯಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ.
ಸ್ನಾಯು ಸೆಳೆತ
ಪದೇ ಪದೇ ಸ್ನಾಯುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ವಿಟಮಿನ್ ಡಿ ಕೊರತೆಯೂ ಆಗಿರಬಹುದು. ಏಕೆಂದರೆ ಸ್ನಾಯುಗಳನ್ನು ಬಲಪಡಿಸುವ ಕಾರ್ಯವನ್ನು ವಿಟಮಿನ್ ಡಿ ಮಾಡುತ್ತದೆ.
ಇದನ್ನೂ ಓದಿ: ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಲೇ ಬೇಕಾದ ಆರೋಗ್ಯ ತಪಾಸಣೆಗಳು



