‘ಬಿಹಾರ ಚುನಾವಣೆ ಬೆನ್ನಲ್ಲೇ ನವೆಂಬರ್ ಕ್ರಾಂತಿ ಠುಸ್​..!’ : ಹೀಗಂದ್ರು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​

ಬಿಹಾರ ಚುನಾವಣೆಯ ಬಳಿಕ ರಾಜ್ಯದಲ್ಲಿ ನವೆಂಬರ್​ ಕ್ರಾಂತಿಗೆ ತಿಲಾಂಜಲಿ ಹಾಡಲಾಗಿದೆ ಎಂಬ ವಿಚಾರವಾಗಿ ಇಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಹಾರ ಚುನಾವಣೆಗೂ ನವೆಂಬರ್​ ಕ್ರಾಂತಿಯೂ ಯಾವುದೇ ಸಂಬಂಧ ಇಲ್ಲ. ಬಿಹಾರದ ರಾಜಕಾರಣವೇ ಬೇರೆ, ನಮ್ಮ ರಾಜ್ಯದ ರಾಜಕಾರಣವೇ ಬೇರೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗವು ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಅನುಕೂಲ ಮಾಡಿಕೊಟ್ಟಿರುವುದನ್ನು ರಾಹುಲ್​ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಹತ್ತಿರದಿಂದ ನೋಡಿದ್ದಾರೆ. ಚುನಾವಣೆಗೆ ಇನ್ನೇನು 4 ದಿನ ಇರುವಾಗ ಮಹಿಳೆಯರ ಖಾತೆಗೆ 10 ಸಾವಿರ ರೂಪಾಯಿ ಹಣ ಜಮೆಯಾಗಿತ್ತು. ಸರ್ಕಾರದ ದುಡ್ಡಲ್ಲಿ ಮತವನ್ನು ಖರೀದಿ ಮಾಡಿ ಎನ್​ಡಿಎ ಮೈತ್ರಿಕೂಟ ಈ ಚುನಾವಣೆ ಗೆದ್ದಿದೆ. ಇದಕ್ಕೆ ಚುನಾವಣಾ ಆಯೋಗ ಕೂಡ ಬೆಂಬಲ ನೀಡಿದೆ ಎಂದು ಕಿಡಿಕಾರಿದರು.

ಬಿಹಾರ ಚುನಾವಣೆಯನ್ನೇ ಮಾದರಿಯಾಗಿಟ್ಟುಕೊಂಡು ಭವಿಷ್ಯದಲ್ಲಿ ಎಲ್ಲರೂ ಇದೇ ರೀತಿ ಮಾಡಬಹುದು. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಯಾವುದೋ ಒಂದು ಯೋಜನೆ ಘೋಷಣೆ ಮಾಡುತ್ತಾರೆ. ಎಲ್ಲರ ಖಾತೆಗೆ ಸರ್ಕಾರದಿಂದಲೇ ಹತ್ತು, ಇಪ್ಪತ್ತು ಸಾವಿರ ಹಣ ಹಾಕಿದರೆ ಅದನ್ನು ನ್ಯಾಯಯುತ ಚುನಾವಣೆ ಎಂದು ಹೇಗೆ ಕರೆಯಲು ಸಾಧ್ಯ ? ಮತ ಖರೀದಿಗೆ ಚುನಾವಣಾಆಯೋಗವೇ ಸಹಾಯ ಮಾಡಿದಂತಿದೆ ಎಂದು ಗುಡುಗಿದರು. ಇದರ ಜೊತೆಯಲ್ಲಿ ನಮ್ಮಿಂದಲೂ ಸೀಟು ಹಂಚಿಕೆ, ಸಿಎಂ ಅಭ್ಯರ್ಥಿ ಹೆಸರು ಘೋಷಣೆಗಳ ವಿಚಾರದಲ್ಲಿ ಗೊಂದಲ ಮೂಡಿದ್ದು ನಮ್ಮ ತಪ್ಪನ್ನು ಪರಾಮರ್ಶಿಸುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೋಲಿನ ಕಹಿ ; ರಾಜ್ಯದಲ್ಲಿ ‘ನವೆಂಬ‌ರ್ ಕ್ರಾಂತಿ’ಗೆ ತಿಲಾಂಜಲಿ

ಇದೇ ವೇಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿಯೂ ಮಾತನಾಡಿದ ಅವರು, ಇದೊಂದು ಪೂರ್ವನಿಯೋಜಿತ ಭೇಟಿ. ಇದಕ್ಕೂ ಬಿಹಾರ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಚುನಾವಣೆಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಉತ್ತರ ಭಾರತದಲ್ಲಿ ಬಿಜೆಪಿ ಹಿಂದುತ್ವ ಅಸ್ತ್ರ ಪ್ರಯೋಗಿಸುತ್ತೆ. ಆದರೆ ದಕ್ಷಿಣ ಭಾರತದಲ್ಲಿ ಇದು ನಡೆಯುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಗೆ ಹಿಂದುತ್ವ ಅಸ್ತ್ರ ಇಟ್ಟುಕೊಂಡು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories